ಭಾನುವಾರ, ಏಪ್ರಿಲ್ 18, 2021
30 °C
ಶಿಕ್ಷಕರ ಮೀಸಲು: ವಿ.ವಿಯೇ ಘಟಕ

ವಿಭಾಗವಾರು ಮೀಸಲಾತಿ ಇಲ್ಲ: ಮಸೂದೆಗೆ ಲೋಕಸಭೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ಲೆಕ್ಕ ಹಾಕಲು ವಿಭಾಗದ ಬದಲಿಗೆ ಇಡೀ ವಿಶ್ವವಿದ್ಯಾಲಯವನ್ನು ಒಂದು ಘಟಕವಾಗಿ ಪರಿಗಣಿಸುವ ಮಸೂದೆಗೆ ಲೋಕಸಭೆ ಸೋಮವಾರ ಒಪ್ಪಿಗೆ ಕೊಟ್ಟಿದೆ. ಮೀಸಲು ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯುವುದನ್ನು ಖಾತರಿಪಡಿಸುವ ಅಂಶವೂ ಈ ಮಸೂದೆಯಲ್ಲಿ ಇದೆ. 

ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕರಿಗೆ ಮೀಸಲಾತಿ) ಮಸೂದೆ 2019 ಅನ್ನು ಲೋಕಸಭೆಯು ಧ್ವನಿಮತದಿಂದ ಅಂಗೀಕರಿಸಿತು. ಮಸೂದೆಯನ್ನು ಪ‍ರಿಶೀಲನೆಗಾಗಿ ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದವು. ಆದರೆ, ಎನ್‌ಡಿಎಗೆ ಬಹುಮತ ಇರುವ ಕಾರಣ ವಿರೋಧ ಪಕ್ಷಗಳ ಒತ್ತಾಯಕ್ಕೆ ಮನ್ನಣೆ ದೊರೆಯಲಿಲ್ಲ. 

ಶಿಕ್ಷಕರ ನೇಮಕಾತಿಯಲ್ಲಿ ವಿಭಾಗವಾರು ಅಥವಾ ವಿಷಯವಾರು ಮೀಸಲಾತಿ ನೀಡಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಹಾಗಾಗಿ, ಇಡೀ ಸಂಸ್ಥೆಯನ್ನು ಒಂದು ಘಟಕವಾಗಿ ಪರಿಗಣಿಸುವ ಸುಗ್ರೀವಾಜ್ಞೆಯನ್ನು ಮಾರ್ಚ್‌ನಲ್ಲಿ ಹೊರಡಿಸಲಾಗಿತ್ತು. ಈಗ ಅದರ ಬದಲಿಗೆ ಮಸೂದೆ ತರಲಾಗಿದೆ. ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಬೇಕಾಗಿದೆ.  ಕೋರ್ಟ್‌ ತೀರ್ಪನ್ನು ಅನುಸರಿಸಿದರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ದೊರೆಯುವ ಹುದ್ದೆಗಳ ಪ್ರಮಾಣದಲ್ಲಿ ಗಣನೀಯ ಕಡಿತವಾಗುತ್ತದೆ ಎಂಬ ಕಾರಣಕ್ಕೆ ರಾಜಕೀಯ ಪಕ್ಷಗಳು ಮತ್ತು ದಲಿತ ಸಂಘಟನೆಗಳು ತೀರ್ಪನ್ನು ವಿರೋಧಿಸಿದ್ದವು. 

ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವುದಕ್ಕೂ ಈ ಮಸೂದೆಯಲ್ಲಿ ಅವಕಾಶ ಇದೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಹೇಳಿದ್ದಾರೆ. 

ಮಸೂದೆಯಲ್ಲಿ ಇರುವ ಅಂಶಗಳ ಬಗ್ಗೆ ತಕರಾರು ಇಲ್ಲ, ಆದರೆ, ಲೋಕಸಭೆ ಚುನಾವಣೆಗೆ ಮೊದಲು ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಗತ್ಯ ಏನಿತ್ತು ಎಂಬುದೇ ತಮ್ಮ ಪ್ರಶ್ನೆ ಎಂದು ಲೋಕಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಹೇಳಿದರು. ಮಸೂದೆಯನ್ನು ‍ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆಗೆ ಸಮ್ಮತಿ
ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ಜಮ್ಮು  ಮತ್ತು ಕಾಶ್ಮೀರದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಗೃಹ ಸಚಿವ ಅಮಿತ್‌ ಶಾ ಅವರು ಪುನರುಚ್ಚರಿಸಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಆರು ತಿಂಗಳು ವಿಸ್ತರಿಸುವ ಮಸೂದೆಯ ಮೇಲಿನ ಚರ್ಚೆಗೆ ಶಾ ಉತ್ತರಿಸಿದರು. ಶಾ ಅವರ ಉತ್ತರದ ಬಳಿಕ, ರಾಷ್ಟ್ರಪತಿ ಆಳ್ವಿಕೆಯನ್ನು ವಿಸ್ತರಿಸುವ ಮಸೂದೆಗೆ ರಾಜ್ಯಸಭೆ ಒಪ್ಪಿಗೆ ನೀಡಿತು. 

ಕಾಶ್ಮೀರದ ಪರಂಪರೆ, ಮಾನವೀಯತೆ ಮತ್ತು ಶಾಂತಿಯನ್ನು ಕಾಪಾಡಲು ಅಗತ್ಯವಾದ ನೀತಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅನುಸರಿಸುತ್ತಿದೆ. ಅಲ್ಲಿ ಶಾಲೆಗಳನ್ನು ತೆರೆಯಲಾಗಿದೆ, ಜನರಿಗೆ ಅಡುಗೆ ಅನಿಲ ಒದಗಿಸಲಾಗಿದೆ, ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ವಿದ್ಯುತ್‌ ಒದಗಿಸಲಾಗಿದೆ ಎಂದು ಶಾ ವಿವರಿಸಿದರು. ರಾಜ್ಯದ ತೀವ್ರವಾದಿ ಗುಂಪುಗಳನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ಕೆ.ವಿಗಳಲ್ಲಿ ಹಾಸ್ಟೆಲ್ ಇಲ್ಲ’
ನವದೆಹಲಿ (ಪಿಟಿಐ): ಕೇಂದ್ರೀಯ ವಿದ್ಯಾಲಯಗಳಲ್ಲಿ(ಕೆವಿ) ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಮಾನವ ಸಂಪನ್ಮೂಲ ಸಚಿವಾಲಯ ಸೋಮವಾರ ತಿಳಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್‌ ನಿಶಾಂಕ್, ಸದ್ಯಕ್ಕೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದಿದ್ದಾರೆ.

*
ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ನಮ್ಮ ಧೋರಣೆ ಸ್ಪಷ್ಟ. ಭಾರತವನ್ನು ಒಡೆಯುವ ಮಾತು ಆಡುವವರಿಗೆ ಅದೇ ಭಾಷೆಯಲ್ಲಿ ನಾವು ಉತ್ತರ ನೀಡುತ್ತೇವೆ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು