ಶಬರಿಮಲೆಗೆ ಮಹಿಳೆ: ಇಂದು ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

7

ಶಬರಿಮಲೆಗೆ ಮಹಿಳೆ: ಇಂದು ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

Published:
Updated:
Deccan Herald

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿರುವ ತೀರ್ಪು ಆಕ್ಷೇಪಿಸಿ ಸಲ್ಲಿಸಿರುವ 45ಕ್ಕೂ ಹೆಚ್ಚು ಪುನರ್‌ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಇಂದು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ನಾಲ್ಕು ತಿಂಗಳ ವಾರ್ಷಿಕ ತೀರ್ಥಯಾತ್ರೆಗೆ ನಾಲ್ಕು ದಿನ ಮೊದಲು ನ್ಯಾಯಾಲಯವು 45 ಅರ್ಜಿಗಳ ವಿಚಾರಣೆ ನಡೆಸಲಿದೆ. ಬಹುತೇಕ ಅರ್ಜಿಗಳು ‘ನಂಬಿಕೆಯ ಬಗ್ಗೆ ವೈಜ್ಞಾನಿಕ ಅಥವಾ ತಾರ್ಕಿಕ ಚಿಂತನೆಯಿಂದ ತೀರ್ಪು ನೀಡಲು ಸಾಧ್ಯವಿಲ್ಲ. ಕಾಡು ಮಧ್ಯದ ದೇಗುದಲ್ಲಿರುವ ಅಯ್ಯಪ್ಪ ಬ್ರಹ್ಮಚಾರಿ. ಹೀಗಾಗಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬಾರದು’ ಎಂದು ವಾದಿಸಿವೆ.

‘ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಸರ್ಕಾರಕ್ಕೆ ಮುಕ್ತ ಮನಸ್ಸು ಇದೆ. ಈ ವಿಚಾರ ಚರ್ಚಿಸಲು ನಾವು ಸರ್ವ ಪಕ್ಷಗಳ ಸಭೆ ಕರೆಯುತ್ತೇವೆ. ಪುನರ್‌ಪರಿಶೀಲನೆ ಅರ್ಜಿಗಳ ವಿಚಾರಣೆ ನಂತರ ಸುಪ್ರೀಂಕೋರ್ಟ್ ಏನು ಹೇಳುತ್ತದೆ ಎಂಬುದನ್ನು ಆಧರಿಸಿ ಸಭೆಯ ದಿನಾಂಕ ನಿಗದಿಪಡಿಸಲಾಗುವುದು’ ಎಂದು ಕೇರಳದ ದೇಗುಲ ವ್ಯವಹಾರಗಳ ಸಚಿವ ಕಡಕಂಪಲ್ಲಿ ಸುರೇಂದ್ರನ್ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ನಂತರ ಬಿಜೆಪಿ ಕೇರಳದಲ್ಲಿ ಸಕ್ರಿಯವಾಗಿ ಪ್ರತಿಭಟನೆಗಳನ್ನು ಆಯೋಜಿಸಿತ್ತು. ಪರಿಸ್ಥಿತಿ ನಿರ್ವಹಿಸುವಲ್ಲಿ ಸರ್ಕಾರದ ವೈಫಲ್ಯ ಖಂಡಿಸಿದ್ದ ಕಾಂಗ್ರೆಸ್ ಪ್ರತಿಭಟನಾಕಾರರನ್ನು ಬೆಂಬಲಿಸಿತ್ತು.

ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಸರ್ಕಾರವು ಸುಪ್ರೀಂಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ಬದ್ಧ ಎಂದು ತನ್ನ ನಿಲುವನ್ನು ಪುನರುಚ್ಚರಿಸುತ್ತಿದೆ. ಧಾರ್ಮಿಕ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಪ್ರತಿಪಕ್ಷಗಳ ವಿರುದ್ಧ ಹರಿಹಾಯುತ್ತಿದ್ದಾರೆ.

ದೇಗುಲ ಸಂಪ್ರದಾಯಗಳನ್ನು ಉಳಿಸಬೇಕು ಎಂದು ಆಗ್ರಹಿಸಿ ರಥಯಾತ್ರೆ ಮಾಡುತ್ತಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ, ‘ಜನರ ಪ್ರತಿಭಟನೆ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡು ಸುಪ್ರೀಂಕೋರ್ಟ್ ಸೂಕ್ತ ತೀರ್ಪು ನೀಡುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಿಳ್ಳೈ ಮತ್ತು ಇತರ ನಾಲ್ವರು ಸುಪ್ರೀಂಕೋರ್ಟ್ ತೀರ್ಪು ವಿರುದ್ಧ ಮಾತನಾಡಿರುವ ಹಿನ್ನೆಲೆಯಲ್ಲಿ ಅವರ ಮೇಲೆ ನ್ಯಾಯಾಲಯ ನಿಂದನೆ ಮೊಕದ್ದಮೆ ಹೂಡಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೋಮವಾರ ಅನುಮತಿ ನಿರಾಕರಿಸಿದ್ದರು. ತಿಂಗಳ ಹಿಂದೆ ಇಬ್ಬರು ಮಹಿಳಾ ವಕೀಲರು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಕಚೇರಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದರು. ‘ನಾನು ಈ ಹಿಂದೆ ಟ್ರಾವಂಕೋರ್ ದೇವಸ್ವಂ ಮಂಡಳಿ’ಯನ್ನು (ಟಿಡಿಬಿ) ಪ್ರತಿನಿಧಿಸಿದ್ದೆ. ಹೀಗಾಗಿ ಈ ಪ್ರಕರಣದಿಂದ ಹಿಂದೆ ಸರಿಯುತ್ತೇನೆ’ ಎಂದು ವೇಣುಗೋಪಾಲ್ ಪ್ರತಿಕ್ರಿಯಿಸಿದ್ದರು. ದೇಗುಲ ಆಡಳಿತ ನಿರ್ವಹಿಸುವ ದೇವಸ್ವಂ ಮಂಡಳಿಯು ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಕೋರ್ಟ್‌ನಲ್ಲಿ ವಾದ ಮಂಡಿಸಿತ್ತು.

ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅಟಾರ್ನಿ ಜನರಲ್ ಅನುಮತಿ ಪಡೆಯಬೇಕು ಎನ್ನುವ ನಿಯಮವಿದೆ. ವೇಣುಗೋಪಾಲ್ ಅವರು ಈ ವಿಷಯದಿಂದ ದೂರ ಸರಿಯಲು ನಿರ್ಧರಿಸಿದ ನಂತರ ಸಾಲಿಸಿಟರ್ ಜನರಲ್ ಮೆಹ್ತಾ ಅವರ ಕಚೇರಿಗೆ ಪ್ರಕರಣವನ್ನು ವರ್ಗಾಯಿಸಲಾಯಿತು. ಮೆಹ್ತಾ ಅವರು ಅನುಮತಿ ನೀಡಲು ನಿರಾಕರಿಸಿದರು.

‘ಮೆಹ್ತಾ ಅವರ ನಿರ್ಧಾರ ಸ್ವಾಗತಾರ್ಹ. ಸುಪ್ರೀಂಕೋರ್ಟ್‌ ನಮ್ಮ ಜನರ ಭಾವನೆಗಳಿಗೆ ಬೆಲೆ ಕೊಡುತ್ತದೆ ಎಂದುಕೊಂಡಿದ್ದೇವೆ. ದೇವಾಲಯದ ಸಂಪ್ರದಾಯವನ್ನು ದುರ್ಬಲಗೊಳಿಸುವ ಸುಪ್ರೀಂಕೋರ್ಟ್‌ ತೀರ್ಪನ್ನು, ನಾಸ್ತಿಕರಾದ ಕಮ್ಯುನಿಸ್ಟರನ್ನು ಹೊರತುಪಡಿಸಿ ಇಡೀ ರಾಜ್ಯವೇ ಪ್ರತಿಭಟಿಸುತ್ತಿದೆ. ಹಿಂದೂಗಳು ಮಾತ್ರವಲ್ಲ, ಕ್ರೈಸ್ತರು ಮತ್ತು ಮುಸ್ಲಿಮರೂ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದಾರೆ’ ಎಂದು ಕೇರಳ ಬಿಜೆಪಿ ನಾಯಕ ಕೆ.ಸುರೇಂದ್ರನ್ ಹೇಳಿದರು.

ಶಬರಿಮಲೆ ದೇವಾಲಯ ಪ್ರವೇಶಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಅವಕಾಶ ಕಲ್ಪಿಸುವ ಸಂಬಂಧ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಲಿಂಗದ ಆಧಾರದಲ್ಲಿ ದೈವತ್ವ ಮತ್ತು ಭಕ್ತಿಯ ಮೇಲೆ ಕಟ್ಟುಪಾಡುಗಳನ್ನು ಹೇರುವಂತಿಲ್ಲ ಎಂದು ಒತ್ತಿ ಹೇಳಿತ್ತು. ಬಳಿಕ ಹಿಂಸಾತ್ಮಕ ಪ್ರತಿಭಟನೆಗಳು ಆರಂಭವಾಗಿದ್ದವು. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ (ಅಕ್ಟೋಬರ್‌ 17 ಹಾಗೂ ನವೆಂಬರ್‌ 05ರಂದು) ಎರಡು ಬಾರಿ ದೇಗುಲದ ಬಾಗಿಲು ತೆರೆದಿದ್ದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವಣ ಘರ್ಷಣೆಗಳು ಉಂಟಾಗಿದ್ದವು. ಪತ್ರಕರ್ತರಿಗೆ ಬೆದರಿಕೆ ಹಾಕಲಾಗಿತ್ತು. ದೇಗುಲ ಪ್ರವೇಶಿಸಲು ಉದ್ದೇಶಿಸಿದ್ದ 15 ಮಹಿಳೆಯರಿಗೂ ಅವಕಾಶ ನಿರಾಕರಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !