ಮಂಗಳವಾರ, ಸೆಪ್ಟೆಂಬರ್ 22, 2020
26 °C

ಬುಲೆಟ್‌ ಬೈಕ್‌ಗಳಲ್ಲಿ ಸಿಆರ್‌ಪಿಎಫ್‌ನ 65 ಮಹಿಳಾ ಬೈಕರ್‌ಗಳು; ರಾಜಪಥದಲ್ಲಿ ಪರೇಡ್

ಪಿಟಿಐ Updated:

ಅಕ್ಷರ ಗಾತ್ರ : | |

ಸಿಆರ್‌ಪಿಎಫ್‌ನ ಮಹಿಳಾ ಬೈಕರ್‌ಗಳು ಗಣರಾಜ್ಯೋತ್ಸವ ಪರೇಡ್‌ ಪ್ರದರ್ಶನಕ್ಕಾಗಿ ತಾಲೀಮು ನಡೆಸುತ್ತಿರುವುದು

ನವದೆಹಲಿ: ರಾಜಪಥದಲ್ಲಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇದೇ ಮೊದಲ ಬಾರಿಗೆ ಸಿಆರ್‌ಪಿಎಫ್‌ನ ಮಹಿಳಾ ಬೈಕರ್‌ಗಳ ತುಕಡಿ ರೋಮಾಂಚನಕಾರಿ ಸಾಹಸ ಪ್ರದರ್ಶನ ನೀಡಲಿದೆ. 

350ಸಿಸಿ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಮೋಟಾರ್‌ಸೈಕಲ್‌ಗಳಲ್ಲಿ 65 ಮಹಿಳಾ ಸದಸ್ಯರನ್ನು ಒಳಗೊಂಡ ತಂಡ ಸುಮಾರು 90 ನಿಮಿಷ ಚಮತ್ಕಾರದ ಪ್ರದರ್ಶನ ನೀಡಲು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಿಆರ್‌ಪಿಎಫ್‌ ಮಹಿಳಾ ಬೈಕರ್‌ಗಳು ಪ್ರದರ್ಶನ ನೀಡುತ್ತಿರುವುದು ವಿಶೇಷ. 

'ಮಹಿಳಾ ಪಡೆಯನ್ನು ಎಲ್ಲ ವಲಯಗಳ ಕರ್ತವ್ಯಗಳಿಗೆ ನಿಯೋಜಿಸುವ ನಿಟ್ಟಿನಲ್ಲಿ 2014ರಲ್ಲಿ ಮಹಿಳಾ ಬೈಕರ್‌ಗಳ ಪಡೆಯನ್ನು ರಚಿಸಲಾಯಿತು' ಎಂದು ಸಿಆರ್‌ಪಿಎಫ್‌ ವಕ್ತಾರ ಡಿಐಜಿ ಮೋಸೆಸ್‌ ಧಿನಕರನ್‌ ತಿಳಿಸಿದ್ದಾರೆ. 

ರ್‍ಯಾಪಿಡ್ ಆ್ಯಕ್ಷನ್‌ ಫೋರ್ಸ್‌ನಲ್ಲಿ (ಆರ್‌ಎಎಫ್‌) ನಿಯೋಜನೆಗೊಂಡಿರುವ ಇನ್‌ಸ್ಪೆಕ್ಟರ್‌ ಸೀಮಾ ನಾಗ್‌ ಮಹಿಳಾ ಬೈಕರ್‌ಗಳ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜಗತ್ತಿನ ಅತಿ ದೊಡ್ಡ ಪ್ಯಾರಾಮಿಲಿಟರಿ ಪಡೆಯಾಗಿರುವ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) 3.25 ಲಕ್ಷ ಸಿಬ್ಬಂದಿ ಹೊಂದಿದೆ. ಗಲಭೆ ನಿಯಂತ್ರಿಸುವ ವಿಶೇಷ ಪಡೆ ಆರ್‌ಎಎಫ್‌, ಸಿಆರ್‌ಪಿಎಫ್‌ನ ಭಾಗವಾಗಿದೆ. 

ಸಿಆರ್‌ಪಿಎಫ್‌ನ ತರಬೇತುದಾರರು ಮಹಿಳಾ ಬೈಕರ್‌ಗಳ ತಂಡದ ಸದಸ್ಯರನ್ನು ಆಯ್ಕೆ ಮಾಡಿದ್ದು, ಸದಸ್ಯರು 25ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ. ಸಿಆರ್‌ಪಿಎಫ್‌ನ ವಿವಿಧ ಘಟಕಗಳಿಂದ ಬೈಕರ್‌ಗಳ ತಂಡಕ್ಕೆ ಆಯ್ಕೆ ನಡೆಸಲಾಗಿದೆ. 

ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನುಮದಿನ ಪ್ರಯುಕ್ತ ಕಳೆದ ವರ್ಷ ಅಕ್ಟೋಬರ್‌ 31ರಂದು ಗುಜರಾತ್‌ನ ಕೆವಡಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದೇ ಬೈಕರ್‌ಗಳ ತಂಡ ಪ್ರದರ್ಶನ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಸಿಆರ್‌ಪಿಎಫ್‌ 1986ರಲ್ಲಿ ಏಷ್ಯಾ ವಲಯದ ಮೊದಲ ಸಶಸ್ತ್ರ ಪಡೆಯನ್ನು ರಚಿಸಿತು. ಪ್ರಸ್ತುತ 1000 ಮಹಿಳಾ ಸಿಬ್ಬಂದಿ ಹೊಂದಿರುವ ಆರು ಘಟಕಗಳನ್ನು ಒಳಗೊಂಡಿದೆ. 

2015ರಲ್ಲಿ ಭೂಸೇನೆ, ವಾಯು ಪಡೆ ಹಾಗೂ ನೌಕಾ ಪಡೆಯ ಮಹಿಳಾ ತಂಡ ಮೊದಲ ಬಾರಿಗೆ ರಾಷ್ಟ್ರೀಯ ಮಾರ್ಚಿಂಗ್‌ ಪರೇಡ್‌ನಲ್ಲಿ ಕಾಣಿಸಿಕೊಂಡವು. 2018ರಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಮಹಿಳಾ ಬೈಕರ್‌ಗಳ ತಂಡ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶನ ನೀಡಿತು. 

ಸಂಪ್ರದಾಯದಂತೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಿಎಸ್‌ಎಫ್‌ ಮತ್ತು ಸೇನಾ ಬೈಕರ್‌ಗಳ ತಂಡ ಪರ್ಯಾಯ ವರ್ಷದಲ್ಲಿ ಡೇರ್‌ಡೆವಿಲ್ಸ್‌ ಪ್ರದರ್ಶನ ನೀಡುವ ಮೂಲಕ ಕಾರ್ಯಕ್ರಮ ಕೊನೆಗೊಳ್ಳುತ್ತದೆ. ಈ ಬಾರಿ ಅವಕಾಶವನ್ನು ಸಿಆರ್‌ಪಿಎಫ್‌ ಮಹಿಳಾ ಬೈಕರ್‌ಗಳಿಗೆ ನೀಡಲಾಗಿದೆ. 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು