ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಗಿರಿ: ರಕ್ಷಣೆಗೆ ನಾರಿಯರ ಅರ್ಜಿ

Last Updated 24 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಲು ರಕ್ಷಣೆ ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಋತುಸ್ರಾವದ ವಯಸ್ಸಿನಲ್ಲಿರುವ ನಾಲ್ವರು ಮಹಿಳೆಯರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಎ.ಕೆ. ಮಾಯಾ ಕೃಷ್ಣನ್‌ (37), ರೇಖಾ ಎಸ್‌. (45), ಜಲಜಾಮೋಲ್‌ ಪಿ.ಎಸ್‌. (35) ಮತ್ತು ಜಯಾಮೋಲ್‌ (28) ಅರ್ಜಿ ಸಲ್ಲಿಸಿದ ಮಹಿಳೆಯರು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ವಿಭಾಗೀಯ ಪೀಠವು ಪ್ರತಿಕ್ರಿಯೆ ಕೊಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಸೋಮವಾರ ಅರ್ಜಿಯ ವಿಚಾರಣೆ ನಡೆಯಲಿದೆ.

ಈ ನಾಲ್ವರು ಅರ್ಜಿದಾರರಲ್ಲಿ ಇಬ್ಬರು ವಕೀಲರಾಗಿದ್ದಾರೆ. ಮಹಿಳೆಯರಿಗೆ ಪ್ರವೇಶದ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರೂ ಅದು ಜಾರಿಗೆ ಬಂದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಅರ್ಚಕರು ಮತ್ತು ಪಂದಳಂ ರಾಜ ಕುಟುಂಬದ ಸದಸ್ಯರುದೇವಾಲಯದ ಆಡಳಿತ ಮಂಡಳಿಯ ನಿರ್ದೇಶನದಂತೆ ನಡೆದುಕೊಳ್ಳಬೇಕು. ಆದರೆ ಅವರು ಹಾಗೆ ಮಾಡದೆ ನ್ಯಾಯಾಂಗ ನಿಂದನೆ ಎಸಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ರೆಹಾನಾ ಫಾತಿಮಾ ವರ್ಗ

ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದ್ದ ಬಿಎಸ್‌ಎನ್‌ಎಲ್‌ ಉದ್ಯೋಗಿ ರೆಹಾನಾ ಫಾತಿಮಾ ಅವರನ್ನು ಕೊಚ್ಚಿಯಿಂದ ಪಾಲಾರಿವಟ್ಟಂ ದೂರವಾಣಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.

ಗ್ರಾಹಕ ಸಂಪರ್ಕ ವಿಭಾಗದಲ್ಲಿ ಅವರು ಕೆಲಸ ಮಾಡುತ್ತಿದ್ದರು. ಈಗ, ಜನರ ಜತೆ ಸಂಪರ್ಕ ಇಲ್ಲದ ವಿಭಾಗಕ್ಕೆ ಅವರನ್ನು ವರ್ಗ ಮಾಡಲಾಗಿದೆ. ಅವರ ವಿರುದ್ಧ ಕರ್ತವ್ಯಲೋಪದ ಯಾವುದೇ ಆರೋಪ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶಬರಿಮಲೆ ಕರ್ಮ ಸಮಿತಿಯು ಪಾಲಾರಿವಟ್ಟಂ ಬಿಎಸ್‌ಎನ್‌ಎಲ್‌ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ, ರೆಹಾನಾ ಅವರನ್ನು ವಜಾ ಮಾಡುವಂತೆ ಒತ್ತಾಯಿಸಿತ್ತು.

ಮರುಪರಿಶೀಲನೆ ಅರ್ಜಿ ಇಲ್ಲ:ಟಿಡಿಬಿ

ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅವಕಾಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಶಬರಿಮಲೆ ದೇವಾಲಯದ ಆಡಳಿತ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿದೆ.

ತೀರ್ಪು ಮರುಪರಿಶೀಲಿಸುವಂತೆ ಕೋರಿ ವಿವಿಧ ಸಂಘ ಸಂಸ್ಥೆಗಳು ಸುಪ್ರೀಂ ಕೋರ್ಟ್‌ಗೆ ಈಗಾಗಲೇ 19 ಅರ್ಜಿಗಳನ್ನು ಸಲ್ಲಿಸಿವೆ. ಇವು ನವೆಂಬರ್‌ 13ರಂದು ವಿಚಾರಣೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT