ತಲ್ಲಣ ಮೂಡಿಸಿದ ಆರ್‌ಬಿಐ ನಡೆ, ಷೇರು, ಕರೆನ್ಸಿ ಪೇಟೆಯ ಪಾಲಿಗೆ ‘ಕಪ್ಪು ಶುಕ್ರವಾರ’

7
ಹುಸಿಯಾದ ಮಾರುಕಟ್ಟೆಯ ನಿರೀಕ್ಷೆ

ತಲ್ಲಣ ಮೂಡಿಸಿದ ಆರ್‌ಬಿಐ ನಡೆ, ಷೇರು, ಕರೆನ್ಸಿ ಪೇಟೆಯ ಪಾಲಿಗೆ ‘ಕಪ್ಪು ಶುಕ್ರವಾರ’

Published:
Updated:

ಮುಂಬೈ: ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಲಿದೆ ಎನ್ನುವ ಬಂಡವಾಳ ಮಾರುಕಟ್ಟೆಯ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿ ಮಾಡಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌, ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಅಚ್ಚರಿ ಮೂಡಿಸಿದೆ.

ಆರ್‌ಬಿಐನ ಈ ಅನಿರೀಕ್ಷಿತ ನಿರ್ಧಾರವು, ಷೇರುಪೇಟೆ ಮತ್ತು ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿತು. ಬಂಡವಾಳ ಮಾರುಕಟ್ಟೆಯ ಪಾಲಿಗೆ ‘ಕಪ್ಪು ಶುಕ್ರವಾರ’ವಾಗಿ ಪರಿಣಮಿಸಿತು. ಆರ್‌ಬಿಐನ ಈ ನಿಲುವು ಅಪಾಯಕಾರಿ ನಡೆಯಾಗಿದೆ. ಕರೆನ್ಸಿ ಮತ್ತು ಇತರ ಹಣಕಾಸು ಮಾರುಕಟ್ಟೆಗಳಲ್ಲಿ ತೀವ್ರ ಏರಿಳಿತ ಕಂಡುಬರಲಿದೆ ಎಂದು ಬ್ಯಾಂಕ್‌ ಮುಖ್ಯಸ್ಥರು ವಿಶ್ಲೇಷಿಸಿದ್ದಾರೆ.

ಷೇರುಪೇಟೆ ಕುಸಿತ: ಸಂವೇದಿ ಸೂಚ್ಯಂಕವು 792 ಅಂಶಗಳಷ್ಟು ಕುಸಿದು ಆರು ತಿಂಗಳ ಹಿಂದಿನ ಮಟ್ಟವಾದ 34,376 ಅಂಶಗಳಿಗೆ ತಲುಪಿತು. ಏಪ್ರಿಲ್‌ 23 ನಂತರದ ಕನಿಷ್ಠ ಅಂಶ ಇದಾಗಿದೆ.

ವಹಿವಾಟುದಾರರ ನಿರೀಕ್ಷೆ ಹುಸಿಯಾಗಿದ್ದರಿಂದ ಷೇರುಗಳಲ್ಲಿ ತೀವ್ರ ಮಾರಾಟ ಕಂಡು ಬಂದಿತು. ಸತತ ಮೂರನೇ ದಿನವೂ ಷೇರುಪೇಟೆ ವಹಿವಾಟಿನ ನಷ್ಟ ಮುಂದುವರೆಯಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 282 ಅಂಶಗಳಿಗೆ ಎರವಾಗಿ 10,316 ಅಂಶಗಳಿಗೆ ಇಳಿಯಿತು.

ಷೇರುಗಳ ನಷ್ಟ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ಷೇರುಗಳು ಶೇ 25.18ರಷ್ಟು ನಷ್ಟಕ್ಕೆ ಗುರಿಯಾದವು. ಒಎನ್‌ಜಿಸಿ ಷೇರು ಬೆಲೆ ಶೇ 15.93 ಮತ್ತು ಆರ್‌ಐಎಲ್‌ ಶೇ 6.31ರಷ್ಟು ಕುಸಿತ ಕಂಡಿತು.

ಇನ್ಫೊಸಿಸ್‌ ಶೇ 2.19 ಮತ್ತು ಟಿಸಿಎಸ್‌ ಮಾತ್ರ ಶೇ 1.88ರಷ್ಟು ಚೇತರಿಕೆ ಕಂಡವು.

ರೂಪಾಯಿ ನಷ್ಟ:  ಆರ್‌ಬಿಐನ ನಿರ್ಧಾರದ ಬೆನ್ನಲ್ಲೆ, ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು ಇದೇ ಮೊದಲ ಬಾರಿಗೆ 74ರ ಗಡಿ ದಾಟಿತು. ಇದರಿಂದ ಆಮದು ದುಬಾರಿಯಾಗಲಿದೆ. ಚಾಲ್ತಿ
ಖಾತೆ ಕೊರತೆ (ಸಿಎಡಿ) ಇನ್ನಷ್ಟು ಹೆಚ್ಚಲಿದೆ.

ಡಾಲರ್‌ ಎದುರು ರೂಪಾಯಿ ವಿನಿಮಯ ದರದಲ್ಲಿನ ದಾಖಲೆ ಕುಸಿತದ ಕಾರಣಕ್ಕೆ ಬಡ್ಡಿ ದರ ಹೆಚ್ಚಳವು ಶೇ 0.50ರಷ್ಟು ಇರಬಹುದು ಎಂದೂ ಊಹಿಸಲಾಗಿತ್ತು. ಇಂತಹ ನಿರೀಕ್ಷೆಗಳನ್ನೆಲ್ಲ ಆರ್‌ಬಿಐ ತಲೆಕೆಳಗು ಮಾಡಿದೆ.  ಆರ್‌ಬಿಐ, ಬ್ಯಾಂಕ್‌ಗಳಿಗೆ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರ (ರೆಪೊ) ಶೇ 6.50 ಮತ್ತು ಹೆಚ್ಚುವರಿ ಹಣದ ಹರಿವಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವನ್ನು (ರಿವರ್ಸ್‌ ರೆಪೊ) ಶೇ 6.25 ಬದಲಾಯಿಸಿಲ್ಲ.

74ರ ಗಡಿ ದಾಟಿದ ₹

ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು ಶುಕ್ರವಾರ ಇದೇ ಮೊದಲ ಬಾರಿಗೆ 74ರ ಗಡಿ ದಾಟಿತು.  ಹಣಕಾಸು ನೀತಿ ಪ್ರಕಟಗೊಳ್ಳುತ್ತಿದ್ದಂತೆ ರೂಪಾಯಿ ದರವು 65 ಪೈಸೆಗಳಷ್ಟು ಕುಸಿತ ಕಂಡು 74.23ಕ್ಕೆ ಇಳಿದಿತ್ತು. ದಿನದಂತ್ಯದಲ್ಲಿ 18 ಪೈಸೆಗಳಷ್ಟು ನಷ್ಟ ಕಂಡು 73.77ಕ್ಕೆ ಇಳಿದಿತ್ತು.

ರಫ್ತುದಾರರಿಗೆ ನಷ್ಟ

ರೂಪಾಯಿ ಅಪಮೌಲ್ಯಗೊಂಡಷ್ಟೂ, ಆಮದು ಮಾಡಿಕೊಳ್ಳುವ ಭಾರಿ ಯಂತ್ರೋಪಕರಣ, ಕಚ್ಚಾ ಸರಕು ಮತ್ತು ಸೇವೆಗಳಿಗೆ ವಿದೇಶಿ ಕರೆನ್ಸಿಗಳಲ್ಲಿ ಹಣ ಪಾವತಿಸುವ ರಫ್ತುದಾರರಿಗೆ ನಷ್ಟ ಉಂಟಾಗಲಿದೆ ಎಂದು  ಭಾರತೀಯ ರಫ್ತುದಾರರ ಸಂಘಟನೆ ಆತಂಕ ವ್ಯಕ್ತಪಡಿಸಿದೆ.

ಪರಿಣಾಮಗಳು

ಯಥಾಸ್ಥಿತಿ ನಿರ್ಧಾರದ ಹೊರತಾಗಿಯೂ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆ ಇದೆ. ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಈಗಾಗಲೇ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿವೆ. ಇದು ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳದ ಸ್ಪಷ್ಟ ಸಂಕೇತವಾಗಿದೆ.

* ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ದೇಶಗಳ ಕರೆನ್ಸಿಗಳಿಗೆ ಹೋಲಿಸಿದರೆ, ರೂಪಾಯಿ ವಿನಿಮಯ ದರ ಉತ್ತಮ ಮಟ್ಟದಲ್ಲಿಯೇ ಇದೆ

–ಉರ್ಜಿತ್‌ ಪಟೇಲ್‌, ಆರ್‌ಬಿಐ ಗವರ್ನರ್‌ 

ಆರ್‌ಬಿಐ ನಿರೀಕ್ಷೆ

* ಆರ್ಥಿಕ ವೃದ್ಧಿ ದರ ಶೇ 7.4ರಷ್ಟು ಹೆಚ್ಚಳ ನಿರೀಕ್ಷೆ

* ಕರೆನ್ಸಿ ಸಮರ, ಸ್ವಯಂ ರಕ್ಷಣಾ ನೀತಿಯಿಂದ ದೇಶಿ ಆರ್ಥಿಕತೆಗೆ ಬೆದರಿಕೆ

* ವರ್ಷಾಂತ್ಯದಲ್ಲಿ ಹಣದುಬ್ಬರ ಶೇ 4.5ಕ್ಕೆ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !