ಇಡುಮುಡಿಯಿಲ್ಲದೆ 18 ಮೆಟ್ಟಿಲು ಹತ್ತಿದ ಆರ್‌ಎಸ್‌ಎಸ್‌ ನಾಯಕ ವಲ್ಸನ್ ತಿಲ್ಲಂಕೇರಿ

7

ಇಡುಮುಡಿಯಿಲ್ಲದೆ 18 ಮೆಟ್ಟಿಲು ಹತ್ತಿದ ಆರ್‌ಎಸ್‌ಎಸ್‌ ನಾಯಕ ವಲ್ಸನ್ ತಿಲ್ಲಂಕೇರಿ

Published:
Updated:

ತಿರುವನಂತಪುರ: ಶಬರಿಮಲೆಯ 18 ಪವಿತ್ರ ಮೆಟ್ಟಿಲುಗಳನ್ನು ಇಡುಮುಡಿ ಇಲ್ಲದೆ ಹತ್ತುವ ಮೂಲಕ ಆರ್‌ಎಸ್‌ಎಸ್‌ ನಾಯಕ ಮತ್ತು ದೇಗುಲ ಮಂಡಳಿ ಅಧಿಕಾರಿ ವಲ್ಸನ್ ತಿಲ್ಲಂಕೇರಿ ಸಂಪ್ರದಾಯ ಉಲ್ಲಂಘಿಸಿದ್ದಾರೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. ‘ಶಬರಿಮಲೆಯನ್ನು ಆರ್‌ಎಸ್‌ಎಸ್‌ ತನ್ನ ಸುಪರ್ದಿಗೆ ತೆಗೆದುಕೊಂಡಿದೆ’ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಹರಿಹಾಯ್ದಿದೆ.

ಶಬರಿಮಲೆ ದೇಗುಲದ ತಂತ್ರಿ (ಪ್ರಧಾನ ಅರ್ಚಕ) ಕಂದರಾರು ರಾಜೀವರು ‘ಕೇವಲ ತಂತ್ರಿ ಕುಟುಂಬಕ್ಕೆ ಸೇರಿದವರು ಮತ್ತು ಪಂಡಾಲಂ ರಾಜಕುಟುಂಬಕ್ಕೆ ಸೇರಿದವರು ಮಾತ್ರ ಇಡುಮುಡಿ ಇಲ್ಲದೆ 18 ಮೆಟ್ಟಿಲು ಹತ್ತಬಹುದು’ ಎಂದು ಸ್ಪಷ್ಟಪಡಿಸಿದರು.

ಆರ್‌ಎಸ್‌ಎಸ್‌ ನಾಯಕ ವಲ್ಸನ್ ತಿಲ್ಲಂಕೇರಿ ತಲೆಯ ಮೇಲೆ ಇಡುಮುಡಿ ಇಲ್ಲದೆ 18 ಚಿನ್ನದ ಮೆಟ್ಟಿಲುಗಳನ್ನು ಹತ್ತಿ ಗರ್ಭಗುಡಿಯ ಸನಿಹಕ್ಕೆ ಹೋಗಿದ್ದರು ಎಂದು ಸುದ್ದಿ ಚಾನೆಲ್‌ಗಳು ಮಂಗಳವಾರ ವಿಡಿಯೊ ತುಣುಕುಗಳನ್ನು ಪ್ರಸಾರ ಮಾಡಿದವು. ವಿವಾದಕ್ಕೆ ಪ್ರತಿಕ್ರಿಯಿಸಿದ ವಲ್ಸನ್ ‘ನಾನು ಯಾವುದೇ ಸಂಪ್ರದಾಯ ಉಲ್ಲಂಘಿಸಿಲ್ಲ. 18 ಮೆಟ್ಟಿಲುಗಳನ್ನು ಹತ್ತುವಾಗ ಇಡುಮುಡಿ ಹೊತ್ತಿದ್ದೆ’ ಎಂದು ಹೇಳಿದ್ದರು.

ವಲ್ಸನ್ ಅವರ ಸ್ಪಷ್ಟೀಕರಣ ಹೊರಬಿದ್ದ ನಂತರ ಪ್ರತಿಕ್ರಿಯಿಸಿದ ತಿರುವಾಂಕೂರು ದೇವಸಂ ಮಂಡಳಿಯ ಸದಸ್ಯ ಕೆ.ಪಿ.ಶಂಕರದಾಸ್ ‘ಇಡುಮುಡಿ ಇಲ್ಲದೆ ದೇಗುಲ ಮೆಟ್ಟಿಲು ಹತ್ತಿರುವ ಕುರಿತು ತನಿಖೆ ನಡೆಸಲಾಗುವುದು’ ಎಂದು ಹೇಳಿದ್ದರು.

ಮಹಿಳೆಯೊಬ್ಬರನ್ನು ದೇಗುಲ ಪ್ರವೇಶಿಸಿದಂತೆ ನಿರ್ಬಂಧಿಸಲು ಯತ್ನಿಸಿದಾಗ ಮಾಲಾಧಾರಿಗಳಿಗೆ ಶಾಂತಿ ಕಾಪಾಡುವಂತೆ ವಲ್ಸನ್ ಮನವಿ ಮಾಡಿದ್ದರು. ಮೆಗಾಫೋನ್ ಹಿಡಿದು ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಶಬರಿಮಲೆಯಲ್ಲಿ ಶಾಂತಿ ಕಾಪಾಡಬೇಕು. ಇಲ್ಲದಿದ್ದರೆ ಕೆಲ ದುಷ್ಟರು ಭಕ್ತರ ವೇಷದಲ್ಲಿ ಕ್ಷೇತ್ರಕ್ಕೆ ಬಂದು ಜನರಿಗೆ ತೊಂದರೆ ಕೊಡಬಹುದು’ ಎಂದು ಎಚ್ಚರಿಸಿದರು.

ಇಡುಮುಡಿಯಿಲ್ಲದೆ ಶಬರಿಮಲೆ ದೇಗುಲದ ಮೆಟ್ಟಿಲು ಹತ್ತಿದ ವಿವಾದ ಕುರಿತು ಕೋಯಿಕ್ಕೋಡ್‌ನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಯಿ ವಿಜಯನ್, ‘ಸಂಪ್ರದಾಯ ಮತ್ತು ಪಾರಂಪರಿಕ ವಿಧಿವಿಧಾನಗಳನ್ನು ಅನುಸರಿಸದೆ ಸಂಘಪರಿವಾರದ ನಾಯಕರು ದೇಗುಲಕ್ಕೆ ಹೋಗುತ್ತಾರೆ. ಶಬರಿಮಲೆ ಪಾವಿತ್ರ್ಯ ಕಾಪಾಡುವ ಉದ್ದೇಶ ಬಿಜೆಪಿ–ಆರ್‌ಎಸ್‌ಎಸ್‌ಗೆ ಇಲ್ಲ’ ಎಂದು ಟೀಕಿಸಿದ್ದರು.

‘ನಾನು ದೇಗುಲಗಳಿಗೆ ಹೋಗುವ ಮನುಷ್ಯ ಅಲ್ಲ. ಆದರೂ ಈಚೆಗೆ ನಾನು ಶಬರಿಮಲೆಗೆ ಹೋದಾಗ 18 ಮೆಟ್ಟಿಲುಗಳನ್ನು ಹತ್ತದೆ ಸನ್ನಿಧಾನಕ್ಕೆ ಹೋಗಿದ್ದೆ. ಏಕೆಂದರೆ ನನ್ನ ಬಳಿ ಇಡುಮುಡಿ ಇರಲಿಲ್ಲ’ ಎಂದು ನೆನಪಿಸಿಕೊಂಡರು.

ಶಬರಿಮಲೆ ಬೆಳವಣಿಗೆಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಾಲ, ‘ಶಬರಿಮಲೆಯನ್ನು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿದೆ. ಪೊಲೀಸರು ಅಲ್ಲ’ ಎಂದು ಕಿಡಿಕಾರಿದ್ದಾರೆ. ‘ದೇವರಿಗೆ ಸಮರ್ಪಿಸಬೇಕಾದ ಕಾಣಿಕೆ ಇಲ್ಲದೆ ಆರ್‌ಎಸ್‌ಎಸ್‌ ನಾಯಕರು ಮೆಟ್ಟಿಲು ಹತ್ತುವ ಮೂಲಕ ದೇಗುಲದ ಪರಂಪರೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಅವರು ಹೇಳಿದರು.

ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರವನ್ನು ಟೀಕಿಸಿರುವ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ, ‘ಭಕ್ತರಿಗೆ ಕೊಠಡಿ, ಕುಡಿಯುವ ನೀರು, ಶೌಚಾಲಯದಂಥ ಮೂಲ ಸೌಕರ್ಯಗಳೂ ಶಬರಿಮಲೆಯಲ್ಲಿ ಇಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಈ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದೇನೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !