ಬುಧವಾರ, ಅಕ್ಟೋಬರ್ 16, 2019
26 °C
ಅರ್ಜಿ ಸಲ್ಲಿಕೆಯಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

ಆರ್‌ಟಿಐ: ದಕ್ಷಿಣ ರಾಜ್ಯಗಳೇ ಮುಂಚೂಣಿಯಲ್ಲಿ

Published:
Updated:
Prajavani

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರದ 15 ವರ್ಷಗಳಲ್ಲಿ ಈ ಕಾಯ್ದೆ ಅಡಿಯಲ್ಲಿ 3.02 ಕೋಟಿ ಅರ್ಜಿಗಳು ಸಲ್ಲಿಕೆಯಾಗಿವೆ. ಕರ್ನಾಟಕ ಸೇರಿ ದಕ್ಷಿಣದ ಮೂರು ರಾಜ್ಯಗಳು ಮೊದಲ ಐದು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. 

ಟ್ರಾನ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಇಂಡಿಯ (ಟಿಐಐ) ಸಂಸ್ಥೆಯು ‘2019ರ ಪಾರದರ್ಶಕತೆ ವರದಿ– ಈವರೆಗಿನ ಪ್ರಯಾಣ ಮತ್ತು ಮುಂದಿನ ಸವಾಲು’ ಎಂಬ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 15ನೇ ವರ್ಷಾರಂಭದ ಸಂದರ್ಭದಲ್ಲಿ ಈ ವರದಿ ಬಿಡುಗಡೆಯಾಗಿದೆ. 

ಮಾಹಿತಿ ನಿರಾಕರಿಸಿದರೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ದಂಡ ವಿಧಿಸುವ ಅವಕಾಶ ಕಾಯ್ದೆಯಲ್ಲಿ ಇದೆ. ಪ್ರತಿ ದಿನಕ್ಕೆ ₹250ರಂತೆ ಗರಿಷ್ಠ ₹25,000 ದಂಡ ಹಾಕಬಹುದು. ಆದರೆ, ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯುಕ್ತರು ದಂಡ ವಿಧಿಸಲು ಹಿಂದೇಟು ಹಾಕುವುದು ಕಳವಳದ ವಿಚಾರ ಎಂದು ವರದಿಯಲ್ಲಿ ಹೇಳಲಾಗಿದೆ. ಒಂದಲ್ಲ ಒಂದು ಕಾರಣ ಕೊಟ್ಟು ಮಾಹಿತಿ ನಿರಾಕರಣೆ ಮುಂದುವರಿಯುತ್ತಲೇ ಇದೆ. 

ಮಾಹಿತಿ ನಿರಾಕರಣೆ ಪ್ರಕರಣಗಳಲ್ಲಿ ಒಟ್ಟು 21.31 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗಿವೆ. 

ರಾಜ್ಯಗಳ ಮಾಹಿತಿ ಆಯುಕ್ತರು ಈವರೆಗೆ 15,578 ಪ್ರಕರಣಗಳಲ್ಲಿ ದಂಡ ವಿಧಿಸಿದ್ದಾರೆ. ಕೇಂದ್ರ ಮಾಹಿತಿ ಆಯು
ಕ್ತರು ಎಷ್ಟು ಪ್ರಕರಣಗಳಲ್ಲಿ ದಂಡ ವಿಧಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಿಲ್ಲ. ಆದರೆ, ಒಟ್ಟು ₹2.26 ಕೋಟಿ ದಂಡ ಸಂಗ್ರಹವಾಗಿದೆ ಎಂದು ವರದಿ ಹೇಳಿದೆ. 

ಕಳೆದ ಮೂರು ವರ್ಷಗಳಲ್ಲಿ ಉತ್ತರಾಖಂಡ ಮಾಹಿತಿ ಆಯುಕ್ತರು ಅತಿ ಹೆಚ್ಚು ಅಂದರೆ, ₹81.82 ಲಕ್ಷ ದಂಡ ವಿಧಿಸಿದ್ದರೆ, ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಅಲ್ಲಿ ₹49.20 ಲಕ್ಷ ದಂಡ ಹಾಕಲಾಗಿದೆ. 

2006-07ರಿಂದ ಹರಿಯಾಣವು 2,692 ಪ್ರಕರಣಗಳಲ್ಲಿ ದಂಡ ಹಾಕಿದ್ದರೆ, 2008–09ರಿಂದ 2016–17ರ ಅವಧಿಯಲ್ಲಿ ರಾಜಸ್ಥಾನವು 2,803 ಪ್ರಕರಣಗಳಲ್ಲಿ ದಂಡ ವಿಧಿಸಿದೆ. 2017–18 ಮತ್ತು 2018–19ರಲ್ಲಿ ಉತ್ತರ ಪ್ರದೇಶವು 1,438 ಪ್ರಕರಣಗಳಲ್ಲಿ ದಂಡ ಹಾಕಿದೆ. 2006ರಿಂದ 2011–12ರ ಅವಧಿಯಲ್ಲಿ ಕರ್ನಾಟಕದಲ್ಲಿ 833 ಪ್ರಕರಣಗಳಲ್ಲಿ ದಂಡ ವಿಧಿಸಿದೆ.

‘ಜಗತ್ತಿನ ಎಲ್ಲ ಪ್ರಜಾಪ್ರಭುತ್ವಗಳಲ್ಲಿಯೂ ಶಾಸನ ರೂಪಿಸುವ ಮೂಲಕ ಅರ್ಧ ಕೆಲಸವಷ್ಟೇ ಆಗುತ್ತದೆ. ಸರಿಯಾದ ಅನುಷ್ಠಾನ ಇಲ್ಲದೆ ಹೋದರೆ ಕಾಯ್ದೆಯು ಯಶಸ್ವಿಯಾಗುವುದಿಲ್ಲ. 2005ರಿಂದ ಅಧಿಕಾರಕ್ಕೆ ಬಂದ ಸರ್ಕಾರಗಳ ಭರವಸೆ ಮತ್ತು ಅನುಷ್ಠಾನದ ಬಗೆಗಿನ ದ್ವಂದ್ವ ನಿಲುವೇ ದೊಡ್ಡ ಸಮಸ್ಯೆ’ ಎಂದು ಟಿಐಐ ಅಧ್ಯಕ್ಷ ಎಸ್.ಆರ್‌.ವಾಧ್ವಾ ಹೇಳಿದ್ದಾರೆ. 

ಪಾರದರ್ಶಕತೆಯನ್ನು ಬೆಂಬಲಿಸುತ್ತೇವೆ ಎಂದು ಎಲ್ಲ ಪಕ್ಷಗಳೂ ಹೇಳುತ್ತವೆ. ಆದರೆ, ಅಧಿಕಾರಕ್ಕೆ ಬಂದಾಗ ಆರ್‌ಟಿಐಯನ್ನು ಹೆಚ್ಚು ಸಬಲಗೊಳಿಸಲು ಏನನ್ನೂ ಮಾಡುವುದಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.

Post Comments (+)