ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಪ್ರಾದೇಶಿಕ ನಾಯಕರಿಂದಲೇ ಸವಾಲು

ಕೋಲ್ಕತ್ತ ಸಮಾವೇಶ ಸ್ಪಷ್ಟವಾಗಿ ಸಾರಿದ ಸಂದೇಶ: ಕಾಂಗ್ರೆಸ್‌ಗೆ ಇಲ್ಲ ನಾಯಕತ್ವದ ಹೊಣೆ
Last Updated 20 ಜನವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: 2019ರ ಲೋಕಸಭಾ ಚುನಾವಣೆಯು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವಣ ಮುಖಾಮುಖಿ. ಕಾಂಗ್ರೆಸ್‌ನ ಪಾತ್ರ ಏನಿದ್ದರೂ ಹಿಂಬದಿ ಸೀಟಿನ ಚಾಲನೆ ಎಂಬ ಸಂದೇಶವನ್ನು ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತದಲ್ಲಿ ಶನಿವಾರ ನಡೆದ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶ ಸ್ಪಷ್ಟವಾಗಿ ಸಾರಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನುಸಿಂಘ್ವಿ ಅವರು ಸಮಾವೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸಿದ್ದಾರೆ. ಬಿಜೆಪಿ ವಿರೋಧಿ ಪಕ್ಷಗಳ ಜತೆಗೆ ಕಾಂಗ್ರೆಸ್‌ ಇದೆ ಎಂಬುದನ್ನು ಬಿಂಬಿಸಲು ಅವರು ಯತ್ನಿಸಿದ್ದಾರೆ.

ವಿರೋಧ ಪಕ್ಷಗಳ ಒಕ್ಕೂಟದ ನಾಯಕ ಯಾರು ಎಂಬ ಪ್ರಶ್ನೆಯನ್ನು ಬಿಜೆಪಿ ಮತ್ತೆ ಮತ್ತೆ ಕೇಳುತ್ತಿದೆ. ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರು ಈ ಪ್ರಶ್ನೆಯನ್ನು ತಳ್ಳಿ ಹಾಕಿದ್ದಾರೆ. ನಾಯಕ ಯಾರು ಎಂಬುದನ್ನು ನಿರ್ಧರಿಸುವುದು ಈಗ ಮುಖ್ಯವಲ್ಲ, ಅದನ್ನು ಮತ್ತೆ ನಿರ್ಧರಿಸಲಾಗುವುದು ಎಂದು ಕೋಲ್ಕತ್ತ ಸಮಾವೇಶದಲ್ಲಿ ಸ್ಪಷ್ಟವಾಗಿಯೇ ಹೇಳಲಾಗಿದೆ.

ಕೋಲ್ಕತ್ತದ ರ‍್ಯಾಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ವೇದಿಕೆಯಲ್ಲಿದ್ದ ನಾಯಕರ ಸಂಖ್ಯೆಯೂ ಬಹಳ ದೊಡ್ಡದೇ. ಪ್ರಾದೇಶಿಕ ಪಕ್ಷಗಳ ನಾಯಕರಲ್ಲಿ ಅತಿ ಹೆಚ್ಚು ಜನಪ್ರಿಯತೆ ಯಾರಿಗಿದೆ ಎಂಬ ಪ್ರಶ್ನೆಗೆ ಈ ರ‍್ಯಾಲಿಯ ಮೂಲಕ ಮಮತಾ ಅವರು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ.

ಬಿಹಾರದ ರಾಜಧಾನಿ ಪಟ್ನಾದ ಗಾಂಧಿ ಮೈದಾನದಲ್ಲಿ ರಾಹುಲ್‌ ಗಾಂಧಿ ಅವರು ಫೆಬ್ರುವರಿ 3ರಂದು ಸಮಾವೇಶ ನಡೆಸಲಿದ್ದಾರೆ. ಈ ಸಮಾವೇಶಕ್ಕೆ ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಕೋಲ್ಕತ್ತದ ರ‍್ಯಾಲಿಯ ಜತೆಗೆ ಈ ಸಮಾವೇಶದ ಹೋಲಿಕೆ ಖಚಿತವಾಗಿಯೂ ನಡೆಯಲಿದೆ.

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ಎರಡು ಗುಂಪುಗಳು ಸೆಣಸುವುದು ಬಹುತೇಕ ನಿಚ್ಚಳ. ಕಾಂಗ್ರೆಸ್ಸೇತರ ಪ್ರಾದೇಶಿಕ ಪಕ್ಷಗಳು ಒಂದೆಡೆಯಾದರೆ, ಕಾಂಗ್ರೆಸ್‌ ನೇತೃತ್ವದ ಪ್ರಾದೇಶಿಕ ಪಕ್ಷಗಳದ್ದು ಇನ್ನೊಂದು ಗುಂಪು. ಹಾಗಾಗಿಯೇ ಸಮಾವೇಶ ನಡೆಸಲು‍ಪಟ್ನಾವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬಿಹಾರದಲ್ಲಿ ಎನ್‌ಡಿಎಯ ದೊಡ್ಡ ನಾಯಕ ನಿತೀಶ್‌ ಕುಮಾರ್‌. ಪ್ರಭಾವಿ ಮಿತ್ರ ಪಕ್ಷ ಆರ್‌ಜೆಡಿಯ ಜತೆಗೆ ಕಾಂಗ್ರೆಸ್‌ ಇಲ್ಲಿ ಎನ್‌ಡಿಎಗೆ ಪ್ರಮುಖ ಎದುರಾಳಿ.

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಭಿನ್ನ. ಇಲ್ಲಿ ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಯಲ್ಲಿ ಕಾಂಗ್ರೆಸ್‌ಗೆ ಸ್ಥಾನ ಇಲ್ಲ. 48 ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಜತೆಗೆ ಕಾಂಗ್ರೆಸ್‌ ಮೈತ್ರಿ ಇದೆ. 42 ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅಥವಾ ಎಡಪಕ್ಷಗಳಲ್ಲಿ ಯಾರ ಜತೆಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್‌ ಇದೆ. ಎಡ ಪಕ್ಷಗಳ ಜತೆಗೆ ಹೋದರೆ ಸ್ಪರ್ಧಿಸಲು ಹೆಚ್ಚು ಕ್ಷೇತ್ರಗಳು ದೊರಕಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ಗೆ ಇದೆ.

ಕೋಲ್ಕತ್ತದ ರ‍್ಯಾಲಿಯಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಅಥವಾ ರಾಹುಲ್‌ ಗಾಂಧಿ ಭಾಗವಹಿಸಿಲ್ಲ. ಆದರೆ, ಈ ಸಮಾವೇಶಕ್ಕೆ ಇಬ್ಬರೂ ನಾಯಕರು ಶುಭ ಹಾರೈಸಿದ್ದಾರೆ.

ವಿರೋಧ ಪಕ್ಷಗಳ ಒಕ್ಕೂಟವು ನಾಯಕನಿಲ್ಲದ, ಪರಸ್ಪರ ವಿರುದ್ಧವಾದ ಸಿದ್ಧಾಂತಗಳನ್ನು ಹೊಂದಿರುವ ಗುಂಪು ಎಂದು ಹೇಳಲು ಬಿಜೆಪಿಗೆ ಸಮಾವೇಶವು ಅವಕಾಶ ಕೊಟ್ಟಿದೆ. ಲೋಕಸಭಾ ಚುನಾವಣೆಯು ‘ಮೋದಿ ವಿರುದ್ಧ ರಾಹುಲ್‌’ ಎಂಬ ಚರ್ಚೆಯಿಂದ ಗಮನ ಬೇರೆಡೆಗೆ ಹೋಗುವಂತೆ ಇದು ಮಾಡಿದೆ. ಆದರೆ, ಕಾಂಗ್ರೆಸ್‌ ಪಾಲಿಗೆ ಇದು ಕೂಡ ಎರಡು ಅಲಗಿನ ಕತ್ತಿಯೇ ಆಗಿದೆ.

ಪ್ರಣಾಳಿಕೆಗಾಗಿ ರಾಹುಲ್‌ ಸಂವಹನ

ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಸಮಾಜದ ವಿವಿಧ ವರ್ಗಗಳ ಜತೆಗೆ ಸಮಾಲೋಚನೆ ಮತ್ತು ಸಂವಹನ ನಡೆಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮುಂದಾಗಿದ್ದಾರೆ.

