ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯವಿದ್ದವರಿಗಷ್ಟೇ ಮೀಸಲಾತಿ: ಸುಪ್ರೀಂ ಕೋರ್ಟ್‌

ಮೀಸಲಾತಿ ಪಟ್ಟಿ ಪರಿಷ್ಕರಣೆ ಸರ್ಕಾರಗಳ ಕರ್ತವ್ಯ: ಸುಪ್ರೀಂ ಕೋರ್ಟ್‌
Last Updated 23 ಏಪ್ರಿಲ್ 2020, 20:30 IST
ಅಕ್ಷರ ಗಾತ್ರ

ನವದೆಹಲಿ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಅಗತ್ಯವಿರುವವರಿಗೆ ಮೀಸಲಾತಿಯ ಅನುಕೂಲಗಳು ದೊರೆಯುವಂತೆ ಮಾಡಲು, ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸಬೇಕು. ಇದು ಸರ್ಕಾರದ ಕರ್ತವ್ಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ಆದೇಶ ನೀಡಿದೆ.

‘ಮೀಸಲಾತಿಯ ಫಲಾನುಭವಿಗಳಾಗಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದೊಳಗೇ ಹಲವು ತೊಡಕುಗಳಿವೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲೇ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದ ವರ್ಗಗಳಿವೆ. ಆದರೆ, ಈ ಜಾತಿ ಮತ್ತು ಪಂಗಡಗಳಲ್ಲಿ ಕೆಲವು ವರ್ಗಗಳು ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಕಾರ್ಯಕ್ರಮಗಳಿಂದ ವಂಚಿತವಾಗಿವೆ. ಹೀಗೆ ವಂಚಿತವಾದ ವರ್ಗಗಳಿಗೆ ಮೀಸಲಾತಿಯ ಅನುಕೂಲಗಳು ದೊರೆಯುತ್ತಿಲ್ಲ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

‘ಮೀಸಲಾತಿಯ ಪ್ರಮಾಣವನ್ನು ಬದಲಿಸದೆಯೇ, ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸಲು ಸಾಧ್ಯವಿದೆ. 70 ವರ್ಷಗಳಿಂದ ಮೀಸಲಾತಿಯಿಂದ ಮತ್ತು ಮೀಸಲಾತಿಯ ವ್ಯಾಪ್ತಿಗೆ ಬಂದ ನಂತರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದವರಿಗೆ ಮೀಸಲಾತಿಯ ಅನುಕೂಲ ದೊರಯದಂತೆ ತಡೆಯಬಹುದು. ನಂತರ ನಿಜವಾಗಿಯೂ ಮೀಸಲಾತಿಗೆ ಅರ್ಹರಾದವರಿಗೆ ಅದರ ಪ್ರಯೋಜನ ದೊರೆಯುವಂತೆ ಮಾಡಬಹುದು. ಸರ್ಕಾರಗಳು ಈ ದಿಸೆಯಲ್ಲಿ ಕೆಲಸ ಮಾಡಬೇಕು’ ಎಂದು ಪೀಠವು ಹೇಳಿದೆ.

‘ರಾಜ್ಯಪಟ್ಟಿಯ ಅಡಿ ರಾಜ್ಯ ಸರ್ಕಾರಗಳು ನೀಡುತ್ತಿರುವ ಮೀಸಲಾತಿಯನ್ನು ಬದಲಿಸಬಹುದು ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ 9 ಸದಸ್ಯರ ಪೀಠ ಹೇಳಿತ್ತು. ಹೀಗಾಗಿ ಸರ್ಕಾರಗಳು ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸುವುದು ಕಡ್ಡಾಯ. ಮೀಸಲಾತಿ ಪರಿಷ್ಕರಣೆಗೆ ಸಂವಿಧಾನದ ಬೆಂಬಲವಿರುತ್ತದೆ’ಎಂದು ಈ ಪೀಠವು ಹೇಳಿದೆ.

ಆಂಧ್ರಪ್ರದೇಶ ಸರ್ಕಾರವು ತನ್ನ ಗುಡ್ಡಗಾಡು ಜಿಲ್ಲೆಗಳಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಶೇ 100ರಷ್ಟು ಹುದ್ದೆಗಳನ್ನು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಿಡಲು ಮುಂದಾಗಿತ್ತು. ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಂತರ ಸರ್ಕಾರದ ಈ ನಿರ್ಧಾರಕ್ಕೆ ಪೀಠವು‌ ತಡೆ ನೀಡಿದೆ.

‘ಹೀಗೆ ಒಂದೇ ವರ್ಗಕ್ಕೆ ಶೇ 100ರಷ್ಟು ಮೀಸಲಾತಿ ನೀಡುವುದು ಸಂವಿಧಾನಕ್ಕೆ ವಿರುದ್ಧವಾದುದು ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ. ಹೀಗಾಗಿ ಮೀಸಲಾತಿಯ ವ್ಯಾಪ್ತಿಯಲ್ಲಿ ಬರುವ ವರ್ಗಗಳಲ್ಲೇ ಅಗತ್ಯವಿರುವವರಿಗೆ ಮೀಸಲಾತಿ ದೊರೆಯುವಂತೆ ಮಾಡಬೇಕು’ ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT