ಮಂಗಳವಾರ, ನವೆಂಬರ್ 19, 2019
29 °C

ರೈಲ್ವೆ ಮಂಡಳಿಯ 50 ಅಧಿಕಾರಿಗಳ ವರ್ಗಕ್ಕೆ ನಿರ್ಧಾರ

Published:
Updated:

ನವದೆಹಲಿ: ರೈಲ್ವೆ ಮಂಡಳಿಯಲ್ಲಿ ಅಧಿಕಾರಿಗಳ ಸಂಖ್ಯೆಯನ್ನು ಶೇ 25 ರಷ್ಟು ಕಡಿತಗೊಳಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದ್ದು, ನಿರ್ದೇಶಕರ ಮಟ್ಟದ ಮತ್ತು ಅದಕ್ಕಿಂತ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳನ್ನು ರೈಲ್ವೆ ವಲಯಗಳಿಗೆ ವರ್ಗಾಯಿಸಿ ದಕ್ಷತೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಯನ್ನು 2000ದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ರೂಪಿಸಿತ್ತು. ರೈಲ್ವೆ ಮಂಡಳಿಯನ್ನು ಸರಿಯಾದ ಗಾತ್ರಕ್ಕೆ ತಂದು, ನಿಗದಿತ ಸಂಖ್ಯೆಯಲ್ಲಿ ಅಧಿಕಾರಿಗಳಿರಬೇಕು ಎಂದು ಉನ್ನತ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ದೀರ್ಘ ಕಾಲದಿಂದ ಹಾಗೆಯೇ ಉಳಿದಿದ್ದ ಈ ಯೋಜನೆಗೆ ಈಗ ಚಾಲನೆ ದೊರಕಿದೆ. 

‘ಮಂಡಳಿಯಲ್ಲಿ ಸದ್ಯ 200 ಅಧಿಕಾರಿಗಳು ಇದ್ದಾರೆ. ಈ ಪೈಕಿ 50 ಮಂದಿಯನ್ನು ರೈಲ್ವೆ ವಲಯಗಳಿಗೆ ವರ್ಗಾಯಿಸಲಾಗುವುದು. ಈ ಯೋಜನೆ ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳಲಿದೆ’ ಎಂದು ಮೂಲಗಳು ತಿಳಿಸಿವೆ.

ಈ ಕ್ರಮವು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರ 100 ದಿನಗಳ ಕಾರ್ಯಸೂಚಿಯ ಭಾಗ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್‌ ಅವರ ಆದ್ಯತೆಯಾಗಿದೆ. 

‘ರೈಲ್ವೆ ಮಂಡಳಿ ಸೇರಿದಂತೆ ಇಲಾಖೆಯಲ್ಲಿ ಹೆಚ್ಚಿನ ಸಿಬ್ಬಂದಿ ಇದ್ದಾರೆ. ಅಗತ್ಯವಿರುವಷ್ಟು ಸಿಬ್ಬಂದಿ ಇರುವಂತೆ ಪರಿಶೀಲನೆ ನಡೆಸಲು ಈವರೆಗೂ ಯಾವುದೇ ಗಂಭೀರ ಪ್ರಯತ್ನ ನಡೆದಿಲ್ಲ. ರೈಲ್ವೆ ಇಲಾಖೆ ಪ್ರಗತಿ ಸಾಧಿಸದಿರಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)