ಒಟ್ಟು ನಾಲ್ಕು ಸಮಾಲೋಚನಾ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ದೇಶದ ದಕ್ಷಿಣ, ಉತ್ತರ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಇವು ನಡೆಯಲಿವೆ.

ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿಯು ಪಿ. ಚಿದಂಬರಂ ಅವರ ನೇತೃತ್ವದಲ್ಲಿ ಈಗಾಗಲೇ ನೂರಕ್ಕೂ ಹೆಚ್ಚು ಸಮಾಲೋಚನಾ ಸಭೆಗಳನ್ನು ನಡೆಸಿದೆ.

ದೇಶದ ಆರ್ಥಿಕತೆಯನ್ನು ಯಾವ ರೀತಿಯಲ್ಲಿ ಪುನಶ್ಚೇತನಗೊಳಿಸಬಹುದು ಎಂಬ ಬಗ್ಗೆ ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರಿಂದ ಸಲಹೆ ಪಡೆಯಲಾಗಿದೆ. ರಾಹುಲ್‌ ಅವರು ಜನರ ಜತೆ ಫೆಬ್ರುವರಿಯಲ್ಲಿ ಸಮಾಲೋಚನೆ ನಡೆಸಲಿದ್ದಾರೆ.

ಎಐಎಡಿಎಂಕೆಗೆ ಮೈತ್ರಿ ಗೊಂದಲ

ಚೆನ್ನೈ: ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಎಐಎಡಿಎಂಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಈ ಮೈತ್ರಿಯಿಂದ ನಷ್ಟವೇ ಹೆಚ್ಚು ಎಂದು ಎಐಎಡಿಎಂಕೆಯ ಹಿರಿಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಮೈತ್ರಿಗೆ ಸಂಬಂಧಿಸಿ ಬಿಜೆಪಿ ಜತೆಗೆ ಈವರೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಎಐಎಡಿಎಂಕೆ ಹೇಳುತ್ತಿದೆ. ಆದರೆ, ಎರಡೂ ಪಕ್ಷಗಳ ಮುಖಂಡರ ನಡುವೆ ಹಲವು ಸುತ್ತಿನ ಅನೌಪಚಾರಿಕ ಮಾತುಕತೆಗಳು ನಡೆದಿವೆ.

ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ನಡೆಸಿದ ಹಲವು ಪ್ರಯತ್ನಗಳು ವಿಫಲವಾಗಿವೆ. ಹಾಗಾಗಿ ಎಐಎಡಿಎಂಕೆ ಜತೆಗೆ ಮೈತ್ರಿಗೆ ಬಿಜೆಪಿ ಒತ್ತಡ ಹೇರುತ್ತಿದೆ. ಎರಡೂ ಪಕ್ಷಗಳು ಸೈದ್ಧಾಂತಿಕವಾಗಿ ನಿಕಟವಾಗಿವೆ. ವಿರೋಧ ಪಕ್ಷಗಳನ್ನು ಸೋಲಿಸಲು ಮೈತ್ರಿ ಅನಿವಾರ್ಯ ಎಂದು ಬಿಜೆಪಿಯ ಹಿರಿಯ ಮುಖಂಡರು ಹೇಳುತ್ತಿದ್ದಾರೆ.

ಎಐಎಡಿಎಂಕೆಯಲ್ಲಿ ಈಗ ಹಲವು ಬಣಗಳಿವೆ. ಜಯಲಲಿತಾ ಅವರಂತಹ ಪ್ರಬಲ ನಾಯಕಿಯ ಹಿಡಿತ ಪಕ್ಷಕ್ಕೆ ಇಲ್ಲ. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರು ಮೈತ್ರಿಯ ಪರವಾಗಿದ್ದಾರೆ. ಲೋಕಸಭೆಯ ಉಪ ಸ್ಪೀಕರ್‌ ಎಂ. ತಂಬಿದೊರೆ ಮತ್ತು ಇತರ ಕೆಲವು ಹಿರಿಯ ಮುಖಂಡರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯನ್ನು ಹೆಗಲ ಮೇಲೆ ಹೊತ್ತು ಸಾಗಿ, ಆ ಪಕ್ಷಕ್ಕೆ ನೆಲೆ ಸೃಷ್ಟಿಸಿಕೊಡುವುದು ಎಐಎಡಿಎಂಕೆಗೆ ಅಗತ್ಯವಿಲ್ಲ ಎಂದು ತಂಬಿದೊರೆ ನೇರವಾಗಿಯೇ ಹೇಳಿದ್ದಾರೆ.

‘ಬಿಜೆಪಿ ಜತೆಗೆ ಮೈತ್ರಿ ಯಾಕೆ ಎಂಬುದನ್ನು ಜನರಿಗೆ ವಿವರಿಸುವುದು ಬಹಳ ಕಷ್ಟ. ಬಿಜೆಪಿಯ ತಾಳಕ್ಕೆ ತಕ್ಕಂತೆ ಎಐಎಡಿಎಂಕೆ ಕುಣಿಯುತ್ತಿದೆ ಎಂಬ ಭಾವನೆ ಈಗಲೇ ಜನರಲ್ಲಿ ಇದೆ. ಮೈತ್ರಿ ಏರ್ಪಟ್ಟರೆ ಈ ಭಾವನೆ ಇನ್ನಷ್ಟು ಗಟ್ಟಿಯಾಗುತ್ತದೆ’ ಎಂದು ಎಐಎಡಿಎಂಕೆಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಅನಿವಾಸಿಗಳಿಗೆ ಪರೋಕ್ಷ ಮತ: ಒಪ್ಪಿಗೆ ಕಾದಿರುವ ಮಸೂದೆ

ಅನಿವಾಸಿ ಭಾರತೀಯರಿಗೆ ‘ಪರೋಕ್ಷ ಮತ’ ಅವಕಾಶ ನೀಡುವ ಮತ್ತು ಸೇನೆಯಲ್ಲಿರುವವರ ಪರೋಕ್ಷ ಮತ ಅವಕಾಶವನ್ನು ಲಿಂಗತಟಸ್ಥವಾಗಿಸುವ ಮಸೂದೆಯೊಂದು ರಾಜ್ಯಸಭೆಯ ಅಂಗೀಕಾರಕ್ಕಾಗಿ ಕಾಯುತ್ತಿದೆ. ಕೆಲವೇ ವಾರಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಈ ಮಸೂದೆಗೆ ಮಹತ್ವ ಬಂದಿದೆ.

ಮಸೂದೆಯು ಅಂಗೀಕಾರವಾದರೆ ಅನಿವಾಸಿ ಭಾರತೀಯರು ತಮ್ಮ ಪರವಾಗಿ ಮತ ಚಲಾಯಿಸಲು ವ್ಯಕ್ತಿಯೊಬ್ಬರನ್ನು ನಿಯೋಜಿಸಬಹುದು. ಪ್ರತಿ ಚುನಾವಣೆಯಲ್ಲಿಯೂ ಈ ವ್ಯಕ್ತಿಯನ್ನು ಬದಲಾಯಿಸಬೇಕು.

ಅನಿವಾಸಿ ಭಾರತೀಯರ ಒಟ್ಟು ಸಂಖ್ಯೆ 3.10 ಕೋಟಿ ಎಂದು ಅಂದಾಜಿಸಲಾಗಿದೆ.

ಸೇನೆಯಲ್ಲಿ ಕೆಲಸ ಮಾಡುವ ಯೋಧನ ಪರವಾಗಿ ಹೆಂಡತಿ ಮತ ಚಲಾಯಿಸಲು ಅವಕಾಶ ಇದೆ. ಆದರೆ, ಸೇನೆಯಲ್ಲಿರುವ ಮಹಿಳೆಯ ಪರವಾಗಿ ಅವರ ಗಂಡ ಮತ ಚಲಾಯಿಸಲು ಅವಕಾಶ ಇಲ್ಲ. ಮಹಿಳೆ ತನ್ನ ಗಂಡನ ಮೂಲಕ ಮತ ಚಲಾಯಿಸಲು ಅವಕಾಶ ಕೊಡುವ ಪ್ರಸ್ತಾವವೂ ಈ ಮಸೂದೆಯಲ್ಲಿ ಇದೆ.

ಲೋಕಸಭೆಯು 2018ರ ಆಗಸ್ಟ್‌ನಲ್ಲಿಯೇ ಮಸೂದೆಗೆ ಅನುಮೋದನೆ ನೀಡಿದೆ. ಆದರೆ, ರಾಜ್ಯಸಭೆಯಲ್ಲಿ ಮತ್ತೆ ಮತ್ತೆ ಕೋಲಾಹಲ ಆಗಿದ್ದರಿಂದ ಮಸೂದೆಗೆ ಒಪ್ಪಿಗೆ ಪಡೆಯಲು ಸಾಧ್ಯವಾಗಿಲ್ಲ.

ಕಾಂಗ್ರೆಸ್‌ಗೆ ನಾಯಕತ್ವ ಸಾಮರ್ಥ್ಯವಿದೆ: ತೇಜಸ್ವಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಪಕ್ಷಗಳನ್ನು ಮುನ್ನಡೆಸಲು ಕಾಂಗ್ರೆಸ್‌ಗೆ ಎಲ್ಲ ಸಾಮರ್ಥ್ಯವೂ ಇದೆ. ಆದರೆ, ಆ ಪಕ್ಷವು ನಾಯಕತ್ವದಲ್ಲಿ ದೊಡ್ಡ ಹೃದಯ ತೋರಬೇಕು ಮತ್ತು ಪ್ರಾದೇಶಿಕ ಪಕ್ಷಗಳಿಗೆ ಸಾಕಷ್ಟು ಅವಕಾಶ ಕೊಡಬೇಕು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿಯ ಬಳಿಕ ಅಖಿಲೇಶ್‌ ಯಾದವ್‌ ಮತ್ತು ಮಾಯಾವತಿ ಅವರನ್ನು ಭೇಟಿ ಮಾಡಿರುವುದು ಸೌಜನ್ಯಕ್ಕಾಗಿ. ಅದು ಕಾಂಗ್ರೆಸ್‌ ಮೇಲೆ ಒತ್ತಡ ಹೇರುವ ತಂತ್ರ ಅಲ್ಲ ಎಂದಿದ್ದಾರೆ.

ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್‌. ಜತೆಗೆ, ಈಗ ದೇಶದ ಎರಡನೇ ಅತಿ ದೊಡ್ಡ ಪ‍ಕ್ಷ. ಈ ಪಕ್ಷಕ್ಕೆ ದೇಶದ ಎಲ್ಲೆಡೆ ಅಸ್ತಿತ್ವವೂ ಇದೆ. ವಿರೋಧ ಪಕ್ಷಗಳ ಪೈಕಿ ಅತಿ ಹೆಚ್ಚು ಸಂಸದರನ್ನು ಹೊಂದಿರುವ ಕಾಂಗ್ರೆಸ್‌ ಪ್ರಭಾವಿ ಸ್ಥಾನದಲ್ಲಿಯೇ ಇದೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

***

ಮೈತ್ರಿ ರೂಪಿಸುವಲ್ಲಿ ಮತ್ತು ಅದಕ್ಕೆ ನಾಯಕತ್ವ ಕೊಡುವಲ್ಲಿ ಕಾಂಗ್ರೆಸ್‌ಗೆ ಮಹತ್ವದ ಪಾತ್ರವಿದೆ. ಆದರೆ, ಪ್ರತಿ ರಾಜ್ಯದ ಪರಿಸ್ಥಿತಿಯೂ ಭಿನ್ನ ಎಂಬುದನ್ನು ಆ ಪಕ್ಷ ಒಪ್ಪಿಕೊಳ್ಳಬೇಕು

-ತೇಜಸ್ವಿ ಯಾದವ್‌, ಆರ್‌ಜೆಡಿ ನಾಯಕ

ವಿರೋಧ ಪಕ್ಷಗಳು ಪರ್ಯಾಯ ಕೊಡಲು ಸಾಧ್ಯವಿಲ್ಲ. ಮೋದಿ ಇಲ್ಲದೇ ಇದ್ದರೆ ದೇಶವು ಅರಾಜಕತೆಯೆಡೆಗೆ ಸಾಗಬಹುದು ಎನ್ನುವಂತಹ ಸ್ಥಿತಿ ಈಗ ಇದೆ

-ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT