ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ: ತ್ರಿವಿಕ್ರಮ ವಿಜೃಂಭಣೆ

Last Updated 22 ಜುಲೈ 2019, 11:12 IST
ಅಕ್ಷರ ಗಾತ್ರ

ಇಂದಿಗೆ ಸರಿಯಾಗಿ 50 ವರ್ಷಗಳ ಹಿಂದೆ, ಅಂದರೆ ಜುಲೈ 22, 1969ರ ಮಂಗಳವಾರ ‘ಚಂದ್ರನ ಮೇಲೆ ಎರಡು ಗಂಟೆ ಮಾನವನ ಓಡಾಟ’ ಶೀರ್ಷಿಕೆಯ ಮುಖಪುಟ ಲೀಡ್ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು. ಅಂದು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮತ್ತೊಂದು ಪ್ರಮುಖ ಸುದ್ದಿ ‘ತ್ರಿವಿಕ್ರಮ ವಿಜೃಂಭಣೆ’ ಇಂದು ನಮ್ಮ ದೇಶದ ಹೆಮ್ಮೆಯ ಸಂಸ್ಥೆ ‘ಇಸ್ರೋ’ ಮಾಡಿರುವ ಸಾಧನೆ ಏಕೆ ಮುಖ್ಯ ಎಂಬುದನ್ನು ಮತ್ತೊಂದು ಮಜಲಿನಿಂದ ಈ ಬರಹ ಕಟ್ಟಿಕೊಡುತ್ತದೆ.

***

‘ಭೂಮಿಯ ಮೇಲೆ ಬದುಕಿರುವ ನಾವು, ಭಾವಿಯ ತಳದಲ್ಲಿ ವಾಸಿಸುವ ಕಪ್ಪೆಗಳಂತೆ ಬಾಳುತ್ತಿದ್ದೇವೆ’ –ಎಂದು ಗ್ರೀಕ್ ತತ್ವಜ್ಞಾನಿ ಸಾಕ್ರೆಟೀಸ್ 2400 ವರ್ಷಗಳ ಹಿಂದೆಯೇ ತನ್ನ ಅಳಲನ್ನು ತೋಡಿಕೊಂಡ. ರೂಪಮಂಡೂಕವಾಗಿದ್ದ ಮಾನವ, ಇಂದು ಭೂಮಿಯ ಎಲ್ಲ ನಿರ್ಬಂಧಗಳನ್ನೂ ಮೆಟ್ಟಿ ಮುಗಿಲಂಗಣದಲ್ಲಿ ತೇಲಾಡಿದ್ದಾನೆ, ಅಗಮ್ಯವೆನಿಸಿದ್ದ ಲೋಕಾಂತರವನ್ನು ಕ್ರಮಿಸಿದ್ದಾನೆ, ಬಾಹ್ಯಾಕಾಶದ ನಿಗೂಢ ರಹಸ್ಯವನ್ನು ಬೇಧಿಸಿ ತ್ರಿವಿಕ್ರಮನಾಗಿ ವಿಜೃಂಭಿಸಿದ್ದಾನೆ.

ಗಗನನೌಕೆ–ಅಪೋಲೊ–11ರಲ್ಲಿ ಕುಳಿತು ಬಾಹ್ಯಾಕಾಶದಲ್ಲಿ ಲಕ್ಷಾಂತರ ಮೈಲಿಗಳನ್ನು ದಾಟಿ, ಇತಿಹಾಸದಲ್ಲೇ ಪ್ರಪ್ರಥಮವಾಗಿ ಚಂದ್ರಲೋಕಕ್ಕೆ ಪದಾರ್ಪಣೆ ಮಾಡಿರುವ ಅಮೆರಿಕಾದ ಮೂವರು ನಭೋಯಾತ್ರಿಕರು ಮಾನವನ ಆ ತ್ರಿವಿಕ್ರಮ ಶಕ್ತಿಯ ಮಹೋನ್ನತ ಸಂಕೇತವೆನಿಸಿದ್ದಾರೆ. ಮಾನವಕುಲದ ಸಾಹಸಪ್ರಿಯತೆಗೊಂದು ಸಾರ್ಥಕ್ಯವನ್ನು ದೊರಕಿಸಿಕೊಟ್ಟಿದ್ದಾರೆ.

22ನೇ ಜುಲೈ 1919ರಂದು ಪ್ರಕಟವಾಗಿದ್ದ ಮುಖಪುಟ ಕಾರ್ಟೂನ್
22ನೇ ಜುಲೈ 1919ರಂದು ಪ್ರಕಟವಾಗಿದ್ದ ಮುಖಪುಟ ಕಾರ್ಟೂನ್

ಜಗದಾನಂದಕರವಾದ ಈ ಅದ್ಭುತಸಾಹಸದಿಂದ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಅಸಾಧ್ಯವೆನಿಸಿರುವುದನ್ನು ಸಾಧ್ಯಗೊಳಿಸುವ ಮಾನವನ ಶಕ್ತಿ ಸಾಮರ್ಥ್ಯಗಳಿಗೆ ಹೊಸ ನೆಚ್ಚು ದೊರೆಯುತ್ತದೆ. ವ್ಯೋಮ ಮಂಡಲದ ಗಂಭೀರ ವಿಸ್ತಾರವೆಲ್ಲವನ್ನೂ ಈಜಿಅರಿವಿನ ತೀರಗಳನ್ನು ವಿಸ್ತೃತಗೊಳಿಸುವ ಭರವಸೆ ಮೂಡುತ್ತದೆ. ಏಕೆಂದರೆ, ಅಮೆರಿಕನ್ ವಿಜ್ಞಾನಿಗಳು ಈಗ ಸಾಧಿಸಿರುವ ಅಮೋಘ ಚಂದ್ರವಿಜಯ ಅಂತರಗ್ರಹ ಯಾನದ ಗುರಿ ಸಾಧನೆಯಲ್ಲಿ ಒಂದು ಮಜಲು ಮಾತ್ರ.

ದಿವಂಗತ ಜಾನ್ ಎಫ್.ಕೆನಡಿಯವರು ಆಶಿಸಿದ್ದ ಮೇರೆಗೆ ಈ ದಶಕದೊಳಗೆ ಚಂದ್ರಲೋಕಕ್ಕೆ ಮಾನವನನ್ನು ಕಳುಹಿಸಿಕೊಡುವ ಕಾರ್ಯಕ್ರಮ ತೃಪ್ತಿಕರವಾಗಿ ನೆರವೇರಿದಂತೆ, ಅಂತರಗ್ರಹಯಾನವೂ ದೂರದಲ್ಲಿಯೇ ಸಾಧ್ಯವೆನಿಸಿತು. ಸೃಷ್ಟಿರಹಸ್ಯ ಭೇದನದ ಈ ಸಾಹಸಯಾತ್ರೆಯ ಫಲವಾಗಿ ದೊರೆವ ವಿಶೇಷ ಜ್ಞಾನ ಮಾನವ ಕಲ್ಯಾಣಕ್ಕಾಗಿ ವಿನಿಯೋಗವಾಗಿ ಅವನ ಬದುಕು ಸುಂದರವೂ, ಸುಖಕರವೂ ಆದೀತು.

ಶತಶತಮಾನದ ಭವ್ಯ ಕನಸೊಂದನ್ನು ಈಗ ನನಸು ಮಾಡಿರುವ ಈ ಮಹಾಸಾಹಸ ಸಫಲವಾಗಲೆಂದು ಜಗತ್ ಸಮಸ್ತವೂ ಹಾರೈಸಿದಂತೆ, ಅಮೆರಿಕಾದ ಈ ಮೂವರು ಚಂದ್ರವಿಜಯಿಗಳು ಸುರಕ್ಷಿತವಾಗಿ ಧರೆಗೆ ಮರಳಲೆಂದೂ ಅವರ ಮರುಪ್ರಯಾಣ ನಿರಾಂತಕವೂ, ನಿರ್ವಿಘ್ನವೂ ಆಗಲೆಂದೂ ಪ್ರಾಂಜಲವಾಗಿ ಪ್ರಾರ್ಥಿಸುತ್ತಿದೆ.

21ನೇ ಜುಲೈ 1969ರಂದು ಪ್ರಕಟವಾಗಿದ್ದ ಮುಖಪುಟ ಕಾರ್ಟೂನ್
21ನೇ ಜುಲೈ 1969ರಂದು ಪ್ರಕಟವಾಗಿದ್ದ ಮುಖಪುಟ ಕಾರ್ಟೂನ್
21ನೇ ಜುಲೈ 1969ರ ಮುಖಪುಟ
21ನೇ ಜುಲೈ 1969ರ ಮುಖಪುಟ
22ನೇ ಜುಲೈ 1969ರ ಮುಖಪುಟ
22ನೇ ಜುಲೈ 1969ರ ಮುಖಪುಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT