ದಾಳಿ ನಡೆಸಿ ಭಯ ಸೃಷ್ಟಿಸಲು ಯತ್ನ: ಉಮರ್ ಖಾಲಿದ್‌

7

ದಾಳಿ ನಡೆಸಿ ಭಯ ಸೃಷ್ಟಿಸಲು ಯತ್ನ: ಉಮರ್ ಖಾಲಿದ್‌

Published:
Updated:
Deccan Herald

ನವದೆಹಲಿ: ‘ನನ್ನ ಮೇಲೆ ನಡೆದ ದಾಳಿಯ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಅವರು ಸಮಾಜದಲ್ಲಿ ದ್ವೇಷ, ರಕ್ತಪಾತ ಹಾಗೂ ಭಯದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ’ ಎಂದು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘಟನೆ ಮುಖಂಡ ಉಮರ್‌ ಖಾಲಿದ್‌ ಹೇಳಿದ್ದಾರೆ.

‘ಬಿಜೆಪಿ ಹಾಗೂ ಮಾಧ್ಯಮಗಳು ನನ್ನನ್ನು ದೇಶವಿರೋಧಿಯೆಂದು ಬಿಂಬಿಸಿವೆ’ ಎಂದು ಅವರು, ನವದೆಹಲಿಯಲ್ಲಿ ತಮ್ಮ ಮೇಲೆ ವಿಫಲ ಗುಂಡಿನ ದಾಳಿ ಯತ್ನ ನಡೆದ ಮರುದಿನ ಫೇಸ್‌ಬುಕ್‌ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್‌ ಅವರೊಂದಿಗೆ ಇರುವ ತಮ್ಮ ಚಿತ್ರವನ್ನು ಹಂಚಿಕೊಂಡಿರುವ ಖಾಲಿದ್‌, ‘ನನಗೆ ನಿರಂತರವಾಗಿ ಜೀವ ಬೆದರಿಕೆ ಇದೆ. ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದು, ಮುಂದೊಂದು ದಿನ ಆ ಗನ್‌ ನನ್ನ ವಿರುದ್ಧವೂ ತಿರುಗಬಹುದೆಂದು ಎಣಿಸಿದ್ದೆ’ ಎಂದು ಬರೆದಿದ್ದಾರೆ.

‘ದಾಭೋಲ್ಕರ್‌, ಕಲಬುರ್ಗಿ, ಪಾನ್ಸರೆ, ಗೌರಿ ಲಂಕೇಶ್... ಹತ್ಯೆಗಳ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ ಇದಕ್ಕೆ ನಾನು ಸಿದ್ಧವಾಗಿದ್ದೆ ಎಂದು ಹೇಳಲೇ? ಕಡೆಗೊಮ್ಮೆ ಅದು ನಿಜವೇ ಆಗಿಹೋದರೆ ಅದನ್ನು ಎದುರಿಸಲು ನಾನು ತಯಾರಿದ್ದೇನೆ ಎಂದು ಯಾರಾದರೂ ಹೇಳಲು ಸಾಧ್ಯವೇ? ಇಲ್ಲ’ ಎಂದು ಅವರು ಹೇಳಿದರು.

‘ಹೆಚ್ಚು ಭದ್ರತೆ ಇರುವ ವಲಯದಲ್ಲಿ, ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನ ಮೊದಲು ನನ್ನ ಮೇಲೆ ದಾಳಿ ನಡೆದಿರುವುದು, ಪ್ರಸಕ್ತ ಆಡಳಿತದಲ್ಲಿ ಜನ ಹೇಗೆ ನಿರ್ಬಂಧದ ನಡುವೆ ಬದುಕುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ’ ಎಂದಿದ್ದಾರೆ.

‘ಆಡಳಿತಾರೂಢ ಪಕ್ಷದ ವಕ್ತಾರರು ಮತ್ತು ಟಿ.ವಿ ಚಾನೆಲ್‌ಗಳ ಪ್ರೈಂ ಟೈಮ್‌ ಆ್ಯಂಕರ್‌ಗಳು ನನ್ನ ವಿರುದ್ಧ ಸುಳ್ಳುಸುದ್ದಿ ಹಬ್ಬಿಸಿ, ರಾಷ್ಟ್ರವಿರೋಧಿ ಎಂದು ಬಿಂಬಿಸಿದರಲ್ಲದೆ, ವಸ್ತುಶಃ ನನ್ನ ವಿರುದ್ಧ ಗುಂಪು ದಾಳಿ ನಡೆಸಿದರು’ ಎಂದು ಆರೋಪಿಸಿದ್ದಾರೆ.

‘ನನಗೆ ಪೊಲೀಸ್‌ ಭದ್ರತೆ ನೀಡುವಂತೆ ಕಳೆದ ಎರಡು ವರ್ಷಗಳಿಂದ ದೆಹಲಿ ಪೊಲೀಸರಿಗೆ ಮನವಿ ಮಾಡುತ್ತಿದ್ದೆ. ಇದಕ್ಕೆ ಅವರು ಸೂಕ್ತವಾಗಿ ಪ್ರತಿಕ್ರಿಯಿಸಲಿಲ್ಲ’ ಎಂದು ದೂರಿದ್ದಾರೆ.

**

ವಿಶೇಷ ಘಟಕದಿಂದ ತನಿಖೆ

ಉಮರ್‌ ಖಾಲಿದ್‌ ಅವರ ಮೇಲಿನ ಗುಂಡಿನ ದಾಳಿ ಯತ್ನ ಪ್ರಕರಣದ ಸಂಬಂಧ ದೆಹಲಿ ಪೊಲೀಸ್‌ ವಿಶೇಷ ಘಟಕ ತನಿಖೆ ಆರಂಭಿಸಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ನಲ್ಲಿ ಏರ್ಪಡಿಸಿದ್ದ ‘ಕೌಫ್‌ ಸೆ ಆಝಾದಿ’ ಕಾರ್ಯಕ್ರಮದಲ್ಲಿ ಖಾಲಿದ್‌ ಅವರು ಭಾಗವಹಿಸುವ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಆರೋಪಿ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದ ಪಿಸ್ತೂಲ್‌ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪಿಸ್ತೂಲ್‌ ಜಾಮ್‌ ಆಗಿದ್ದರಿಂದ ಗುಂಡು ಹಾರಿಲ್ಲ ಎಂದು ಪ್ರಯೋಗಾಲಯದ ಪ್ರಾಥಮಿಕ ವರದಿ ತಿಳಿಸಿದೆ ಎಂದು ಇನ್ನೊಬ್ಬ ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ.

ಖಾಲಿದ್‌ ಹಾಗೂ ಇತರ ಇಬ್ಬರು ವಿದ್ಯಾರ್ಥಿಗಳ ವಿರುದ್ಧದ ದೇಶದ್ರೋಹ ಪ್ರಕರಣದ ತನಿಖೆಯನ್ನೂ ಇದೇ ವಿಶೇಷ ಘಟಕ ನಡೆಸುತ್ತಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !