ಅಟಾರ್ನಿ ಜನರಲ್‌ ನೇಮಿಸುವಂತೆ ಮನವಿ

7
ಬಡ್ತಿ ಮೀಸಲಾತಿ ಪ್ರಕರಣ: ‘ಸು‍ಪ್ರೀಂ’ನಲ್ಲಿ 28ಕ್ಕೆ ವಿಚಾರಣೆ

ಅಟಾರ್ನಿ ಜನರಲ್‌ ನೇಮಿಸುವಂತೆ ಮನವಿ

Published:
Updated:

ಬೆಂಗಳೂರು: ಬಡ್ತಿ ಮೀಸಲಾತಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಅಟಾರ್ಜಿ ಜನರಲ್‌ ಅವರನ್ನೇ ನೇಮಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಕೋರಿದೆ.

ಈ ಸಂಬಂಧ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿ ಚಂದ್ರಮೌಳಿ ಮತ್ತು ಕಾನೂನು ಕಾರ್ಯದರ್ಶಿ ಸುರೇಶಚಂದ್ರ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಇದೇ 16ರಂದು ಪತ್ರ ಬರೆದಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ಇದೇ 28ರಂದು ನಡೆಯಲಿದೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರದ ಕಾನೂನು ಕಾರ್ಯದರ್ಶಿ ಅವರೂ ಈ ಪ್ರಕರಣದಲ್ಲಿ ಪ್ರತಿವಾದಿಗಳು. ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ವಾದ ಮಂಡಿಸಲಿದ್ದಾರೆ.

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ 2017ಕ್ಕೆ ರಾಷ್ಟ್ರಪತಿಯವರು 2018ರ ಜೂನ್‌ 14ರಂದು ಅಂಕಿತ ಹಾಕಿದ್ದರು.

ಹಿಂಬಡ್ತಿ ನೌಕರರಿಗೆ ವೇತನ: ಸುಪ್ರೀಂಕೋರ್ಟ್‌ ನೀಡಿದ ತೀರ್ಪು ಅನುಷ್ಠಾನದಿಂದ ಹಿಂಬಡ್ತಿಗೆ ಒಳಗಾದ ಅಧಿಕಾರಿಗಳು, ಹಿಂಬಡ್ತಿಗೆ ಒಳಗಾಗುವ ಮೊದಲು ಪಡೆಯುತ್ತಿದ್ದ ವೇತನವನ್ನು ಕೋರ್ಟ್‌ ನೀಡುವ ಆದೇಶಕ್ಕೆ ಅಂತಿಮ ದೇಶಕ್ಕೆ ಬದ್ಧವಾಗಿರಬೇಕೆಂಬ ಮುಚ್ಚಳಿಕೆ ಪಡೆದು ಬಟವಾಡೆ ಮಾಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಶನಿವಾರ ಆದೇಶಿಸಿದ್ದಾರೆ.

ಜ್ಯೇಷ್ಠತಾ ಪಟ್ಟಿ ಪರಿಶೀಲನೆಗೆ ಸಮಿತಿ
ಬಿ.ಕೆ. ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ರಾಜ್ಯ ಸರ್ಕಾರ ಪ್ರಕಟಿಸಿರುವ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ನಾಲ್ವರು ಸದಸ್ಯರನ್ನು ಒಳಗೊಂಡ ಸಮಾಲೋಚಕರ ಸಮಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರಚಿಸಿದೆ.

ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನಿವೃತ್ತರಾದ ಅಬ್ದುಲ್‌ ಖಾದಿರ್‌, ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿ ಕಾರ್ಯದರ್ಶಿ ಯು. ಚಂದ್ರನಾಯಕ್‌, ನಿವೃತ್ತ ಉಪಕಾರ್ಯದರ್ಶಿಗಳಾದ ಪಿ. ರಾಮನಾಥ್‌ ಹಾಗೂ ದೇವರಾಜು ಸಮಿತಿಯಲ್ಲಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !