ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುಗಳಲ್ಲಿ ಕಳೆಗಟ್ಟಿದ ಗುರ್ಜಿ ಪೂಜೆ

ಮಳೆಗಾಗಿ ಪ್ರಾರ್ಥಿಸಿ ರಾಜೂರು ಗ್ರಾಮದ ಹಿರಿಯರಿಂದ ಸಾಂಪ್ರದಾಯಿಕ ಆಚರಣೆ
Last Updated 1 ಜೂನ್ 2018, 12:55 IST
ಅಕ್ಷರ ಗಾತ್ರ

ಗಜೇಂದ್ರಗಡ: ಜಿಲ್ಲೆಯ ಉಳಿದೆಡೆ ಕಳೆದೆರಡು ವಾರಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಆದರೆ, ಗಜೇಂದ್ರಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಮಾತ್ರ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ನಿರಂತರ ಮೋಡ ಕಟ್ಟುತ್ತಿದ್ದರೂ, ಗಾಳಿಯ ಆರ್ಭಟದಿಂದ ಮೋಡಗಳು ಚದುರಿ, ಕೇವಲ ಹನಿಗಳಷ್ಟೇ ಉದುರುತ್ತಿವೆ.

ಮಳೆಗಾಗಿ ಪ್ರಾರ್ಥಿಸಿ ರಾಜೂರು ಗ್ರಾಮದ ಹಿರಿಯರು ಬುಧವಾರ ಗುರ್ಜಿ ಪೂಜೆ ನಡೆಸಿದರು. ‘ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ ಹಳ್ಳಕೊಳ್ಳಾ ತಿರುಗ್ಯಾಡಿ ಬಂದೆ, ಕಾಡ ಮಳೆಯೋ... ಕಪ್ಪತ್ತ ಮಳೆಯೋ... ಸುರಿ ಸುರಿಯೋ... ಮಳೆರಾಯ’ ಎಂದು ಗುರ್ಜಿ ಹಾಡು ಹಾಡಿದರು.

ರೋಹಿಣಿ ಮಳೆ ಮುಗಿಯುತ್ತಾ ಬಂದರೂ ತಾಲ್ಲೂಕಿನಲ್ಲಿ ಇನ್ನೂ ಹದವಾದ ಮಳೆ ಆಗಿಲ್ಲ. ಇದರಿಂದ ಹೆಸರು, ಮೆಕ್ಕೆಜೋಳ, ತೊಗರಿ ಬಿತ್ತನೆಗೆ ವಿಳಂಬವಾಗುತ್ತದೆ ಎಂಬ ಆತಂಕದಲ್ಲಿದ್ದಾರೆ ಈ ಭಾಗದ ರೈತರು.

ಗುರ್ಜಿ ಪೂಜೆ ಭಾಗವಾಗಿ ಬಾಲಕನ ತಲೆ ಮೇಲೆ ತವೆ (ರೊಟ್ಟಿ ಬೇಯಿಸುವ ಹಂಚು) ಇಟ್ಟು ಅದರ ಮೇಲೆ ಆಕಳ ಸೆಗಣಿಯಿಂದ ಗುರ್ಜಿ ತಯಾರಿಸಿ, ಒಂದು ಕಪ್ಪೆಯನ್ನು ಅದರಲ್ಲಿಟ್ಟು, ಮೇಲೆ ಗರಿಕೆಯನ್ನಿಟ್ಟು ಹೊರಿಸಲಾಗುತ್ತದೆ. ಗುರ್ಜಿ
ಹೊತ್ತವನ ಹಿಂದೆ ಗ್ರಾಮಸ್ಥರ ಮೆರವಣಿಗೆ ನಡೆಯುತ್ತದೆ. ಎಲ್ಲ ಮನೆಗಳಿಂದ ಧಾನ್ಯಗಳನ್ನು ಸಂಗ್ರಹಿಸಿ ಊರ ದೇವರಿಗೆ ಅಥವಾ ಹಳ್ಳದಲ್ಲಿರುವ ದೇವರಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ನಡೆಸಲಾಗುತ್ತದೆ.

‘ರೋಹಿಣಿ ಮಳೆ ಮುಗಿದ ಬೆನ್ನಲ್ಲೇ ಬಿತ್ತನೆ ಮಾಡಬೇಕು. ಇಲ್ಲದಿದ್ದರೆ ಬಿತ್ತನೆ ಬೀಜದಲ್ಲಿ ಹುಳ ಬಂದು ಫಸಲು ಚೆನ್ನಾಗಿ ಬರುವುದಿಲ್ಲ. ಈ ಮಳೆ ಮುಗಿಯಲು ಇನ್ನು 8 ದಿನ ಬಾಕಿ ಇದೆ. ಅಷ್ಟರೊಳಗಾದರೂ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ಗುರ್ಜಿ ಪೂಜೆ ಮಾಡಕತ್ತಿವಿ’ ಎಂದು ರಾಜೂರು ಗ್ರಾಮದ ಶರಣಪ್ಪ ಜಿಗಳೂರ, ಅಲ್ಲಾಸಾಬ್ ಮುಜಾವರ್, ನಾಗಪ್ಪ ಶಂಕ್ರಿ, ಹನುಮಪ್ಪ ಗಂಗಣ್ಣೆವರ ಹೇಳಿದರು.

ಶ್ರೀಶೈಲ ಎಂ. ಕುಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT