ಭಾನುವಾರ, ಡಿಸೆಂಬರ್ 8, 2019
25 °C
ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್‌ ತಾಕೀತು

ಅತ್ಯಾಚಾರ ಸಂತ್ರಸ್ತರ ಗುರುತು ಬಹಿರಂಗ ಬೇಡ: ಸುಪ್ರೀಂಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ‘ಅತ್ಯಾಚಾರಕ್ಕೆ ಒಳಗಾದವರ ಗುರುತನ್ನು ಯಾವುದೇ ರೀತಿಯಲ್ಲಿಯೂ ಬಹಿರಂಗಪಡಿಸಬಾರದು. ಸಂತ್ರಸ್ತೆಗೆ ನ್ಯಾಯ ಕೊಡಿಸುವ ಉದ್ದೇಶದ ಕಾರಣವೊಡ್ಡಿ ಸಹ ಗುರುತು ಬಹಿರಂಗ ಸಲ್ಲದು’ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

‘ಲೈಂಗಿಕ ದೌರ್ಜನ್ಯದಂತಹ ಕ್ರೌರ್ಯಕ್ಕೆ ಒಳಗಾದವರಿಗೆ ಸಂಬಂಧಿಸಿದ ಗಂಭೀರ ವಿಷಯ ಇದು. ಹೀಗಾಗಿ ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್ ಹಾಗೂ ದೀಪಕ್‌ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠ ಪ್ರತಿಪಾದಿಸಿದೆ.

‘ಅತ್ಯಾಚಾರಕ್ಕೆ ಒಳಗಾದವರನ್ನು ಸಮಾಜದಲ್ಲಿ ಅಸ್ಪೃಶ್ಯರು ಹಾಗೂ ಬಹಿಷ್ಕೃತರಂತೆ ನೋಡಲಾಗುತ್ತಿದೆ. ಹೀಗಾಗಿ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದರೆ ಎರಡು ವರ್ಷ ಅವಧಿಯ ಜೈಲು ಶಿಕ್ಷೆ ವಿಧಿಸಲು ಭಾರತೀಯ ದಂಡ ಸಂಹಿತೆಯಲ್ಲಿ ಅವಕಾಶ ಇದೆ’ ಎಂದೂ ನ್ಯಾಯಪೀಠ ಎಚ್ಚರಿಸಿದೆ.

‘ಸಂತ್ರಸ್ತೆಯ ಹೆಸರು ಅಥವಾ ಆಕೆಯನ್ನು ಸಾರ್ವಜನಿಕರು ಗುರುತಿಸಲು ಸಹಕಾರವಾಗುವಂತಹ ಅಂಶಗಳನ್ನು ಯಾವುದೇ ಮಾಧ್ಯಮ ಮುದ್ರಿಸಬಾರದು ಅಥವಾ ಪ್ರಚುರಪಡಿಸಬಾರದು. ಸಾಮಾಜಿಕ ಮಾಧ್ಯಮವೂ ಇದಕ್ಕೆ ಹೊರತಲ್ಲ’ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದರು.

‘ಸಂತ್ರಸ್ತೆ ಒಂದು ವೇಳೆ ಮಾನಸಿಕ ಅಸ್ವಸ್ಥೆಯಾಗಿದ್ದರೆ ಇಲ್ಲವೇ ಮೃತಪಟ್ಟಿದ್ದರೆ ಅಂಥವರ ಹೆಸರನ್ನು ಸಹ ಪ್ರತಿಭಟನೆಯ ಸಂಕೇತವಾಗಿ ಬಳಸಿಕೊಳ್ಳಬಾರದು. ಜನರಲ್ಲಿ ಅಭಿಪ್ರಾಯ ಮೂಡಿಸಲು ಇಲ್ಲವೇ ಭಾವನೆ ಕೆರಳಿಸುವ ಸಲುವಾಗಿ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸುವ ಅಗತ್ಯವೇ ಇಲ್ಲ’ ಎಂದೂ ಹೇಳಿದರು.

‘ಇಂತಹ ಪ್ರಕರಣಗಳಲ್ಲಿ ದಾಖಲಿ ಸಿರುವ ಎಫ್‌ಐಆರ್‌ಗಳನ್ನು ಸಹ ಸಾರ್ವಜನಿಕ ವಲಯದಲ್ಲಿ ಪ್ರಚುರಪಡಿಸಬಾರದು. ಘಟನೆ ಕುರಿತಂತೆ ವಿವರಣೆ ನೀಡಲೇಬೇಕಿದ್ದರೆ ಸಂತ್ರಸ್ತೆಗೆ ಕಲ್ಪಿತ ಹೆಸರನ್ನು ಬಳಸಬೇಕು’ ಎಂದು ನ್ಯಾಯಪೀಠ ಪೊಲೀಸರು ಹಾಗೂ ಇತರ ಸೂಚಿಸಿತು.

ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ಗೆ ನೆರವು ನೀಡುತ್ತಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, ‘ಇಂತಹ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳು ಸಮಾನಾಂತರ ವಿಚಾರಣೆ ನಡೆಸುತ್ತಿವೆ. ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೇಗೆ ವರದಿ ಮಾಡಬೇಕು ಎಂಬ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕು’ ಎಂದರು.

ಕೋರ್ಟ್‌ ಹೇಳಿದ್ದು...

* ಸಂತ್ರಸ್ತೆ ವಯಸ್ಕಳಾಗಿದ್ದು, ಸಾರ್ವಜನಿಕವಾಗಿ ತನ್ನ ಅಭಿಪ್ರಾಯ ಹಂಚಿಕೊಳ್ಳಲು ಇಚ್ಛಿಸಿದರೆ ಅದಕ್ಕೆ ಯಾರದೂ ಆಕ್ಷೇಪವಿರದು

* ಅಗತ್ಯ ಕಂಡು ಬಂದಲ್ಲಿ ದಾಖಲೆಗಳಲ್ಲಿರುವ ಸಂತ್ರಸ್ತೆಯ ಹೆಸರನ್ನು ಅಧಿಕಾರಿಗಳು ತೆಗೆದು ಹಾಕಬಹುದು

* ಸಂತ್ರಸ್ತೆ ಗುರುತನ್ನು ಆಕೆಯ ಸಂಬಂಧಿ ಬಹಿರಂಗಪಡಿಸಲು ಇಚ್ಛಿಸಿದರೆ, ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿ, ಅವರಿಂದ ಅನುಮತಿ ಪಡೆಯಬೇಕು

* ಎಲ್ಲ ರಾಜ್ಯಗಳು ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಕೀಯ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು. ಸಂತ್ರಸ್ತೆಗಾಗಿ ವಿಡಿಯೊ ಕಾನ್ಫರೆನ್ಸ್‌ ಸೌಲಭ್ಯ ಒದಗಿಸಬೇಕು. ಈ ಸೌಲಭ್ಯಗಳನ್ನು ಒಂದು ವರ್ಷದ ಒಳಗಾಗಿ ಒದಗಿಸಬೇಕು

ಮಾರ್ಗದರ್ಶಿ ಸೂತ್ರ ರಚನೆ: ಕೇಂದ್ರಕ್ಕೆ ಸೂಚನೆ

ಗೂಗಲ್‌, ಯೂಟ್ಯೂಬ್‌, ಫೇಸ್‌ಬುಕ್‌, ಮೈಕ್ರೊಸಾಫ್ಟ್‌ ಹಾಗೂ ವ್ಯಾಟ್ಸ್‌ಆ್ಯಪ್‌ನಂತಹ ಮಾಧ್ಯಮಗಳ ಮೂಲಕ ಮಕ್ಕಳನ್ನು ಒಳಗೊಂಡ ಅಶ್ಲೀಲ ಚಲನಚಿತ್ರಗಳ ನಿರ್ಮಾಣ, ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ಚಿತ್ರಗಳ ಪ್ರಕಟಣೆ ತಡೆಗಟ್ಟಲು ಸೂಕ್ತ ಮಾರ್ಗದರ್ಶಿಸೂತ್ರಗಳನ್ನು ಸಿದ್ಧಪಡಿಸಬೇಕು. ಇವುಗಳನ್ನು ಎರಡು ವಾರದ ಒಳಗಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸೂಚನೆ ನೀಡಿದೆ.

‘ಅಶ್ಲೀಲ ವಿಷಯಗಳನ್ನು ಒಳಗೊಂಡ ವೆಬ್‌ಸೈಟ್‌ಗಳನ್ನು ರದ್ದು ಮಾಡಬೇಕು. ಅಂತಹ ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಸಾಕ್ಷ್ಯಗಳನ್ನು ಸಹ ಸಂಗ್ರಹಿಸಬೇಕು ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್‌ ಹಾಗೂ ಯು.ಯು.ಲಲಿತ್‌ ಅವರನ್ನು ಒಳಗೊಂಡ ನ್ಯಾಯಪೀಠ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರಿಗೆ ಸೂಚಿಸಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು