ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐನ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ರಾಜೀನಾಮೆ

Last Updated 24 ಜೂನ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸ್ವಾಯತ್ತತೆಯ ಪ್ರಬಲ ಪ್ರತಿಪಾದಕರಾಗಿದ್ದ, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುವಂತೆ ಮಾಡಿದ್ದ ಡೆಪ್ಯುಟಿ ಗವರ್ನರ್‌ ವಿರಲ್ ಆಚಾ‌ರ್ಯ (45) ತಮ್ಮ ಮೂರುವರ್ಷಗಳ ಅಧಿಕಾರಾವಧಿ ಮುಗಿಯುವುದಕ್ಕೂ 6 ತಿಂಗಳ ಮೊದಲೇ ದಿಢೀರನೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರೀಯ ಬ್ಯಾಂಕ್‌ನಲ್ಲಿ ಈ ರೀತಿ ಅವಧಿಗೂ ಮೊದಲೇ ಹುದ್ದೆ ತೊರೆದ ಎರಡನೇ ವ್ಯಕ್ತಿ ಇವರಾಗಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳಲು 9 ತಿಂಗಳು ಬಾಕಿ ಇರುವಾಗಲೇ ರಾಜೀನಾಮೆ ನೀಡಿದ್ದರು.

ಆರ್‌ಬಿಐನ ಸ್ವಾಯತ್ತತೆಗೆ ಅಡ್ಡಿಪಡಿಸುವ ಸರ್ಕಾರದ ಯತ್ನವನ್ನು ವಿರೋಧಿಸುತ್ತಲೇ ಬಂದಿದ್ದ ವಿರಲ್‌, ಆರ್ಥಿಕ ವೃದ್ಧಿ ಮತ್ತು ಹಣದುಬ್ಬರ ಕುರಿತು ಗವರ್ನರ್‌ ಶಕ್ತಿಕಾಂತ್‌ ದಾಸ್ ಅವರ ಜತೆಗೂ ಭಿನ್ನಾಭಿಪ್ರಾಯ ತಳೆದಿದ್ದರು.

ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣಿಗೆಯು ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಾಜೀನಾಮೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್‌ಬಿಐ ತಿಳಿಸಿದೆ.

ದಾಸ್‌ ಅಧಿಕಾರಾವಧಿಯಲ್ಲಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಈಗ ಒಟ್ಟಾಗಿ ಕೆಲಸ ಮಾಡುತ್ತಿವೆ. ಬಜೆಟ್‌ ಮಂಡನೆ ಮೊದಲೇ ಆಚಾರ್ಯ ಅವರ ರಾಜೀನಾಮೆ ನಿರ್ಧಾರ ಪ್ರಕಟಗೊಂಡಿರುವುದು ಮಹತ್ವದ ವಿದ್ಯಮಾನವಾಗಿದೆ.

‘ವೈಯಕ್ತಿಕ ಕಾರಣಗಳಿಂದ ಅನಿವಾರ್ಯವಾಗಿ 2019ರ ಜುಲೈ 23ರಿಂದ ಡೆಪ್ಯುಟಿ ಗವರ್ನರ್‌ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ’ ಎಂದುವಿರಲ್‌ ತಿಳಿಸಿದ್ದಾರೆ. ಬಡ್ಡಿದರನಿಗದಿ ಮಾಡಲು ರಚನೆಯಾಗಿರುವ ಹಣಕಾಸು ನೀತಿ ಸಮಿತಿಯಲ್ಲಿನ (ಎಂಪಿಸಿ) ಆರು ಸದಸ್ಯರಲ್ಲಿ ಏಕೈಕ ಡೆಪ್ಯುಟಿ ಗವರ್ನರ್‌ ಇವರಾಗಿದ್ದರು.

ವಿರಲ್‌ ಅವರು ಅಧಿಕಾರ ಸ್ವೀಕರಿಸಿದ ವೇಳೆ ಆರ್‌ಬಿಐ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ನೋಟುರದ್ದತಿ ಘೋಷಣೆಯಾದ ಬಳಿಕ ಠೇವಣಿಮತ್ತು ಹಣ ಪಡೆಯುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಪದೇ ಪದೇ ನಿಯಮಗಳನ್ನು ಬದಲಿಸುತ್ತಿತ್ತು. ಇದರಿಂದ ಸಾರ್ವಜನಿಕವಾಗಿ ಮತ್ತು ಉದ್ಯಮ ವಲಯದಿಂದಲೂ ತೀವ್ರ ಟೀಕೆಗೆ ಗುರಿಯಾಗಿತ್ತು. ಆಚಾರ್ಯ ಅವರು ಹಣಕಾಸು ಮತ್ತು ಸಂಶೋಧನಾ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು.

ವಿರಲ್‌ ಅಧಿಕಾರಾವಧಿ

2016 ಡಿಸೆಂಬರ್‌: 3 ವರ್ಷಗಳ ಅವಧಿಗೆ ಡೆಪ್ಯುಟಿ ಗವರ್ನರ್‌ ಆಗಿ ನೇಮಕ

2017 ಜನವರಿ 23: ಅಧಿಕಾರ ಸ್ವೀಕಾರ

2019ರ ಜುಲೈ 23: ಅಧಿಕಾರದಲ್ಲಿರುವ ಕೊನೆಯ ದಿನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT