ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪಿನ ಬಗ್ಗೆ ಅಸಮಾಧಾನವಿದ್ದರೆ ತಂತ್ರಿಗಳು ಹುದ್ದೆ ತ್ಯಜಿಸಬಹುದು: ಪಿಣರಾಯಿ

ಶಬರಿಮಲೆ ವಿವಾದ: ತಂತ್ರಿಗಳ ವಿರುದ್ಧ ಕೇರಳ ಮುಖ್ಯಮಂತ್ರಿ ಕಿಡಿ
Last Updated 3 ಜನವರಿ 2019, 9:27 IST
ಅಕ್ಷರ ಗಾತ್ರ

ತಿರುವನಂತಪುರ:ಎಲ್ಲ ವಯಸ್ಸಿನ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಅಸಮಾಧಾನವಿದ್ದರೆ ತಂತ್ರಿಗಳು ಹುದ್ದೆ ತ್ಯಜಿಸಬಹುದು ಎಂದುಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮಹಿಳೆಯರು ದರ್ಶನ ಪಡೆದ ನಂತರ ಶುದ್ಧೀಕರಣಕ್ಕಾಗಿ ದೇಗುಲದ ಬಾಗಿಲು ಮುಚ್ಚಿದ ತಂತ್ರಿಗಳ ಕ್ರಮ ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.

‘ಪ್ರಕರಣದ ಕಕ್ಷಿದಾರರಲ್ಲಿ ತಂತ್ರಿ ಕುಟುಂಬವೂ ಸೇರಿದೆ. ಸುಪ್ರೀಂ ಕೋರ್ಟ್‌ ತೀರ್ಪು ನೀಡುವ ವೇಳೆ ಅವರ ಕುಟುಂಬದವರೂ ಇದ್ದರು. ಇರಲಿ, ಅವರಿಗೂ ತೀರ್ಪನ್ನು ವಿರೋಧಿಸಲು ಪ್ರಜಾಸತ್ತಾತ್ಮಕ ಹಕ್ಕಿದೆ. ಆದರೆ, ‘ತಂತ್ರಿ’ ಹುದ್ದೆಯಲ್ಲಿರುವಾಗ ತೀರ್ಪಿನ ಪಾಲನೆ ಮಾಡಬೇಕಾದ್ದು ಅವರ ಕರ್ತವ್ಯ. ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದಿಲ್ಲ ಎಂದು ತಂತ್ರಿಯಾಗಿದ್ದುಕೊಂಡು ಅವರು ಹೇಳುವಂತಿಲ್ಲ’ ಎಂದು ಪಿಣರಾಯಿ ಹೇಳಿದ್ದಾರೆ.

‘ದೇಗುಲದ ಬಾಗಿಲು ಮುಚ್ಚುವುದು ಅಥವಾ ತೆರೆಯುವುದು ವಿಷಯವಲ್ಲ. ಆದರೆ, ಶುದ್ಧೀಕರಣಕ್ಕಾಗಿ ಬಾಗಿಲು ಮುಚ್ಚುವ ಮುನ್ನ ತಂತ್ರಿಗಳು ದೇವಸ್ವಂ ಮಂಡಳಿ ಬಳಿ ಚರ್ಚಿಸಿಲ್ಲ. ಹಾಗಾಗಿ ತಂತ್ರಿಗಳು ಮಾಡಿರುವುದು ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ ಮಾತ್ರವಲ್ಲ, ದೇವಸ್ವಂ ನಿಯಮಗಳ ಅಣಕವೂ ಹೌದು’ ಎಂದು ಅವರು ಹೇಳಿದ್ದಾರೆ.

ಬಿಂದು ಮತ್ತು ಕನಕದುರ್ಗಾರನ್ನು ರಹಸ್ಯವಾಗಿ ಸರ್ಕಾರವೇ ದೇಗುಲಕ್ಕೆ ಕಳುಹಿಸಿದೆ ಎಂಬ ಆರೋಪವನ್ನು ಪಿಣರಾಯಿ ಅಲ್ಲಗಳೆದಿದ್ದಾರೆ. ಅವರಿಬ್ಬರ ಹೆಸರು ಸಹ ತಮಗೆ ತಿಳಿದಿರಲಿಲ್ಲ. ಅವರು ದೇಗುಲ ಪ್ರವೇಶಿಸಿರುವುದು ಸುದ್ದಿಯಾದ ನಂತರವೇ ತಿಳಿಯಿತು ಎಂದೂ ಅವರು ಹೇಳಿದ್ದಾರೆ.

ಹಿಂಸಾಚಾರ ಹಿಂದೆ ಆರ್‌ಎಸ್‌ಎಸ್ ಸಂಚು

ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿರುವ ವಿಷಯದಲ್ಲಿ ಹಿಂಸಾಚಾರ ನಡೆದಿರುವುದರ ಹಿಂದೆ ಆರ್‌ಎಸ್‌ಎಸ್ ಸಂಚಿದೆ. ಆ ಮಹಿಳೆಯರು ದೇಗುಲಕ್ಕೆ ತಲುಪಿದಾಗ ಏನೂ ಸಮಸ್ಯೆಯಾಗಿರಲಿಲ್ಲ. ಯಾವ ಭಕ್ತರೂ ಪ್ರತಿಭಟಿಸಿರಲಿಲ್ಲ. ಆದರೆ, ಬಹಳ ಸಮಯದ ನಂತರ ಹಿಂಸಾಚಾರ ಆರಂಭವಾಯಿತು. ಇದರಿಂದ, ಸಹಜವಾಗಿ ಅಯ್ಯಪ್ಪ ಭಕ್ತರಲ್ಲಿ ಆಕ್ರೋಶ ಕಂಡುಬಂದಿಲ್ಲ ಎಂಬುದನ್ನು ತಿಳಿಯಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಹರತಾಳ (ಬಂದ್) ಕೋರ್ಟ್‌ ತೀರ್ಪಿನ ಅಣಕ:ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಐದು ಬಾರಿ ಹರತಾಳ ನಡೆಸಲಾಗಿದೆ. ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಹರತಾಳ ನಡೆಸುವುದು ಸುಪ್ರೀಂ ಕೋರ್ಟ್‌ ತೀರ್ಪನ್ನು ಅಣಕಿಸಿದಂತೆ ಎಂದು ಪಿಣರಾಯಿ ಹೇಳಿದ್ದಾರೆ.

31 ಪೊಲೀಸರಿಗೆ ಗಾಯ

ರಾಜ್ಯದಲ್ಲಿ ಗುರುವಾರ ನಡೆದ ಹಿಂಸಾಚಾರದಲ್ಲಿ 31 ಪೊಲೀಸರು ಗಾಯಗೊಂಡಿದ್ದು, ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯ79 ಬಸ್‌ಗಳಿಗೆ ಹಾನಿಯಾಗಿದೆ. ಪ್ರತಿಭಟನಾಕಾರರ ಗುರಿ ಹಿಳೆಯರೇ ಆಗಿದ್ದರು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

ಚಂದ್ರನ್ ಮೃತಪಟ್ಟಿದ್ದು ಹೃದಯಾಘಾತದಿಂದ

ಚಂದ್ರನ್ ಉಣ್ಣಿತಾನ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಸಾವು ಹೃದಯಾಘಾತದಿಂದ ಸಂಭವಿಸಿದೆ. ಇದು ಕಲ್ಲುತೂರಾಟಕ್ಕೆ ಸಂಬಂಧಿಸಿದ ಪ್ರಕರಣವಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT