ಶಬರಿಮಲೆಯಲ್ಲಿ ಇಂದು ಮಕರಜ್ಯೋತಿ ದರ್ಶನ

7

ಶಬರಿಮಲೆಯಲ್ಲಿ ಇಂದು ಮಕರಜ್ಯೋತಿ ದರ್ಶನ

Published:
Updated:

ಶಬರಿಮಲೆ: ಪವಿತ್ರ ಮಕರ ಜ್ಯೋತಿ ಸೋಮವಾರ ಸಂಜೆ ಕಾಣಿಸಿಕೊಳ್ಳಲಿದೆ. ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಸಾವಿರಾರು ಜನರು ಬರುತ್ತಿದ್ದಾರೆ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ.

ಋತುಸ್ರಾವ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸುವುದಕ್ಕೆ ಸಂಬಂಧಿಸಿದ ವಿವಾದ ಭಕ್ತರ ಸಂಖ್ಯೆ ಕುಸಿಯಲು ಕಾರಣ ಎನ್ನಲಾಗಿದೆ. ಕೇರಳದ ಭಕ್ತರು ಶಬರಿಮಲೆಗೆ ಭೇಟಿ ಕೊಡುವ ಸಂಖ್ಯೆ ಈ ಬಾರಿ ಕಮ್ಮಿಯಾಗಿದೆ. ಆದರೆ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶದಿಂದ ಬರುವ ಭಕ್ತರ ಸಂಖ್ಯೆ ಗಣನೀಯವಾಗಿಯೇ ಇದೆ. 

ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳ ಬಳಿಯಲ್ಲಿ ಭಾರಿ ಸರತಿ ಸಾಲು ಈ ಸಾರಿ ಕಂಡು ಬಂದಿಲ್ಲ. ದಟ್ಟಣೆ ಕಡಿಮೆ ಇರುವುದರಿಂದ ಭಕ್ತರಿಗೆ ದರ್ಶನ ಪಡೆಯುವುದು ಸುಲಭವಾಗಿದೆ. 

ಶಬರಿಮಲೆಗೆ ಸಮೀಪದ ಪ್ರಮುಖ ಪಟ್ಟಣ ಪಟ್ಟನಂತಿಟ್ಟ. ತೀರ್ಥಯಾತ್ರೆ ಋತುವಿನಲ್ಲಿ ಈ ಪಟ್ಟಣ ಗಿಜಿಗುಟ್ಟುತ್ತಿರುತ್ತದೆ. ಆದರೆ, ಪಟ್ಟನಂತಿಟ್ಟ ಬಸ್‌ ನಿಲ್ದಾಣದಲ್ಲಿ ಭಾನುವಾರ ಭಕ್ತರ ದಟ್ಟಣೆ ಇರಲಿಲ್ಲ. 

‘ಪಟ್ಟನಂತಿಟ್ಟದಿಂದ ಪಂಪಾವರೆಗೆ ಹೋಗುವ ಬಸ್‌ಗಳಲ್ಲಿ ಸಾಮಾನ್ಯವಾಗಿ ಭಾರಿ ದಟ್ಟಣೆ ಇರುತ್ತಿತ್ತು. ಈ ಬಾರಿ ಮಕರ ಜ್ಯೋತಿಯ ಮುನ್ನಾದಿನವೂ ಅಂತಹ ದಟ್ಟಣೆ ಇರಲಿಲ್ಲ’ ಎಂದು ಸರ್ಕಾರಿ ಬಸ್‌ ನಿರ್ವಾಹಕರೊಬ್ಬರು ಹೇಳಿದರು. 

ಭಾನುವಾರ ಮಧ್ಯಾಹ್ನ ವರೆಗೆ ಪಂಪಾ ತಲುಪಿದ ಭಕ್ತರ ಸಂಖ್ಯೆ 53,700 ಎಂದು ಇಲ್ಲಿನ ಪೊಲೀಸ್‌ ನಿಯಂತ್ರಣ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷದ ಮಕರ ಜ್ಯೋತಿ ಮುನ್ನಾದಿನ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ಕೊಟ್ಟಿದ್ದರು. 

ಶಬರಿಮಲೆಯಿಂದ 80 ಕಿ.ಮೀ. ದೂರದಲ್ಲಿರುವ ಪಂದಲಂ ಅರಮನೆಯಿಂದ ಅಯ್ಯಪ್ಪ ಸ್ವಾಮಿಯ ಆಭರಣಗಳನ್ನು ಶಬರಿಮಲೆಗೆ ಒಯ್ಯಲಾಗುತ್ತದೆ. ಭಾನುವಾರ ಬೆಳಿಗ್ಗೆ ಈ ಆಭರಣಗಳು ಇಲ್ಲಿ ತಲುಪುತ್ತವೆ. ಮಕರಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಗೆ ಈ ಆಭರಣಗಳನ್ನು ತೊಡಿಸಲಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !