ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಸುಪ್ರೀಂ ಕೋರ್ಟ್‌ನಿಂದ ನಾಳೆ ತೀರ್ಪು

ಮರುಪರಿಶೀಲನಾ ಅರ್ಜಿಗಳ ಕುರಿತಾದ ತೀರ್ಪನ್ನು ಫೆಬ್ರುವರಿ 6ರಂದು ಕಾಯ್ದಿರಿಸಿದ್ದ ನ್ಯಾಯಾಲಯ
Last Updated 13 ನವೆಂಬರ್ 2019, 10:00 IST
ಅಕ್ಷರ ಗಾತ್ರ

ನವದೆಹಲಿ:ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, ಡಿ.ವೈ.ಚಂದ್ರಚೂಡ್ ಮತ್ತು ಇಂದು ಮಲ್ಹೊತ್ರಾ ಒಳಗೊಂಡ ನ್ಯಾಯಪೀಠ ತೀರ್ಪು ನೀಡಲಿದೆ.

ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು 2018ರ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

5 ವರ್ಷದಿಂದ 50 ವರ್ಷ ವಯಸ್ಸಿನವರೆಗಿನ ಮಹಿಳೆಯರು ದೇಗುಲ ಪ್ರವೇಶಿಸಬಾರದು ಎಂಬ ನಿಯಮವನ್ನು2018ರ ಸೆಪ್ಟೆಂಬರ್ 28ರಂದು ರದ್ದುಪಡಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದರೋಹಿಂಟನ್ ನಾರಿಮನ್, ಎ.ಎಂ.ಖಾನ್‌ವಿಲ್ಕರ್,ಡಿ.ವೈ.ಚಂದ್ರಚೂಡ್ಮತ್ತು ಇಂದು ಮಲ್ಹೊತ್ರಾ ಅವರಿದ್ದ ನ್ಯಾಯಪೀಠ 4:1ರ ತೀರ್ಪು ನೀಡಿತ್ತು. ನಾಲ್ವರು ನ್ಯಾಯಮೂರ್ತಿಗಳು ತೀರ್ಪಿನ ಪರ ಇದ್ದರೆಇಂದು ಮಲ್ಹೊತ್ರಾ ಮಾತ್ರ ತೀರ್ಪಿಗೆ ಸಹಮತ ವ್ಯಕ್ತಪಡಿಸಿರಲಿಲ್ಲ. ಧಾರ್ಮಿಕ ಆಚರಣೆಗಳನ್ನು ಸಂವಿಧಾನದ 14ನೇ ವಿಧಿ ಅನ್ವಯ ಪರಿಗಣಿಸಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಸುಪ್ರೀಂ ಕೋರ್ಟ್‌ ತೀರ್ಪಿನ ಅನುಷ್ಠಾನ ವಿಚಾರವಾಗಿ ಕೇರಳದಲ್ಲಿ ರಾಜಕೀಯ ಸಂಘರ್ಷಗಳೂ ನಡೆದಿದ್ದವು. ಬಳಿಕ ತೀರ್ಪಿನ ಮರುಪರಿಶೀಲನೆಗೆ ಕೋರಿ ಸುಮಾರು 56 ಅರ್ಜಿಗಳು ಹಾಗೂ ಕೆಲವು ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಚಾರಣೆಯನ್ನು ಈ ವರ್ಷ ಫೆಬ್ರುವರಿ 6ರಂದು ಮುಕ್ತಾಯಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT