ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ: ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರ

7

ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ: ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರ

Published:
Updated:

ನವದೆಹಲಿ : ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಬಿಸಿ) ಸಾಂವಿಧಾನಿಕ ಸ್ಥಾನ ನೀಡುವ 2017ರ ಮಸೂದೆಗೆ ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿತು.

ಲೋಕಸಭೆ ಮಾಡಿದ ತಿದ್ದುಪಡಿಗಳೊಂದಿಗೆ ಮಸೂದೆಯು ಶಾಸನವಾಗಿ ಜಾರಿಗೆ ಬರಲು ಸಂಸತ್‌ನ ಮೇಲ್ಮನೆಯಲ್ಲಿ 156 ಮತಗಳ ಬೆಂಬಲ ಸಿಕ್ಕಿತು. ಸಂವಿಧಾನಕ್ಕೆ ತಿದ್ದುಪಡಿ ತರುವ ಈ ಮಸೂದೆಯ ಅಂಗೀಕಾರಕ್ಕೆ ಸಂಸತ್‌ನಲ್ಲಿ ಮೂರನೇ ಎರಡಷ್ಟು ಮತಗಳ ಅವಶ್ಯಕತೆ ಇತ್ತು. ಸಂಸತ್‌ನಲ್ಲಿ ಮಸೂದೆ ಅಂಗೀಕಾರಗೊಂಡಿರುವುದರಿಂದ ಸರ್ಕಾರ ತಕ್ಷಣವೇ ಆಯೋಗ ರಚನೆ ಮಾಡಲಿದೆ.

ರಾಜ್ಯಸಭೆಯು ಸಂವಿಧಾನ (123ನೇ ತಿದ್ದುಪಡಿ) ಮಸೂದೆ 2017ಕ್ಕೆ ಕೆಲವು ತಿದ್ದುಪಡಿ ಮಾಡಿ ಲೋಕಸಭೆಗೆ ವಾಪಸ್‌ ಕಳುಹಿಸಿತ್ತು. ಆದರೆ, ತಿದ್ದುಪಡಿಗಳನ್ನು ಲೋಕಸಭೆಯಲ್ಲಿ ವಜಾಗೊಳಿಸಿ ಇದೇ ಆಗಸ್ಟ್‌ 2ರಂದು ಮಸೂದೆಯನ್ನು ಅವಿರೋಧವಾಗಿ ಅಂಗೀಕರಿಸಲಾಗಿತ್ತು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಹಲವು ಸಂಸದರು ಧ್ವನಿ ಎತ್ತಿದರು.

ಸರ್ಕಾರವು ಜಾತಿ ಜನಗಣತಿಯನ್ನು ಸಾರ್ವಜನಿಕವಾಗಿ ಮಾಡಬೇಕು ಮತ್ತು ಅದಕ್ಕೆ ತಕ್ಕಂತೆ ಮೀಸಲಾತಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ನಾಲ್ವರು ಸದಸ್ಯರನ್ನು ಒಳಗೊಂಡ ಒಬಿಸಿ ಆಯೋಗದಲ್ಲಿ ಒಬ್ಬರು ಮಹಿಳೆ ಇರಬೇಕು ಎನ್ನುವುದು ಸೇರಿದಂತೆ ಕೆಲವು ತಿದ್ದುಪಡಿ ಸೂಚಿಸಿ ರಾಜ್ಯಸಭೆಯು ಕಳೆದ ವರ್ಷದ ಜುಲೈ 31ರಂದು ಈ ಮಸೂದೆಗೆ ಸಂಸತ್‌ನ ಕೆಳಮನೆಗೆ ವಾಪಸ್‌ ಕಳುಹಿಸಿತ್ತು.

ತಿದ್ದುಪಡಿ ಮಸೂದೆ ಮಂಡಿಸಿ ಸಂಸದರು ಅಂಗೀಕರಿಸಬೇಕೆಂದು ಮನವಿ ಮಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೋಟ್, ಕೇಂದ್ರ ಆಯೋಗಕ್ಕೂ ಮತ್ತು ರಾಜ್ಯ ಆಯೋಗಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಇದು ಕೇಂದ್ರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಇದು ರಾಜ್ಯ ಸರ್ಕಾರಗಳ ಹಕ್ಕು ಕಸಿಯುವುದಿಲ್ಲ. ಪ್ರತಿ ರಾಜ್ಯಗಳೂ ತಮ್ಮದೇ ಆದ ಹಿಂದುಳಿದ ವರ್ಗಗಳ ಆಯೋಗ ಹೊಂದಬಹುದು. ಅಲ್ಲದೆ, ವಿರೋಧ ಪಕ್ಷಗಳು ನೀಡಿರುವ ಸಲಹೆಯಂತೆ ಕೇಂದ್ರ ಆಯೋಗವು ಮಹಿಳಾ ಪ್ರತಿನಿಧಿ ಹೊಂದಿರಲಿದೆ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !