ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿಗೆ ಬಿದ್ದ ಮಗು: ರಕ್ಷಣಾ ಕಾರ್ಯ ಚುರುಕು

Last Updated 26 ಅಕ್ಟೋಬರ್ 2019, 18:20 IST
ಅಕ್ಷರ ಗಾತ್ರ

ಚೆನ್ನೈ: ತಿರುಚಿನಾಪಳ್ಳಿ ಸಮೀಪ ಕೊಳವೆಬಾವಿಯಲ್ಲಿ ಬಿದ್ದಿರುವ ಎರಡು ವರ್ಷದ ಮಗುವಿನ ರಕ್ಷಣೆಯ ಕಾರ್ಯಾಚರಣೆ ಶನಿವಾರ ಚುರುಕುಗೊಂಡಿದೆ. ಸುಮಾರು 600 ಅಡಿ ಆಳದ ಕೊಳವೆಬಾವಿಗೆ ಆಕಸ್ಮಿಕವಾಗಿ ಬಿದ್ದಿರುವ ಮಗು ಸುಜಿತ್‌ ರಕ್ಷಣೆಗೆ ಶುಕ್ರವಾರ ಸಂಜೆಯಿಂದ ಅಗ್ನಿಶಾಮಕದಳ ಮತ್ತು ಇತರೆ ಸಂಸ್ಥೆಗಳು ನಿರಂತರವಾಗಿ ಶ್ರಮಿಸುತ್ತಿವೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ರಕ್ಷಣಾ ಕಾರ್ಯಚರಣೆಗೆ ಕೈಜೋಡಿಸಿವೆ.ಮನಪಾರೈ ಗ್ರಾಮದ ಸಮೀಪ ನಡೆದ ಘಟನಾ ಸ್ಥಳದಲ್ಲಿ ಸಚಿವರಾದ ಸಿ.ವಿಜಯಭಾಸ್ಕರ್‌ ಮತ್ತು ವೆಲ್ಲಮಂಡಿ ಎಂ.ನಟರಾಜನ್‌ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಚರಣೆಯಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

‘ಕೊಳವೆಬಾವಿಯಲ್ಲಿ ಬಿದ್ದಿರುವ ಸುಜಿತ್‌, 70 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಈತನನ್ನು ಸುರಕ್ಷಿತವಾಗಿ ಹೊರತರಲು ಎಲ್ಲ ಪ್ರಯತ್ನಗಳು ಮುಂದುವರಿದಿವೆ. ಕೊಳವೆಬಾವಿಯಲ್ಲಿ ಬಿದ್ದವರನ್ನು ಹೊರತೆಗೆಯಲು ಮದುರೈಯ ಎಂಜಿನಿಯರ್‌ ವಿನ್ಯಾಸಗೊಳಿಸಿದ ವಿಶೇಷ ಸಾಧನವನ್ನು ಇಲ್ಲಿ ಬಳಸಲಾಗುತ್ತಿದೆ. ಆದರೆ, ಈವರೆಗೂ ರಕ್ಷಣಾ ಕಾರ್ಯಕ್ಕೆ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಳಿಗ್ಗೆ ಕೊಳವೆಬಾವಿಯಿಂದ ಮಗುವನ್ನು 20 ಅಡಿಗಳವರೆಗೆ ಮೇಲಕ್ಕೆ ಎತ್ತಲಾಗಿತ್ತು. ಆದರೆ, ಮತ್ತೆ ಕೆಳಗೆ ಕುಸಿದು 70 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಸುಜಿತ್‌ ತಾಯಿ, ಧ್ವನಿವರ್ಧಕದ ಮೂಲಕ ನಿರಂತರವಾಗಿ ಮಗುವಿನೊಂದಿಗೆ ಮಾತನಾಡುತ್ತ ಧೈರ್ಯ ತುಂಬುತ್ತಿದ್ದಾರೆ.

‘ಸಿಲಿಂಡರ್‌ ಮೂಲಕ ಮಗುವಿಗೆ ಆಮ್ಲಜನಕ ನೀಡಲಾಗುತ್ತಿದೆ. ಆದರೆ, ತಲೆಕೆಳಗಾಗಿ ಬಿದ್ದಂತೆ ಕಾಣುತ್ತಿರುವುದರಿಂದ ಆಮ್ಲಜನಕ ತಲುಪುವಲ್ಲಿ ಕಷ್ಟವಾಗುತ್ತಿದೆ. ಆದರೆ, ಮಗುವನ್ನು ಕೊಳವೆಬಾವಿಯಿಂದ ಜೀವಂತವಾಗಿ ಹೊರತೆಗೆಯಲು ಎಲ್ಲ ಪ್ರಯತ್ನಗಳು ಮಾಡಲಾಗುತ್ತಿದೆ. ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಲಾಗುತ್ತಿದೆ’ ಎಂದು ಆರೋಗ್ಯ ಸಚಿವ ವಿಜಯಭಾಸ್ಕರ್‌ ಹೇಳಿದ್ದಾರೆ.

ಕಾರ್ಯಾಚರಣೆ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿರುವ ಜನ, ಮಗುವಿನ ರಕ್ಷಣೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ#SaveSujith ಹ್ಯಾಷ್‌ಟ್ಯಾಗ್‌ ಮೂಲಕ ಅನೇಕರು ಪ್ರಾರ್ಥಿಸಿದ್ದಾರೆ. ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್‌ ಅವರು ಮಗು ಸುರಕ್ಷಿತವಾಗಿ ಹೊರಬರಲಿ ಎಂದು ಪ್ರಾರ್ಥಿಸಿದ್ದಾರೆ.

ಕೊಳವೆಬಾವಿಯಲ್ಲಿ ಬಿದ್ದಿರುವ ಬಾಲಕ
ಕೊಳವೆಬಾವಿಯಲ್ಲಿ ಬಿದ್ದಿರುವ ಬಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT