ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಕರೆಗೆ ಸಾಧ್ವಿಯ ‘ಶಾಪ’: ಸಂದಿಗ್ಧದಲ್ಲಿ ಭಾಜಪ

ಭೋಪಾಲ್‌: ಪ್ರಜ್ಞಾ ಸಿಂಗ್‌ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ l ಅಭ್ಯರ್ಥಿ ಬದಲಿಸುವ ಸಾಧ್ಯತೆ ಬಗ್ಗೆ ಬಿಜೆಪಿ ವರಿಷ್ಠರ ಚಿಂತನೆ
Last Updated 20 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ಭೋಪಾಲ್: ಮುಂಬೈ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಮಧ್ಯಪ್ರದೇಶದಲ್ಲಿ ಬಿಜೆಪಿಯ ಸಂಕಟಗಳನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.ಕರ್ಕರೆ ವಿರುದ್ಧ ತಿರಸ್ಕಾರದ ಭಾಷೆಯಲ್ಲಿ ಮಾತನಾಡಿದ ಸಾಧ್ವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಕುದಿಯುತ್ತಿದೆ.

ಸಾಧ್ವಿ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಯತ್ನಿಸಿದರೂ, ಪಕ್ಷದ ‘ರಾಷ್ಟ್ರೀಯತೆ’ಯ ವರ್ಚಸ್ಸಿಗೆ ಭಾರಿ ಹಾನಿ ಆಗಿದೆ. ಪ್ರಜ್ಞಾ ಅವರ ಹೇಳಿಕೆಯು ಪಕ್ಷಕ್ಕೆ ಹೊರೆಯಾಗಿದೆ ಎಂದು ಬಿಜೆಪಿ ನಾಯಕರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಅದರೆ ಬಹಿರಂಗವಾಗಿ ಮಾತನಾಡುವಾಗ, ‘ಪ್ರಜ್ಞಾ ಅವರು ಜೈಲಿನಲ್ಲಿ ಎದುರಿಸಿದ ದೈಹಿಕ, ಮಾನಸಿಕ ಯಾತನೆಯಿಂದ ಈ ರೀತಿ ಮಾತನಾಡಿರಬಹುದು’ ಎಂದು ಸಮರ್ಥನೆ ನೀಡುತ್ತಿದ್ದಾರೆ.

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಆಗಿರುವ ಸಾಧ್ವಿ, ಬಿಜೆಪಿಯನ್ನು ಇಕ್ಕಟ್ಟಿಗೆ ತಂದಿಟ್ಟಿದ್ದಾರೆ. ವಿಪರ್ಯಾಸವೆಂದರೆ, ಪ್ರಜ್ಞಾ ಅವರ ಜೈಲುಜೀವನದ ಭಾವನಾತ್ಮಕ ಕಥಾನಕವನ್ನು ಅವರಿಂದಲೇ ಹೇಳಿಸಿ ಅನುಕಂಪ ಗಿಟ್ಟಿಸಿಕೊಳ್ಳಲು ಬಿಜೆಪಿ ಬಯಸಿತ್ತು. ಆದರೆ, ಪ್ರಜ್ಞಾ ಇದೀಗ ಎಲ್ಲವನ್ನೂಮೀರಿ ಮುಂದೆ ಹೋಗಿದ್ದು, ಅಧಿಕಾರಿಯ ಬಲಿದಾನವನ್ನೇ ಅಪಮಾನ ಮಾಡಿದ್ದಾರೆ. ಆಗಿರುವ ಹಾನಿಯನ್ನು ಸರಿಪಡಿಸಲು ಬಿಜೆಪಿ ಒದ್ದಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಇದೇ 23ರಂದು ನಾಮಪತ್ರ ಸಲ್ಲಿಸಲುಸಾಧ್ವಿ ಸಿದ್ಧತೆಯಲ್ಲಿ ತೊಡಗಿರುವ ಮಧ್ಯೆಯೇ, ಅವರಿಂದ ಪಕ್ಷಕ್ಕೆ ಆಗಿರುವ ಹಾನಿಯ ಅಂದಾಜು ಮಾಡುವಲ್ಲಿ ಬಿಜೆಪಿ ನಿರತವಾಗಿದೆ ಎಂದು ಹೇಳಲಾಗಿದೆ. ಸಾಧ್ವಿ ಬದಲಿಗೆ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಒಂದು ವೇಳೆ ಈ ನಿರ್ಧಾರವು ಪಕ್ಷಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಬಲ್ಲದು ಎಂಬುದು ಖಚಿತವಾದಲ್ಲಿ, ಆ ಸಾಧ್ಯತೆಯೂ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದೊಳಗಿನ ಭಿನ್ನಾಭಿಪ್ರಾಯ, ಹಾಲಿ ಸಂಸದರ ಬಗೆಗಿನ ವಿರೋಧಿ ಅಲೆಯಲ್ಲಿ ನಲುಗುತ್ತಿರುವಮಧ್ಯಪ್ರದೇಶ ಬಿಜೆಪಿ ಘಟಕಕ್ಕೆ ಸಾಧ್ವಿ ಅವರಿಂದ ಆಗಿರುವ ಹಾನಿಯೂ ಸೇರಿಕೊಂಡಿದೆ. ಸಂಪನ್ಮೂಲಗಳ ಕೊರತೆಯಿಂದಲೇ ರಾಜ್ಯದಲ್ಲಿ ಬಿಜೆಪಿ ಈ ಬಾರಿ ಅಧಿಕಾರ ಕಳೆದುಕೊಳ್ಳುವಂತಾಯಿತು ಎಂಬುದೂ ಪಕ್ಷದಲ್ಲಿ ಚರ್ಚೆಗೊಳಗಾಗಿತ್ತು.

ತಮ್ಮ ಶಾಪದಿಂದ ಹೇಮಂತ್ ಕರ್ಕರೆ ಮೃತಪಟ್ಟರು ಎಂದು ಪ್ರಜ್ಞಾ ನೀಡಿದ ಹೇಳಿಕೆ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಮಾಲೆಗಾಂವ್ ಪ್ರಕರಣದ ತನಿಖೆ ನಡೆಸುತ್ತಿದ್ದ ಹೇಮಂತ್ ಕರ್ಕರೆ ಅವರು ವಿಚಾರಣೆ ವೇಳೆ ತಮಗೆ ಹಿಂಸೆ ನೀಡಿದ್ದರು ಎಂದು ಪ್ರಜ್ಞಾಆರೋಪಿಸಿದ್ದರು.

ಹಿಂದೂ ಭಯೋತ್ಪಾದನೆ ಹಣೆಪಟ್ಟಿಗೆ ಸಾಧ್ವಿ ಸ್ಪರ್ಧೆಯೇ ಉತ್ತರ: ಮೋದಿ
ಶ್ರೀಮಂತ ಹಿಂದೂ ಪರಂಪರೆಯ ನಾಗರಿಕರಿಗೆ ಭಯೋತ್ಪಾದಕರು ಎಂಬ ಹಣೆಪಟ್ಟಿ ಕಟ್ಟಿದ ಎಲ್ಲರಿಗೂ ಸಾಧ್ವಿ ಸ್ಪರ್ಧೆಯೇ ಉತ್ತರ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಇದಕ್ಕೆ ದುಬಾರಿ ದಂಡ ತೆರಲಿದೆ ಎಂದೂ ಅವರು ಹೇಳಿದ್ದಾರೆ.

ಮಾಲೆಗಾಂವ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಸಾಧ್ವಿ ಅವರಿಗೆ ಟಿಕೆಟ್ ನೀಡಿದ್ದನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ,ಜಾಮೀನಿನ ಮೇಲೆ ಹೊರಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ವಿರುದ್ಧ ಇಂತಹ ಪ್ರಶ್ನೆಗಳನ್ನು ಏಕೆ ಕೇಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸ‌ಂಜೋತಾ ರೈಲು ದುರಂತ, ನ್ಯಾಯಮೂರ್ತಿ ಎಚ್.ಬಿ. ಲೋಯಾ ಸಾವು ಮೊದಲಾದ ಪ್ರಕರಣಗಳಲ್ಲಿ ಸುಳ್ಳು ಕತೆಗಳನ್ನು ಸೃಷ್ಟಿಸುವ ವಿಧಾನವನ್ನು ಕಾಂಗ್ರೆಸ್ ಕರಗತ ಮಾಡಿಕೊಂಡಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ.

ಎಲ್ಲ ಎನ್‌ಕೌಂಟರ್‌ಗಳನ್ನು ನಕಲಿ ಎಂದು ಬಿಂಬಿಸಲು ಕಾಂಗ್ರೆಸ್ ಯತ್ನಿಸಿತು. ಲೋಯಾ ಅವರು ಸಹಜವಾಗಿ ಸಾವನ್ನಪ್ಪಿದ್ದರೂ ಕೊಲೆಯಾಗಿದ್ದಾರೆ ಎಂದು ವಾದ ಮಾಡಿತು. ಇದೇ ವಿಧಾನವನ್ನು ಇವಿಎಂ ವಿಚಾರದಲ್ಲೂ ಅನುಸರಿಸುತ್ತಿದೆ ಎಂದು ಪ್ರಧಾನಿ ಕಿಡಿಕಾರಿದ್ದಾರೆ.

‘ಇಂದಿರಾ ಅವರು ಹತ್ಯೆಯಾದಾಗ, ದೇಶವೇ ನಡುಗಿತು. ದೆಹಲಿಯಲ್ಲಿ ಸಾವಿರಾರು ಸಿಖ್ ಧರ್ಮೀಯರ ಮಾರಣಹೋಮ ನಡೆಯಿತು. ಇದು ಭಯೋತ್ಪಾದನೆ ಅಲ್ಲವೇ? ತಟಸ್ಥ ಮಾಧ್ಯಮಗಳೂ ನರಮೇಧದ ಬಗ್ಗೆ ಒಂದೂ ಪ್ರಶ್ನೆ ಕೇಳಲಿಲ್ಲ ಏಕೆ’ ಎಂದು ಮೋದಿ ಪ್ರಶ್ನಿಸಿದ್ದಾರೆ.

ಕರ್ಕರೆ ವೃತ್ತಿಪರತೆ ಸಮರ್ಥಿಸಿಕೊಂಡ ನಿವೃತ್ತ ಡಿಜಿಪಿ
ಮುಂಬೈ: ಸಾಧ್ವಿ ಅವರ ಶಾಪದ ಹೇಳಿಕೆಯಿಂದ ತೀವ್ರ ಆಘಾತವಾಗಿದೆ ಎಂದು ಮಹಾರಾಷ್ಟ್ರದ ನಿವೃತ್ತ ಡಿಜಿಪಿ ಎ.ಎನ್. ರಾಯ್ ಹೇಳಿದ್ದಾರೆ.

ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯನ್ನುಕರ್ಕರೆ ನಡೆಸುತ್ತಿದ್ದ ಅವಧಿಯಲ್ಲಿ ರಾಯ್ ಅವರು ಮಹಾರಾಷ್ಟ್ರದ ಪೊಲೀಸ್ ಇಲಾಖೆಯ ಮುಖ್ಯಸ್ಥ
ರಾಗಿದ್ದರು.

‘ಪೊಲೀಸ್ ವಿಷಯಗಳ ಬಗ್ಗೆ ನಾನು ಎಂದಿಗೂ ಬಹಿರಂಗವಾಗಿ ಮಾತನಾಡಿದ್ದಿಲ್ಲ. ಆದರೆ ನನ್ನ ಸಹೋದ್ಯೋಗಿಯಾಗಿದ್ದ ಹುತಾತ್ಮ ಕರ್ಕರೆ ಅವರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದು ರಾಯ್ ಹೇಳಿದ್ದಾರೆ.

ಕರ್ಕರೆ ಅವರು ತನಿಖೆಯನ್ನು ಅತ್ಯಂತ ವೃತ್ತಿಪರವಾಗಿ ನಡೆಸುತ್ತಿದ್ದರು ಎಂದು ರಾಯ್ ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಪಕ್ಷಪಾತವಿಲ್ಲದೇ,ಹೊರಗಿನ ಒತ್ತಡವಿಲ್ಲದೇ ಅವರು ತನಿಖೆ ನಡೆಸಿದ್ದರು ಎಂದು ಹೇಳಿದ್ದಾರೆ.‘ಪ್ರಕರಣದ ಆರೋಪಿ ಅಥವಾ ಯಾವುದೇ ವ್ಯಕ್ತಿ ನೀಡುವ ಇಂತಹ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಮುಂಬೈನಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಕರ್ಕರೆ ಅವರು ಮಾಡಿರುವ ತ್ಯಾಗ ದೊಡ್ಡದು. ಸಾಧ್ವಿ ಹೇಳಿಕೆ ಆಕ್ಷೇಪಾರ್ಹ ಮಾತ್ರವಲ್ಲ, ಅನೈತಿಕವೂ ಕೂಡಾ’ ಎಂದು ರಾಯ್ ಹೇಳಿದ್ದಾರೆ. ಐಪಿಎಸ್ ಅಧಿಕಾರಿಗಳ ಸಂಘಟನೆಯು ಸಾಧ್ವಿ ಹೇಳಿಕೆಯನ್ನು ಶುಕ್ರವಾರ ಖಂಡಿಸಿತ್ತು.

ಸಾಧ್ವಿಗೆ ಚುನಾವಣಾ ಆಯೋಗ ನೋಟಿಸ್
ಕರ್ಕರೆ ವಿರುದ್ಧ ಹೇಳಿಕೆ ನೀಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಚುನಾವಣಾ ಆಯೋಗ ಶನಿವಾರ ನೋಟಿಸ್ ನೀಡಿದೆ.

‘ಸಾಧ್ವಿ ಹೇಳಿಕೆ ಬಗ್ಗೆ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಸಹಾಯಕ ಚುನಾವಣಾ ಅಧಿಕಾರಿಯಿಂದ ವರದಿ ಕೇಳಲಾಗಿತ್ತು. ವರದಿ ಕೈಸೇರಿದ್ದು, ಸಾಧ್ವಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. 24 ಗಂಟೆಯೊಳಗೆ ಉತ್ತರಿಸುವಂತೆ ಸಾಧ್ವಿ ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಿದ್ದವರಿಗೆ ಸೂಚನೆ ನೀಡಲಾಗಿದೆ’ ಎಂದು ಭೋಪಾಲ್ ಚುನಾವಣಾಧಿಕಾರಿ ಸುಧಾಮ ಖಾಡೆ ಹೇಳಿದ್ದಾರೆ.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಕೆಲವೊಂದು ನಿರ್ಬಂಧಗಳನ್ನು ವಿಧಿಸಿ ಪ್ರಚಾರ ಸಭೆ ನಡೆಸಲು ಆಯೋಜಕರಿಗೆ ಅನುಮತಿ ನೀಡಲಾಗಿತ್ತು ಎಂದು ಖಾಡೆ ತಿಳಿಸಿದ್ದಾರೆ. ಯಾವುದೇ ವ್ಯಕ್ತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಬಾರದು ಎಂಬ ವಿಷಯವೂ ನಿಬಂಧನೆಗಳ ಪಟ್ಟಿಯಲ್ಲಿ ಇತ್ತು ಎಂದು ಮತ್ತೊಬ್ಬ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

**
ಯುಪಿಎ ಸರ್ಕಾರದ ಒತ್ತಡದಿಂದ ಕರ್ಕರೆ ನೇತೃತ್ವದ ಭಯೋತ್ಪಾದನಾ ನಿಗ್ರಹ ದಳ ಕೆಲಸ ಮಾಡಿದೆ. ಅಂದು ಕಾಂಗ್ರೆಸ್ ಸರ್ಕಾರ ಇತ್ತು. ಎಟಿಎಸ್ ಮೇಲೆ ಒತ್ತಡವಿತ್ತು ಎಂಬುದು ಎಲ್ಲರಿಗೂ ಗೊತ್ತು.
–ಸಂಜಯ್ ರಾವತ್, ಶಿವಸೇನಾ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT