ಬುಧವಾರ, ನವೆಂಬರ್ 20, 2019
27 °C
ಜಮ್ಮು–ಕಾಶ್ಮೀರ, ಲಡಾಖ್‌: ಪ್ರಕ್ಷುಬ್ಧ ಪ್ರದೇಶ ಘೋಷಿಸುವ ಹಕ್ಕು ಉಳಿಸಿಕೊಂಡ ಗೃಹ ಇಲಾಖೆ

ಕೇಂದ್ರದ ಬಳಿ ವಿಶೇಷ ಪರಮಾಧಿಕಾರ

Published:
Updated:
Prajavani

ನವದೆಹಲಿ/ಶ್ರೀನಗರ: ನೂತನವಾಗಿ ರಚನೆಯಾದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿರುವ ಯಾವುದೇ ಪ್ರದೇಶವನ್ನು ಸಶಸ್ತ್ರ ಪಡೆಗಳ(ವಿಶೇಷಾಧಿಕಾರ) ಕಾಯ್ದೆಯಡಿ (ಎಎಫ್‌ಎಸ್‌ಪಿಎ) ‘ಪ್ರಕ್ಷುಬ್ಧ’ ಎಂದು ಘೋಷಿಸುವ ಅಧಿಕಾರ ಕೇಂದ್ರ ಸರ್ಕಾರ ಬಳಿಯೇ ಇರಲಿದೆ.

ಈ ಕಾಯ್ದೆಯಡಿ ಸಶಸ್ತ್ರ ಪಡೆಗಳು ‘ಪ್ರಕ್ಷುಬ್ಧ’ ಪ್ರದೇಶದಲ್ಲಿ ಶಂಕಿತರ ವಿರುದ್ಧ ಕಾರ್ಯಾಚರಣೆ ನಡೆಸುವ ಅಧಿಕಾರ ನೀಡಲಾಗಿದೆ. ಈ ಪ್ರದೇಶದಲ್ಲಿ ಭದ್ರತಾ ಪಡೆ ಅಧಿಕಾರಿಗಳು ಯಾವುದೇ ವಾರೆಂಟ್‌ ಇಲ್ಲದೆ ಪರಿಶೀಲಿಸುವ, ಬಂಧಿಸುವ ಅಥವಾ ಗುಂಡಿಕ್ಕುವ ಅಧಿಕಾರವನ್ನು ಹೊಂದಿರುತ್ತಾರೆ.

ಗುರುವಾರದವರೆಗೂ (ಕೇಂದ್ರಾಡಳಿತ ಪ್ರದೇಶವಾಗುವ ಮುನ್ನ) ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರವು ಎಎಫ್‌ಎಸ್‌ಪಿಎ ಅಡಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮುಖಾಂತರ ಒಂದು ಜಿಲ್ಲೆಯನ್ನು ಅಥವಾ ಪೋಲಿಸ್‌ ಠಾಣಾ ವ್ಯಾಪ್ತಿಯನ್ನು ‘ಪ್ರಕ್ಷುಬ್ಧ’ ಎಂದು ಘೋಷಿಸುವ ಅಧಿಕಾರವನ್ನು ಹೊಂದಿತ್ತು. 1990ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಎಎಫ್‌ಎಸ್‌ಪಿಎ ಕಾಯ್ದೆ ಜಾರಿಯಲ್ಲಿದೆ.   ಕೇಂದ್ರದ ಅಧಿಸೂಚನೆಯಂತೆ ಎರಡೂ ಕೇಂದ್ರಾಡಳಿತ ಪ್ರದೇಶಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಇಲಾಖೆ ಅಡಿ ಬರಲಿವೆ. ಇದು ಕೇಂದ್ರ ಗೃಹ ಸಚಿವಾಲಯ ಅಡಿ ಕಾರ್ಯನಿರ್ವಹಿಸಲಿದೆ. ಎರಡೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್‌ ಇಲಾಖೆಯನ್ನು ಆಯಾ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ಗೃಹ  ಸಚಿವಾಲಯ ನಿರ್ವಹಿಸಲಿದೆ.  

ಉಚ್ಚಾಟನೆ:  ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಜೆ.ಸಿ.ಮುರ್ಮು ಗುರುವಾರ ಅಧಿಕಾರ ಸ್ವೀಕರಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ರಾಜ್ಯಸಭೆ ಸದಸ್ಯ ನಜೀರ್‌ ಅಹ್ಮದ್‌ ಲಾವೆ ಅವರನ್ನು ಪಿಡಿಪಿ ಉಚ್ಚಾಟಿಸಿದೆ. ‘ನಜೀರ್‌ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವ ದಿಂದ ಉಚ್ಚಾಟಿಸಲಾಗಿದೆ’ ಎಂದು ಪಿಡಿಪಿ ತಿಳಿಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಮಸೂದೆ ಮಂಡಿಸಿದ್ದಾಗ, ಮಸೂದೆ ವಿರೋಧಿಸಿ ಪಿಡಿಪಿ ರಾಜ್ಯ ಸಭೆ ಸದಸ್ಯರಾದ ಮಿರ್‌ ಮಹಮ್ಮದ್‌ ಫಯಾಜ್‌ ಮತ್ತು ನಜೀರ್‌ ಅಹ್ಮದ್‌ ಸಂವಿಧಾನದ ಪ್ರತಿಯನ್ನು ಹರಿದು ಹಾಕಿದ್ದರು.

ಉಗ್ರರಿಗೆ ಶೋಧ: ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದಲ್ಲಿ ಭದ್ರತಾ ಪಡೆಗಳು ಉಗ್ರರಿಗಾಗಿ ಕಾರ್ಯಾ
ಚರಣೆಯನ್ನು ಶುಕ್ರವಾರ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶ್ರೀನಗರದ ಕೆಲವೆಡೆ ನಿರ್ಬಂಧ

ಪಾರ್ಥನೆಗೆ ಸೇರುವ ಜನರು ಹಿಂಸಾತ್ಮಕವಾದ ಪ್ರತಿಭಟನೆ ನಡೆಸಬಹುದು ಎನ್ನುವ ಶಂಕೆಯಿದ್ದ ಕಾರಣ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಶ್ರೀನಗರದ ಕೆಲ ಪ್ರದೇಶಗಳಲ್ಲಿ ಶುಕ್ರವಾರ ನಿರ್ಬಂಧ ಹೇರಲಾಗಿತ್ತು. 

‘ಶುಕ್ರವಾರ ಹಳೆ ನಗರದ ಐದು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮತ್ತು ಸೌರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದೆ. ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆಗೊಂಡ ನಂತರದಲ್ಲಿ ಪ್ರತಿಭಟನೆಗಳು ನಡೆದು, ಹಿಂಸಾತ್ಮಕ ಘಟನೆಗಳು ನಡೆಯಬಹುದು ಎನ್ನುವ ಶಂಕೆ ಇರುವ ಕಾರಣದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.     

ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಆತಂಕದಲ್ಲಿ ಪಾಲಕರು: ಮೂರು ತಿಂಗಳುಗಳಿಂದ ಶಾಲೆ ಪುನರಾರಂಭಿಸಲು ಸರ್ಕಾರ ಪ್ರಯತ್ನಿಸುತ್ತಿದ್ದರೂ, ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಹತ್ತನೇ ಮತ್ತು ದ್ವಿತೀಯ ಪಿಯು ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಮಕ್ಕಳ ಪಾಲಕರು ಕಾದು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೂರವಾಣಿ ಮತ್ತು ಪೋಸ್ಟ್ ಪೇಯ್ಡ್ ಮೊಬೈಲ್‌ ಸೇವೆಗಳು ಪುನರಾರಂಭವಾಗಿದ್ದರೂ, ಆಗಸ್ಟ್‌ 5ರಿಂದ ಸ್ಥಗಿತಗೊಂಡಿದ್ದ ಅಂತರ್ಜಾಲ ಸೇವೆ ಪುನರಾರಂಭವಾಗಿಲ್ಲ.   

 

ಪ್ರತಿಕ್ರಿಯಿಸಿ (+)