‘ಅತ್ಯಾಚಾರಿಗಳು ಭೂಮಿಗೆ ಭಾರ,ಬದುಕುವ ಯೋಗ್ಯತೆಯಿಲ್ಲ’

7
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್‌ ಆಕ್ರೋಶ

‘ಅತ್ಯಾಚಾರಿಗಳು ಭೂಮಿಗೆ ಭಾರ,ಬದುಕುವ ಯೋಗ್ಯತೆಯಿಲ್ಲ’

Published:
Updated:
ಶಿವರಾಜ್‌ ಸಿಂಗ್‌ ಚೌಹಾಣ್‌

ಭೋಪಾಲ್‌: ‘ಅತ್ಯಾಚಾರಿಗಳು ಭೂಮಿಗೆ ಭಾರವಾಗಿದ್ದು, ಅವರಿಗೆ ಬದುಕುವ ಯೋಗ್ಯತೆಯೇ ಇಲ್ಲ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂದ್‌ಸೌರ್‌ನಲ್ಲಿ 8 ವರ್ಷದ ಬಾಲಕಿಯನ್ನು ಶಾಲೆಯ ಹೊರಭಾಗದಿಂದ ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣವನ್ನು ಖಂಡಿಸಿ ಅವರು ಈ ಹೇಳಿಕೆ ನೀಡಿದರು.

‘ಅತ್ಯಾಚಾರ ಪ್ರಕರಣಗಳ ವಿಚಾರಣೆಗಾಗಿ ರಾಜ್ಯದಲ್ಲಿ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಕೂಡ ಇದೇ ರೀತಿ ಕ್ರಮ ಕೈಗೊಂಡರೆ, ಅಪರಾಧಿಗಳಿಗೆ ಆದಷ್ಟು ಬೇಗ ಕಠಿಣ ಶಿಕ್ಷೆ ವಿಧಿಸಲು ನೆರವಾಗುತ್ತದೆ’ ಎಂದರು.

‘ಮಂದ್‌ಸೌರ್‌ನಲ್ಲಿ ನಡೆದ ಪ್ರಕರಣವು ಅತ್ಯಂತ ಬೇಸರ ಉಂಟುಮಾಡಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರ ನೆರವು ನೀಡಲಿದೆ, ಬಾಲಕಿಯ ಪರಿಸ್ಥಿತಿ ಸುಧಾರಿಸಿದ್ದು, ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ’ ಎಂದು ಮಾಹಿತಿ ನೀಡಿದರು.

‘ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಆದಷ್ಟು ಬೇಗ ವಿಚಾರಣೆ ನಡೆಸಿ, ಆತನಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದರು.

ಮಂಗಳವಾರ ಸಂಜೆ ವೇಳೆ ಮನೆಗೆ ತೆರಳಲು ಕಾಯುತ್ತಿದ್ದ ಬಾಲಕಿಯನ್ನು 20 ವರ್ಷದ ಇರ್ಫಾನ್‌ ಎಂಬಾತ ಅಪಹರಿಸಿ, ಲಕ್ಷ್ಮಣ್‌ ದರ್ವಾಜಾದಲ್ಲಿ ಅತ್ಯಾಚಾರವೆಸಗಿದ್ದ. ಚಾಕುವಿನಿಂದ ಬಾಲಕಿಯ ಕತ್ತು ಕೊಯ್ದು ಕೊಲ್ಲಲು ಮುಂದಾಗಿದ್ದನು. ಬುಧವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ.

12 ವರ್ಷ ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅತ್ಯಾಚಾರವೆಸಗಿದ್ದು ಸಾಬೀತಾದರೆ, ಅಂತಹವರಿಗೆ ಗಲ್ಲುಶಿಕ್ಷೆ ವಿಧಿಸುವ ಮಸೂದೆಯನ್ನು ಮಧ್ಯಪ್ರದೇಶ ವಿಧಾನಸಭೆಯು ಕಳೆದ ವರ್ಷ ಅಂಗೀಕರಿಸಿತ್ತು.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !