ಬುಧವಾರ, ಫೆಬ್ರವರಿ 19, 2020
31 °C
ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಅತೃಪ್ತಿ: ವಿಪಕ್ಷ ಮತ್ತು ಬಿಜೆಪಿ ಮಿತ್ರಪಕ್ಷದಿಂದಲೂ ಆಕ್ಷೇಪ

ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದ ಸುಪ್ರೀಂ ಕೋರ್ಟ್‌: ಹುಯಿಲು ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿಯು ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಕೇಂದ್ರದ ಆಡಳಿತಾರೂಢ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆ ಇದೆ. ವಿರೋಧ ಪಕ್ಷಗಳು ಮಾತ್ರವಲ್ಲದೆ, ಬಿಜೆಪಿಯ ಮಿತ್ರ ಪಕ್ಷ ಕೂಡ ಈ ತೀರ್ಪಿನ ವಿರುದ್ಧ ಧ್ವನಿ ಎತ್ತಿದೆ. 

ಉತ್ತರಾಖಂಡದ ಬಿಜೆಪಿ ನೇತೃತ್ವದ ಸರ್ಕಾರವು ಬಡ್ತಿಯಲ್ಲಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸಿಲ್ಲ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ ಏನು ಎಂದು ಪ್ರಶ್ನಿಸಿದೆ. 

ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಬಿಜೆಪಿಯ ಮಿತ್ರಪಕ್ಷ ಲೋಕ ಜನಶಕ್ತಿ ಪಕ್ಷವು (ಎಲ್‌ಜೆಪಿ) ಅಸಮಾಧಾನ ವ್ಯಕ್ತಪಡಿಸಿದೆ. ಮೀಸಲಾತಿ ಸೌಲಭ್ಯ ಇರುವ ಸಮುದಾಯದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿಯೂ ಮೀಸಲು ದೊರೆಯುವುದನ್ನು ಖಾತರಿಪಡಿ
ಸುವಂತಹ ಕ್ರಮವನ್ನು ಕೇಂದ್ರ ಸರ್ಕಾರವು ತಕ್ಷಣವೇ ಕೈಗೊಳ್ಳಬೇಕು ಎಂದು ಎಲ್‌ಜೆಪಿ ಒತ್ತಾಯಿಸಿದೆ. 

ಸುಪ್ರೀಂ ಕೋರ್ಟ್‌ನ ತೀರ್ಪು ಮೀಸಲಾತಿಯ ಪರಿಕಲ್ಪನೆಗೆ ವಿರುದ್ಧವಾಗಿದೆ. ಸಂವಿಧಾನವು ನೀಡಿರುವ ಮೀಸಲಾತಿಯ ಮರುಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದು ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ. 

‘ಈ ತೀರ್ಪಿನ ವಿರುದ್ಧದ ಅತೃಪ್ತಿಯನ್ನು ಗೌರವಪೂರ್ವಕವಾಗಿಯೇ ನಾವು ಮುಂದಿಡುತ್ತಿದ್ದೇವೆ. ಸರ್ಕಾರದಲ್ಲಿ ಮಹತ್ವದ ಹುದ್ದೆಗಳಲ್ಲಿ ಇರುವವರು ಈಗ ಮೀಸಲಾತಿಯನ್ನು ವಿರೋಧಿಸುತ್ತಿರುವುದು ದುರದೃಷ್ಟಕರ’ಎಂದು ಕಾಂಗ್ರೆಸ್‌ ಮುಖಂಡ ಮುಕುಲ್‌ ವಾಸ್ನಿಕ್‌ ಹೇಳಿದ್ದಾರೆ. 

ಮೀಸಲಾತಿ ನೀತಿಯ ಕುರಿತು ಮರುಚಿಂತನೆ ಆಗಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಈ ಹಿಂದೆ ಹೇಳಿದ್ದನ್ನು ವಾಸ್ನಿಕ್‌ ಉಲ್ಲೇಖಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ಸಮುದಾಯಗಳ ಬಗ್ಗೆ ಬಿಜೆಪಿಯ ನಿಲುವು ಏನು ಎಂದು ಅವರು
ಪ್ರಶ್ನಿಸಿದ್ದಾರೆ. 

ಮೀಸಲಾತಿ ವಿಚಾರದಲ್ಲಿ, ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಭಿನ್ನ ನಿಲುವನ್ನು ಪ್ರತಿಪಾದಿಸಿದ್ದವು. ಹೀಗಾಗಿ, ಈ ದ್ವಂದ್ವದ ಬಗ್ಗೆ ಬಿಜೆಪಿ ಸ್ಪಷ್ಟೀಕರಣ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ಉದಿತ್‌ ರಾಜ್‌ ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪು

ನೇಮಕಾತಿ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡಲೇಬೇಕು ಎಂದು ರಾಜ್ಯಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ನೀಡಿತ್ತು. ಉತ್ತರಾಖಂಡದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡುವಾಗ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿತ್ತು. ಮೀಸಲಾತಿಯು ಮೂಲಭೂತ ಹಕ್ಕು ಅಲ್ಲ ಎಂದು ತೀರ್ಪಿನಲ್ಲಿ ಹೇಳಿತ್ತು. 

ಸಂವಿಧಾನ ತಿದ್ದುಪಡಿ: ಖರ್ಗೆ ಆಗ್ರಹ

ಬೆಂಗಳೂರು: ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ತಕ್ಷಣ ಮೇಲ್ಮನವಿ ಸಲ್ಲಿಸಬೇಕು. ಸಂವಿಧಾನದ ಪರಿಚ್ಛೇದಕ್ಕೆ ತಿದ್ದುಪಡಿ ತಂದು ಎಲ್ಲ ರಾಜ್ಯಗಳಲ್ಲೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

‘ಕೇಂದ್ರ ಸರ್ಕಾರದ ಕುಮ್ಮಕ್ಕು ಇಲ್ಲದೆ ಇಂತಹ ತೀರ್ಪು ಬರುವುದಿಲ್ಲ. ಮುಖ್ಯವಾಗಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪರಿಶಿಷ್ಟರಿಗೆ ದೊರೆತಿರುವ ಮೀಸಲಾತಿ ಸೌಲಭ್ಯ ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿ, ಸಂವಿಧಾನ ಪೀಠದಿಂದ ಪ್ರಕರಣದ ವಿಚಾರಣೆ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಈ ತೀರ್ಪಿನಿಂದ ಕರ್ನಾಟಕಕ್ಕೆ ತೊಂದರೆಯೇನೂ ಇಲ್ಲ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿ ಸವಿಸ್ತಾರ ವಿಚಾರ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ. ಮಾಹಿತಿ ಸಂಗ್ರಹಿಸಿ ಬಡ್ತಿ ಮೀಸಲಾತಿ ನೀಡುವುದಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಸಮಸ್ಯೆಯಾಗದು. ಆದರೆ ಹಲವು ರಾಜ್ಯಗಳಲ್ಲಿ ಮೀಸಲಾತಿಗೆ ಅಪಾಯ ಬರುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

ದೌರ್ಜನ್ಯ ತಡೆ: ಇಂದು ತೀರ್ಪು

ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಮೇಲಿನ ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2018 ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಕಟಿಸಲಿದೆ. ಈ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಆರೋಪಗಳು ಸುಳ್ಳು ಎಂಬ ಬಲವಾದ ಸಂಶಯ ಇದ್ದಾಗ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಬಹುದೇ ಎಂಬ ಬಗ್ಗೆ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ವಿನೀತ್ ಶರಣ್‌ ಮತ್ತು ಎಸ್.ರವೀಂದ್ರ ಭಟ್‌ ಅವರ ಪೀಠವು ತೀರ್ಪು ನೀಡಲಿದೆ. 

ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಿಸುವ ಮುನ್ನ ಪೂರ್ವಭಾವಿ ತನಿಖೆ ನಡೆಸಬೇಕು ಮತ್ತು ಆರೋಪಿಯ ಬಂಧನಕ್ಕೆ ಮುಂಚೆ ಮೇಲಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ 2018ರಲ್ಲಿ ತೀರ್ಪು ನೀಡಿತ್ತು. 

ಆದರೆ, ಈ ತೀರ್ಪಿನ ವಿರುದ್ಧ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾಯ್ದೆಯಲ್ಲಿ ಇರುವ ಕಠಿಣ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿದ್ದವು. ಹಾಗಾಗಿ, ಕೇಂದ್ರ ಸರ್ಕಾರವು ಕಾಯ್ದೆಗೆ 2018ರ ಆಗಸ್ಟ್‌ನಲ್ಲಿ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್‌ ತೀರ್ಪನ್ನು ಅಸಿಂಧುಗೊಳಿಸಿತ್ತು. 

ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸಬೇಕು ಎಂಬ ಅರ್ಜಿಯನ್ನೂ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. 2018ರಲ್ಲಿ ನೀಡಿದ್ದ ತೀರ್ಪನ್ನು 2019ರ ಅಕ್ಟೋಬರ್‌ 1ರಂದು ಸುಪ್ರೀಂ ಕೋರ್ಟ್‌ ಹಿಂದಕ್ಕೆ ಪಡೆದಿತ್ತು. ಹಾಗಿದ್ದರೂ ಪೃಥ್ವಿರಾಜ್‌ ಚೌಹಾಣ್‌ ಮತ್ತು ಪ್ರಿಯಾ ಶರ್ಮಾ ಅವರು ಸಲ್ಲಿಸಿರುವ ಅರ್ಜಿಗಳು ಬಾಕಿ ಇದ್ದು, ತೀರ್ಪು ಸೋಮವಾರ ಪ್ರಕಟವಾಗಲಿದೆ. 

***

* ಸರ್ಕಾರದ ಮೇಲೆ ಒತ್ತಡ ಹೇರುವ ಯತ್ನ

* ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ನೇತೃತ್ವದಲ್ಲಿ ಎಸ್‌ಸಿ/ಎಸ್‌ಟಿ ಸಂಸದರ ಸಭೆ ಇಂದು

* ಬಡ್ತಿ ಮೀಸಲು ಖಾತರಿಗೆ ಸಂಸತ್ತಿನಲ್ಲಿ ಮತ್ತು ಹೊರಗೆ ಒತ್ತಡ ಹೇರಲು ಕಾಂಗ್ರೆಸ್‌ ನಿರ್ಧಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು