₹35 ಸಾವಿರಕ್ಕಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಉಪಾಧ್ಯಕ್ಷನ ಕೊಲೆ, ಆರೋಪಿಯ ಬಂಧನ

7
ಮುಂಬೈನಲ್ಲಿ ಘಟನೆ

₹35 ಸಾವಿರಕ್ಕಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಉಪಾಧ್ಯಕ್ಷನ ಕೊಲೆ, ಆರೋಪಿಯ ಬಂಧನ

Published:
Updated:

ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್‌ ಉಪಾಧ್ಯಕ್ಷ ಸಿದ್ಧಾರ್ಥ ಸಂಘ್ವಿ (39) ಎಂಬುವವರು ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಪ್ರಕರಣವನ್ನು ಭೇದಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೆಪ್ಟೆಂಬರ್‌ 5ರಿಂದ ಕಾಣೆಯಾಗಿದ್ದ ಸಿ‌ದ್ಧಾರ್ಥ ಅವರ ಶವವು ಠಾಣೆ ಜಿಲ್ಲೆಯ ಕಲ್ಯಾಣ ಬಳಿ ಸೋಮವಾರ ಪತ್ತೆಯಾಗಿದ್ದು, ಕೊಲೆ ಅನುಮಾನ ವ್ಯಕ್ತವಾಗಿತ್ತು. ಕ್ಯಾಬ್‌ ಚಾಲಕ ಸರ್ಫ್‌ರಾಜ್‌ ಶೇಖ್‌ (20) ಎಂಬುವನನ್ನು ಬಂಧಿಸಲಾಗಿದ್ದು, ₹35ಸಾವಿರಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿಯು ಹಣಕ್ಕಾಗಿ ಈ ಕೊಲೆ ಮಾಡಿರುವುದು ಕಂಡುಬಂದಿದೆ. ಹಣ ಕೊಡಲು ನಿರಾಕರಿಸಿದಾಗ ಸಿದ್ಧಾರ್ಥ ಅವರನ್ನು ಚಾಕುವಿನಿಂದ ಇರಿದಿದ್ದಾನೆ. ಅವರ ಕಾರಿನಲ್ಲಿ ಶವವನ್ನು ಹಾಕಿ ಕಲ್ಯಾಣದ ಹಾಜಿ ಮಾಲಂಗ್‌ ಪ್ರದೇಶದಲ್ಲಿ ಕಾರನ್ನು ಬಿಟ್ಟು ಬಂದಿದ್ದ’ ಎಂದು ಪೊಲೀಸ್‌ ಅಧಿಕಾರಿ ಅಭಿನಾಶ್‌ಕುಮಾರ್‌ ಹೇಳಿದ್ದಾರೆ. 

ಏನಿದು ಪ್ರಕರಣ?
ಮುಂಬೈನ ಮಲಬಾರ್‌ ಹಿಲ್‌ ಪ್ರದೇಶದಲ್ಲಿ ಕುಟುಂಬದೊಂದಿಗೆ ವಾಸವಿದ್ದ ಸಿದ್ಧಾರ್ಥ ಸೆಪ್ಟೆಂಬರ್‌ 5ರಿಂದ ಕಾಣೆಯಾಗಿದ್ದರು. ಕೊಲೆಯ ಬಗ್ಗೆ ಪೊಲೀಸರು ತನಿಖೆ ಕೈಗೊಂಡಾಗ ಸಂಘ್ವಿಯ ಕಾರು ಚಾಲಕ ಆರೋಪಿ ಸರ್ಫ್‌ರಾಜ್‌ ಶೇಖ್‌ ಪರಾರಿಯಾಗಿರುವುದು ಮತ್ತು ಸಿದ್ಧಾರ್ಥ ಕಾರು ಮನೆ ಬಳಿ ನಿಂತಿರುವ ವಿಚಾರ ಪೊಲೀಸರಿಗೆ ತಿಳಿಯಿತು. ಶೇಖ್‌ಗೆ ಸಾಲದ ಬಾಕಿ ಕಟ್ಟುವ ಸಲುವಾಗಿ ₹30ರಿಂದ ₹35ಸಾವಿರ ಹಣದ ಅವಶ್ಯಕತೆಯಿತ್ತು. ಹಣ ನೀಡುವಂತೆ ಸಿದ್ದಾರ್ಥ ಬಳಿ ಬೇಡಿಕೆ ಇಟ್ಟಿದ್ದ. ಆದರೆ ಸಿದ್ದಾರ್ಥ ಇದನ್ನು ನಿರಾಕರಿಸಿದ್ದರು. ಹಾಗಾಗಿ ಮನೆಯ ಕಾಂಪೌಂಡ್ ಸುತ್ತಮುತ್ತ ಚಾಕು ಹಿಡಿದು ಸುತ್ತಾಡುತ್ತಿದ್ದ ಶೇಖ್ ಹಲವು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಸಿದ್ದಾರ್ಥ ಸಂಗ್ವಿ ಯಾರು?
ಸಿದ್ಧಾರ್ಥ ಸಂಘ್ವಿ ಎಚ್‌ಡಿಎಫ್‌ಸಿ ಬ್ಯಾಂಕ್ ಅಧಿಕಾರಿ. ಇವರು ದಕ್ಷಿಣ ಮುಂಬೈಯಲ್ಲಿ ತಮ್ಮ ಪತ್ನಿ, ಪೋಷಕರು, ನಾಲ್ಕು ವರ್ಷದ ಮಗನೊಟ್ಟಿಗೆ ವಾಸವಾಗಿದ್ದರು. ಇವರು ಮುಂಬೈನ ಕೇಂದ್ರ ಬಿಂದು ಕಮಲ ಮಿಲ್ಸ್ ಬಳಿಯ  ಎಚ್‌ಡಿಎಫ್‌ಸಿ ಬ್ಯಾಂಕ್‌ ನಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸಿದ್ಧಾರ್ಥ ಸೆ.5ರಂದು ಬೆಳಿಗ್ಗೆ ಮನೆಯಿಂದ ಕಚೇರಿಗೆ ತೆರಳುವ ದಾರಿ ಮಧ್ಯೆ ಕಾಣೆಯಾಗಿದ್ದರು. ಇವರು ಪ್ರತಿದಿನ ಕೆಲಸ ಮುಗಿಯುತ್ತಿದ್ದಂತೆ ಮನೆಗೆ ದೂರವಾಣಿ ಕರೆ ಮಾಡುತ್ತಿದ್ದರು. ರಾತ್ರಿ 8.30 ಆದರೂ ಕರೆ ಬಾರದಿದ್ದಕ್ಕೆ ಗಾಬರಿಗೊಂಡ ಕುಟುಂಬದವರು ಪುನಃ ಕರೆ ಮಾಡಿದರು. ಆದರೆ ಅವರಿಗೆ ಕರೆ ತಲುಪುತ್ತಿರಲಿಲ್ಲ. ಸಹೋದ್ಯೋಗಿಗಳ ಬಳಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ದೊರೆಯದ ಕಾರಣ ಎನ್‌ಎಮ್ ಜೋಶ್ ಮರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !