ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗಿ ಕನ್ಹಯ್ಯಾ, ರಾಹುಲ್‌ ವಿರುದ್ಧ ರಾಹುಲ್‌...

ಕಂಡು ಕೇಳರಿಯದ ಅನೇಕ ಪಕ್ಷಗಳು, ಒಂದೇ ಹೆಸರಿನ ಹಲವು ಅಭ್ಯರ್ಥಿಗಳು ಈ ಬಾರಿ ಕಣದಲ್ಲಿ
Last Updated 14 ಏಪ್ರಿಲ್ 2019, 18:48 IST
ಅಕ್ಷರ ಗಾತ್ರ

ನವದೆಹಲಿ: ‘ನಿರುದ್ಯೋಗಿ’ ಕನ್ಹಯ್ಯಾ ಕುಮಾರ್‌, ಕೇಂದ್ರದ ಸಚಿವ ಗಿರಿರಾಜ್‌ ಸಿಂಗ್‌ ವಿರುದ್ಧ ತೊಡೆ ತಟ್ಟಿದ್ದಾರೆ. ಪಕ್ಷೇತರರಾದ ರಾಹುಲ್‌ ಗಾಂಧಿ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರನ್ನು ಎದುರಿಸಲಿದ್ದಾರೆ. ‘ಅತ್ಯುತ್ತಮ ಪಾರ್ಟಿ’ ಎನ್ನುವ ಪಕ್ಷ ಉತ್ತರ ಪ್ರದೇಶದ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಷ್ಟೇ ಅಲ್ಲ, ‘ರಿಯಲ್’ ಪಕ್ಷವೊಂದು ಬಿಹಾರದಲ್ಲಿ ಸ್ಪರ್ಧಿಸುತ್ತಿದೆ...

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರಗಳತ್ತ ದೃಷ್ಟಿ ಹರಿಸಿದರೆ ಇಂಥ ಅನೇಕ ಆಸಕ್ತಿದಾಯಕ ಅಂಶಗಳು ಕಾಣಿಸುತ್ತವೆ.

ಬಿಹಾರದ ಬೇಗುಸರಾಯ್‌ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಕನ್ಹಯ್ಯಾ ಕುಮಾರ್‌ ಅವರು ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಾನು ‘ನಿರುದ್ಯೋಗಿ’ ಎಂದು ಉಲ್ಲೇಖಿಸಿದ್ದಾರೆ. ಪಿಎಚ್‌ಡಿ ಪದವೀಧರ, ಯುವ ನಾಯಕ ಎನ್ನಿಸಿಕೊಂಡಿರುವ ಕನ್ಹಯ್ಯಾ ಅವರು ‘ನಾನು ನಿರುದ್ಯೋಗಿ’ ಎಂದು ಹೇಳುವ ಮೂಲಕ ಒಂದು ಬಲವಾದ ಸಂದೇಶವನ್ನು ನೀಡಲು ಹೊರಟಿದ್ದಾರೆ. ತಾವು ಬರೆದಿರುವ ಪುಸ್ತಕದಿಂದ ಬರುವ ಗೌರವಧನ ಮತ್ತು ಆಗಾಗ ಪತ್ರಿಕೆಗಳಿಗೆ ಬರೆಯುವ ಲೇಖನಗಳಿಗಾಗಿ ಪಡೆಯುವ ಸಂಭಾವನೆಯಿಂದ ಜೀವನ ನಡೆಯುತ್ತಿದೆ ಎಂದು ಕನ್ಹಯ್ಯಾ ಕುಮಾರ್‌ ಉಲ್ಲೇಖಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಝಳಪಿಸುತ್ತಿರುವ ಪ್ರಮುಖ ಅಸ್ತ್ರವೇ ‘ನಿರುದ್ಯೋಗ’. ಆದ್ದರಿಂದ ಪ್ರಮಾಣಪತ್ರದ ‘ವೃತ್ತಿ’ ಮತ್ತು ‘ಆದಾಯದ ಮೂಲ’ ಕಾಲಂಗಳಲ್ಲಿ ಅವರು ಯಾವುದೇ ಅಳುಕಿಲ್ಲದೆ ಈ ಮಾಹಿತಿಯನ್ನು ತುಂಬಿದ್ದಾರೆ ಎಂದು ಕನ್ಹಯ್ಯಾ ಅವರ ಸ್ನೇಹಿತರು ಹೇಳುತ್ತಾರೆ.

ಇತ್ತ ಕೇರಳದ ವಯನಾಡ್‌ನಿಂದ ಸ್ಪರ್ಧೆಗೆ ಇಳಿದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇನ್ನೂ ಮೂವರು ‘ಗಾಂಧಿ’ಗಳನ್ನು ಎದುರಿಸಬೇಕಾಗಿದೆ. ಅವರಲ್ಲಿ ಒಬ್ಬರು ಪತ್ರಕರ್ತರು ಮತ್ತು ಒಬ್ಬರು ಸಂಸ್ಕೃತ ಶಿಕ್ಷಕರು.

ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರುವ 33 ವರ್ಷ ವಯಸ್ಸಿನ ರಾಹುಲ್‌ ಗಾಂಧಿ ಕೆ.ಇ. ಅವರ ಬ್ಯಾಂಕ್‌ ಖಾತೆಯಲ್ಲಿರುವುದು ಕೇವಲ ₹ 15. ಅವರ ಒಟ್ಟಾರೆ ಆಸ್ತಿಯ ಮೌಲ್ಯ ₹ 5,515. ಇವರು ಭಾಷಾಶಾಸ್ತ್ರದಲ್ಲಿ ಎಂ.ಫಿಲ್‌ ಪದವಿ ಪಡೆದವರು.

40 ವರ್ಷ ವಯಸ್ಸಿನ ಕೆ.ಎಂ. ಶಿವಪ್ರಸಾದ್‌ ಗಾಂಧಿ ಸಂಸ್ಕೃತ ಶಿಕ್ಷಕರು ಮತ್ತು ಇಲ್ಲಿ ಅವರು ‘ಇಂಡಿಯನ್‌ ಗಾಂಧಿಯನ್‌ ಪಾರ್ಟಿ’ಯ ಅಭ್ಯರ್ಥಿ. ಇನ್ನೊಬ್ಬರು 30 ವರ್ಷ ವಯಸ್ಸಿನ ರಾಘುಲ್‌ ಗಾಂಧಿ ಕೆ. ಇವರು ಕೊಯಮತ್ತೂರಿನ ‘ಆ್ಯಂಟಿ– ಕರಪ್ಶನ್‌’ ಪತ್ರಿಕೆಯ ಉದ್ಯೋಗಿ. ಇವರು ‘ಅಖಿಲ ಇಂಡಿಯಾ ಮಕ್ಕಳ ಕಳಗಂ’ನ ಅಭ್ಯರ್ಥಿ.

ಕಣದಲ್ಲಿರುವ ಅತಿ ಹಿರಿಯ ರಾಜಕಾರಣಿಗಳ ಸಾಲಿನಲ್ಲಿ ಸಮಾಜವಾದಿ ಪಕ್ಷದ ನಾಯಕ, ಮುಲಾಯಂ ಸಿಂಗ್‌ ಯಾದವ್‌ (79) ಇದ್ದಾರೆ. ಅವರ ಕ್ಷೇತ್ರದಲ್ಲಿ ಅವರಿಗಿಂತ ಹಿರಿಯರಾದ ಹರಿರಾಂ ಶಾಕ್ಯ (81) ಎಂಬುವವರು ಕಣಕ್ಕೆ ಇಳಿದಿದ್ದಾರೆ. ‘ನಾನು ಮಾಜಿ ಶಾಸಕ’ ಎನ್ನುತ್ತಿರುವ ಶಾಕ್ಯ ‘ವೋಟರ್ಸ್‌ ಪಾರ್ಟಿ ಇಂಟರ್‌ನ್ಯಾಷನಲ್‌’ನ ಅಭ್ಯರ್ಥಿಯಾಗಿದ್ದಾರೆ.

ಬಹುತೇಕ ಜನರು ಕೇಳಿಯೇ ಇರದಂಥ ಕೆಲವು ಪಕ್ಷಗಳು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಅತ್ಯುತ್ತಮ ಪಕ್ಷವನ್ನು ಸೇರುವ ಆಸಕ್ತಿ ಯಾರಿಗಾದೂ ಇದ್ದರೆ ಅಂಥವರು ಇಲ್ಲಿ ‘ಸಬ್‌ ಸೆ ಅಚ್ಛೀ ಪಾರ್ಟಿ’ಯ ಅಭ್ಯರ್ಥಿಯಾಗಬಹುದು. ಈ ಪಕ್ಷ ಉತ್ತರ ಪ್ರದೇಶದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಅರವಿಂದ ಕೇಜ್ರಿವಾಲ್‌ ಅವರ ಎಎಪಿಯನ್ನೆ ಹೋಲುವ ‘ಆಪ್‌ಕಿ ಅಪನಿ ಪಾರ್ಟಿ’ (ನಿಮ್ಮ ಸ್ವಂತ ಪಕ್ಷ) ಎಂಬ ಪಕ್ಷವೊಂದು ಉತ್ತರ ಪ್ರದೇಶದಲ್ಲಿದೆ. ಸಬ್‌ ಸೆ ಅಚ್ಛೀ ಪಾರ್ಟಿಯ ಅಭ್ಯರ್ಥಿಗಳು ಇರುವ ಕ್ಷೇತ್ರದಲ್ಲಿ ಈ ಪಕ್ಷವೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

‘ರೈಟ್‌ ಟು ರೀಕಾಲ್‌’ ಎಂಬ ಒಂದು ಪಕ್ಷವೂ ಉತ್ತರ ಪ್ರದೇಶದಲ್ಲಿದೆ. ‘ಚುನಾವಣೆಯಲ್ಲಿ ಆಯ್ಕೆಯಾಗಿ, ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅಭ್ಯರ್ಥಿಗಳನ್ನು ವಾಪಸ್‌ ಕರೆಸುವ ವ್ಯವಸ್ಥೆ ಬೇಕು’ ಎಂಬುದನ್ನು ಈ ಪಕ್ಷ ಪ್ರತಿಪಾದಿಸುತ್ತಿದೆ. ಮಾಧೇಪುರ ಕ್ಷೇತ್ರದಲ್ಲಿ ಹಿರಿಯ ನಾಯಕ ಶರದ್‌ ಯಾದವ್‌ ಅವರ ವಿರುದ್ಧ ‘ಅಸ್ಲಿ ದೇಸಿ ಪಾರ್ಟಿ’ಯು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಭರವಸೆಯೂ ಇಲ್ಲ, ಹುರುಪೂ ಇಲ್ಲ

ದೇಶದ ವಿವಿಧ ಕ್ಷೇತ್ರಗಳಲ್ಲಿ ಜನರಿಗೆ ಪರಿಚಯವೇ ಇಲ್ಲದ ಅದೆಷ್ಟೋ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇಂಥ ಅಭ್ಯರ್ಥಿಗಳಿಗೆ ಗೆಲ್ಲುವ ಭರವಸೆಯಾಗಲಿ, ಗೆಲ್ಲಲೇಬೇಕೆಂಬ ಹುರುಪಾಗಲಿ ಇಲ್ಲ. ಕೆಲವರು ಚುನಾವಣೆಯಲ್ಲಿ ಭಾಗಿಯಾಗಬೇಕು ಎಂಬ ಕಾರಣಕ್ಕೆ ಸ್ಪರ್ಧಿಸುತ್ತಿದ್ದರೆ, ಇನ್ನೂ ಕೆಲವರು ಪ್ರಮುಖ ಪಕ್ಷದ ಅಭ್ಯರ್ಥಿಯ ಮತಗಳನ್ನು ಒಡೆಯುವ ಉದ್ದೇಶದಿಂದ ಚುನಾವಣೆಗೆ ಇಳಿಯುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT