ಶಬರಿಮಲೆ: 51 ಮಹಿಳೆಯರಿಂದ ದೇಗುಲ ದರ್ಶನ

7
‘ಸುಪ್ರೀಂ’ಗೆ ಸಲ್ಲಿಸಿದ ಕೇರಳದ ಹೇಳಿಕೆಯಿಂದ ವಿವಾದ ಸೃಷ್ಟಿ

ಶಬರಿಮಲೆ: 51 ಮಹಿಳೆಯರಿಂದ ದೇಗುಲ ದರ್ಶನ

Published:
Updated:

ತಿರುವನಂತಪುರ: ಶಬರಿಮಲೆ ದೇಗುಲಕ್ಕೆ 10–50ರ ವಯಸ್ಸಿನ 51 ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಕೇರಳ ಸರ್ಕಾರ ಹೇಳಿಕೆ ನೀಡಿದೆ.

ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕೊಡಬೇಕು ಎನ್ನುವ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ತೀರ್ಪಿನ ಬಳಿಕ ಇಷ್ಟು ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂಬ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.

ಕೇರಳ ಸರ್ಕಾರವು ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲು ಯತ್ನಿಸುತ್ತಿದೆ ಎಂದು ಅಯ್ಯಪ್ಪ ಧರ್ಮ ಸೇನಾ (ಎಡಿಎಸ್‌) ಆರೋಪಿಸಿದೆ. ಋತುಸ್ರಾವ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವಾಲಯ ಪ್ರವೇಶಿಸುವುದನ್ನು ಎಡಿಎಸ್‌ ವಿರೋಧಿಸುತ್ತಿದೆ. ಸರ್ಕಾರವು ನೀಡಿದ ಪಟ್ಟಿಯಲ್ಲಿರುವ 51 ಮಹಿಳೆಯರಲ್ಲಿ ಹೆಚ್ಚಿನವರು 50 ವರ್ಷ ದಾಟಿದವರು ಎಂದು ಈ ಸಂಘಟನೆ ಹೇಳಿದೆ.

ಪಟ್ಟಿಯಲ್ಲಿರುವ ಐವರು ಮಹಿಳೆಯರನ್ನು ಎಡಿಎಸ್‌ ಸಂಪರ್ಕಿಸಿದೆ. ಅವರೆಲ್ಲರೂ 50 ವರ್ಷ ದಾಟಿದವರು. ಗುರುತು ಚೀಟಿಗಳಲ್ಲಿ ಈ ಮಹಿಳೆಯರ ವಯಸ್ಸನ್ನು ತಪ್ಪಾಗಿ ನಮೂದಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇಂತಹ ನಿರ್ಣಾಯಕ ಹೇಳಿಕೆ ನೀಡುವಾಗ ಸರ್ಕಾರವು ವಾಸ್ತವಾಂಶ ಪ‍ರಿಶೀಲಿಸಬೇಕಿತ್ತು. ವಾಸ್ತವ ಏನು ಎಂಬುದನ್ನು ಕೋರ್ಟ್‌ಗೆ ತಿಳಿಸಲಾಗುವುದು ಎಂದು ಸೇನಾ ನಾಯಕ ರಾಹುಲ್ ಈಶ್ವರ್‌ ಹೇಳಿದ್ದಾರೆ.

ಪಂದಳಂ ಅರಮನೆಯ ಪ್ರತಿನಿಧಿಕೂಡ ಸರ್ಕಾರ ನೀಡಿರುವ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ತೀರ್ಥಯಾತ್ರೆ ಋತುವಿನಲ್ಲಿ ಅಯ್ಯಪ್ಪ ದರ್ಶನಕ್ಕಾಗಿ 10–50ರ ವಯಸ್ಸಿನ 7,564 ಮಹಿಳೆಯರು ಕೇರಳ ಪೊಲೀಸರಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಇವರಲ್ಲಿ 51 ಮಹಿಳೆಯರು ದರ್ಶನ ಪಡೆದಿರುವುದಾಗಿ ದಾಖಲೆಗಳಲ್ಲಿ ಇದೆ. ಉಳಿದವರು ದರ್ಶನ ಪಡೆದಿರಬಹುದು ಅಥವಾ ಈ ಬಾರಿ ಶಬರಿಮಲೆಯಲ್ಲಿ ಸೃಷ್ಟಿಯಾಗಿರುವ ಸಂಘರ್ಷಾತ್ಮಕ ಸ್ಥಿತಿಯ ಕಾರಣಕ್ಕೆ ತಮ್ಮ ಯೋಜನೆ ಕೈಬಿಟ್ಟಿರಬಹುದು ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !