ಶುಕ್ರವಾರ, ನವೆಂಬರ್ 22, 2019
23 °C

ಮಥುರಾ, ಕಾಶಿ ಹೋರಾಟ ಸದ್ಯಕ್ಕಿಲ್ಲ: ಆರ್‌ಎಸ್‌ಎಸ್‌, ವಿಎಚ್‌ಪಿ

Published:
Updated:

ನವದೆಹಲಿ: ಮಥುರಾ ಮತ್ತು ಕಾಶಿ ವಿಶ್ವನಾಥ ದೇವಾಲಯಗಳಿಗೆ ಹೊಂದಿಕೊಂಡಿರುವ ಮಸೀದಿಗಳಿಂದ, ಅವುಗಳಿಗೆ ಬಿಡುಗಡೆ ಕೊಡಿಸುವ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೇಳಿವೆ.

ಸುಪ್ರೀಂ ಕೋರ್ಟ್‌ ತೀರ್ಪನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸ್ವಾಗತಿಸಿವೆ. ಈಗ ರಾಮಮಂದಿರ ನಿರ್ಮಾಣದತ್ತ ಗಮನ ಕೊಡುತ್ತೇವೆ ಎಂದು ಎರಡೂ ಸಂಘಟನೆಗಳು ಹೇಳಿವೆ.

ಮಥುರಾದಲ್ಲಿ ಕೃಷ್ಣಜನ್ಮಸ್ಥಾನ ದೇವಾಲಯಕ್ಕೆ ಹೊಂದಿಕೊಂಡಂತೆ ಮಸೀದಿ ನಿರ್ಮಿಸಲಾಗಿದೆ. ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡತೆ ಮಸೀದಿ ನಿರ್ಮಿಸಲಾಗಿದೆ. ರಾಮ ಮಂದಿರ ಹೋರಾಟದಂತೆಯೇ, ಮಥುರಾ ಮತ್ತು ಕಾಶಿ ಹೋರಾಟವನ್ನೂ ಆರಂಭಿಸಲಾಗುತ್ತದೆ ಎಂದು ವಿಎಚ್‌ಪಿ ಮತ್ತು ಆರ್‌ಎಸ್‌ಎಸ್ ಹೇಳುತ್ತಲೇ ಇದ್ದವು. ಆದರೆ ಈಗ ಈ ಹೋರಾಟದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿವೆ. 

‘ಆರ್‌ಎಸ್ಎಸ್‌ ಸ್ವಯಂಸೇವಕರು ಮತ್ತು ಅನುಯಾಯಿಗಳು ಈ ಗೆಲುವನ್ನು ಅತ್ಯಂತ ವಿನಯದಿಂದ ಸಂಭ್ರಮಿಸಬೇಕು. ಪ್ರಚೋದನೆ ನೀಡುವಂತಹ ಯಾವುದೇ ವರ್ತನೆ ತೋರಬಾರದು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.

‘ಮುಸ್ಲಿಮರಿಗೆ ಐದು ಎಕರೆ ಜಾಗ ನೀಡುವುದಕ್ಕೂ ನಮಗೂ ಸಂಬಂಧವಿಲ್ಲ. ಸರ್ಕಾರ ಅವರಿಗೆ ಜಾಗ ನೀಡಬೇಕಿದೆ. ಅದನ್ನು ಸರ್ಕಾರವೇ ನೋಡಿಕೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.

ಮಸೀದಿ ನಿರ್ಮಿಸಲು ಮುಸ್ಲಿಮರಿಗೆ ಅಯೋಧ್ಯೆಯಲ್ಲಿ ಜಾಗ ನೀಡಬಾರದು ಎಂದು ಹಲವು ಹಿಂದೂ ಧಾರ್ಮಿಕ ಮುಖಂಡರು ಆಗ್ರಹಿಸಿದ್ದಾರೆ.

‘ಕಾಶಿ ಮತ್ತು ಮಥುರಾ ವಿಷಯಗಳನ್ನು ಈಗ ಮುನ್ನೆಲೆಗೆ ತರುವುದಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪನ್ನು ಅನುಷ್ಠಾನಕ್ಕೆ ತರುವುದರತ್ತ ಸರ್ಕಾರ ಗಮನ ನೀಡಬೇಕು. ನಾವೂ ಸಹ ರಾಮ ಮಂದಿರ ನಿರ್ಮಾಣಕ್ಕೆ ಹೆಚ್ಚು ಗಮನ ನೀಡುತ್ತೇವೆ’ ಎಂದು ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)