ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಪ್ಪ ದೇಗುಲದ ಬಾಗಿಲಿಗೆ ಬೀಗ; ಐದನೇ ದಿನವೂ ಕೈಗೂಡದ ಕನಸು

ಪೊಲೀಸರ ವೈಫಲ್ಯ l ‍ಪ್ರತಿಭಟನೆ
Last Updated 21 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಶಬರಿಮಲೆ/ಪಂಪಾ: ತಿಂಗಳ ಪೂಜೆಗಾಗಿ ಬುಧವಾರ ತೆರೆಯಲಾಗಿದ್ದ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ಸೋಮವಾರ ಮುಚ್ಚಲಿದೆ.

ಸೋಮವಾರ ಕೊನೆಯ ದಿನವಾದ ಕಾರಣ ಪೊಲೀಸರು ಮತ್ತು ಪ್ರತಿಭಟನಕಾರರಿಗೆ ನಿರ್ಣಾಯಕವಾಗಿದ್ದು, ಶಬರಿಗಿರಿಯಲ್ಲಿ ವಾತಾವರಣ ಬಿಗುವಿನಿಂದ ಕೂಡಿದೆ.

ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ದೇವಸ್ಥಾನದೊಳಗೆ ಮುಕ್ತ ಅವಕಾಶ ಕಲ್ಪಿಸಿ ಸುಪ್ರಿಂ ಕೋರ್ಟ್ ತೀರ್ಪು ನೀಡಿದ ನಂತರ ವಿಶೇಷ ಪೂಜೆಗಾಗಿ ಮೊದಲ ಬಾರಿಗೆ ದೇಗುಲದ ಬಾಗಿಲು ತೆರೆಯಲಾಗಿತ್ತು.

ಭಾರಿ ಪೊಲೀಸ್‌ ಸರ್ಪಗಾವಲಿನ ಮಧ್ಯೆಯೂ ಶಬರಿಗಿರಿಯಲ್ಲಿ ಪ್ರತಿಭಟನೆ ತೀವ್ರವಾಗಿದೆ.ಪ್ರತಿಭಟನಕಾರರನ್ನು ನಿಯಂತ್ರಿಸಲು ಜಿಲ್ಲಾಡಳಿತ ಮತ್ತು ಪೊಲೀಸರು ವಿಫಲರಾಗಿದ್ದಾರೆ.

ಐದು ದಿನಗಳಿಂದ ಶಬರಿಮಲೆ ಸುತ್ತಮುತ್ತ ಬಿಡಾರ ಹೂಡಿರುವ ಪ್ರತಿಭಟನಕಾರರು ಮತ್ತು ಭಕ್ತರು ಹಗಲು, ರಾತ್ರಿಯನ್ನದೇ ಮಹಿಳಾ ಭಕ್ತರು ದೇಗುಲ ಪ್ರವೇಶಿಸದಂತೆ ಕಾವಲು ಕಾಯುತ್ತಿದ್ದಾರೆ.

ಪ್ರತಿಭಟನಾಕಾರರ ಪ್ರಾಬಲ್ಯ:ಕೆಲವು ತಂಡಗಳು ಅಯ್ಯಪ್ಪ ದೇಗುಲದ 18 ಮೆಟ್ಟಿಲು ಬಳಿ ಬಿಡಾರ ಹೂಡಿದ್ದರೆ, ಇನ್ನೂ ಕೆಲವರು ಪಂಪಾ ಮತ್ತು ನಿಲಕ್ಕಲ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಸುತ್ತಮುತ್ತಲಿನ ಪರಿಸ್ಥಿತಿ ಅವರ ನಿಯಂತ್ರಣದಲ್ಲಿದೆ.

ಇಲ್ಲಿಗೆ ಬರುವ ಮಹಿಳಾ ಭಕ್ತರ ಮೇಲೆ ಪ್ರತಿಭಟನಕಾರರು ಮುಗಿ ಬೀಳುತ್ತಿದ್ದಾರೆ. ರಕ್ಷಣೆಯ ಭರವಸೆ ನೀಡಿದ್ದ ಪೊಲೀಸರು ಅಸಹಾಯಕರಾಗಿ ನಿಂತು ನೋಡುತ್ತಿದ್ದಾರೆ.

ಈ ನಡುವೆ ಶನಿವಾರ ಭಾರಿ ಮಳೆಯ ಕಾರಣದಿಂದ ಶಬರಿಮಲೆ ಯಾತ್ರೆ ಮುಂದೂಡಿ ಪಂಪಾದಲ್ಲಿ ಉಳಿದುಕೊಂಡಿದ್ದ ಕೇರಳದ 38 ವರ್ಷದ ದಲಿತ ಕಾರ್ಯಕರ್ತೆ ಮಂಜು ನಿರ್ಧಾರ ಬದಲಿಸಿದ್ದಾರೆ.

ಬೆಟ್ಟ ಏರುವ ನಿರ್ಧಾರದಿಂದಪೊಲೀಸರ ಸಲಹೆಯ ಮೇರೆಗೆ ಹಿಂದೆ ಸರಿದಿದ್ದ ಅವರು ಭಾನುವಾರ ಅಯ್ಯಪ್ಪ ಸನ್ನಿಧಾನ ಪ್ರವೇಶಿಸುವುದಾಗಿ ಹೇಳಿದ್ದರು. ಆದರೆ, ಅವರು ಪಂಪಾದಿಂದ ತೆರಳಿದ್ದಾರೆ.

ಮುಸ್ಲಿಂ ಸಮಾಜದಿಂದ ರೆಹಾನಾ ಹೊರಕ್ಕೆ
ಶಬರಿಮಲೆ ದೇಗುಲ ಪ್ರವೇಶಿಸಲು ಇತ್ತೀಚೆಗೆ ವಿಫಲ ಯತ್ನ ನಡೆಸುವ ಮೂಲಕ ಹೆಸರಾಗಿದ್ದ ಸಾಮಾಜಿಕ ಕಾರ್ಯಕರ್ತೆ ಮತ್ತು ರೂಪದರ್ಶಿ ರೆಹಾನಾ ಫಾತಿಮಾ ಅವರನ್ನು ಮುಸ್ಲಿಂ ಸಮಾಜದಿಂದ ಹೊರ ಹಾಕಲಾಗಿದೆ.

ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಕಾರಣ ಫಾತಿಮಾ ಮತ್ತು ಆಕೆಯ ಕುಟುಂಬವನ್ನು ಮುಸ್ಲಿಂ ಸಮಾಜದಿಂದ ಹೊರ ಹಾಕಲಾಗಿದೆ ಎಂದು ಕೇರಳ ಮುಸ್ಲಿಂ ಜಮಾತ್‌ ಮಂಡಳಿ ಭಾನುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT