ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ನಿಷೇಧ: ಮಿಡಿಯದ ಪಕ್ಷಗಳು

ಮಹಿಳೆಯರ ಮನೋಬಲ ಕುಗ್ಗಿಸಲು ದೈಹಿಕ ಬಲದ ಪ್ರಯೋಗ, ಅದರ ಹಿಂದೆ ಅಧಿಕಾರಸ್ಥರ ಒತ್ತಡ...
Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಚುನಾವಣೆ ಸಮೀಪಿಸಿದೆ. ರಾಷ್ಟ್ರೀಯ ಪಕ್ಷಗಳ ರಾಷ್ಟ್ರೀಯ ನಾಯಕರ ಪರಸ್ಪರ ಕೆಸರೆರಚಾಟ, ಸ್ಥಳೀಯ ನಾಯಕರ ಅಬ್ಬರದ ಪ್ರಚಾರಗಳ ನಡುವೆಯೂ ಈ ಬಾರಿ ಗಮನ ಸೆಳೆಯುತ್ತಿರುವುದೆಂದರೆ ಬೇರೆ ಬೇರೆ ಜನಸಂಘಟನೆಗಳು, ‘ಜನರನ್ನು ಕಾಡುವ ಸಮಸ್ಯೆಗಳ ಕಡೆಗೆ ಗಮನ ಹಾಕಿ’ ಎಂದು ಅಭ್ಯರ್ಥಿಗಳಿಗೆ ಸವಾಲೆಸೆಯುತ್ತಿರುವುದು. ಆರೋಗ್ಯ, ಪಂಚಾಯತ್ ರಾಜ್, ಆಹಾರದಂಥ ವಿಷಯಾಧಾರಿತ ಚಿಕ್ಕ ಪುಟ್ಟ ಗುಂಪುಗಳು ತಮ್ಮ ಜನಪ್ರಣಾಳಿಕೆಗಳನ್ನು ಮಾಡಿ ಸರ್ವಪಕ್ಷಗಳಿಗೆ ಮನವಿ ನೀಡುತ್ತಿವೆ. ಬೇರೆ ಬೇರೆ ವಿಷಯಾಧಾರಿತ ಚರ್ಚೆಗಳು, ಸಭೆಗಳು ಆಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರ ಕೂಡ ಸಾಕಷ್ಟು ಜನರ ಗಮನ ಸೆಳೆದಿದೆ. ದಕ್ಷಿಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ, ಸಂವಿಧಾನದ ಉಳಿವಿಗಾಗಿ ಜನಸಂವಾದಗಳು ನಡೆದಿದ್ದರೆ, ಉತ್ತರ ಕರ್ನಾಟಕದ ರಾಯಚೂರಿನ ಮಹಿಳೆಯರು ‘ಕರ್ನಾಟಕದಲ್ಲಿ ಮದ್ಯ ನಿಷೇಧ ಮಾಡಿ’ ಎಂದು 71 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿ ಎಲ್ಲಾ ಪಕ್ಷಗಳ ಗಮನ ಸೆಳೆಯಲು ಪ್ರಯತ್ನಿಸಿದರು. ಮದ್ಯ ನಿಷೇಧ ಮಾಡುತ್ತೇವೆಂದು ಭರವಸೆ ಕೊಡುವ ಪಕ್ಷಕ್ಕೆ ತಾವು ಮತ ನೀಡುವುದಾಗಿ ಮಹಿಳೆಯರು ಬಹಿರಂಗವಾಗಿ ಘೋಷಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳಾಗಿದ್ದರೂ ಮಹಾತ್ಮ ಗಾಂಧಿಯವರ ಕನಸಿನ ‘ಮದ್ಯ ನಿಷೇಧ’ ಇನ್ನೂ ಏಕೆ ಆಗುತ್ತಿಲ್ಲವೆಂದು ಪ್ರಶ್ನಿಸಲು 71 ದಿನಗಳ ಸುದೀರ್ಘ ಹೋರಾಟವನ್ನು ಮಾಡಿ ಇದೀಗ ಮುಗಿಸಿದ್ದಾರೆ.

ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧ ಮಾಡುವುದಾಗಿ ವಚನವಿತ್ತು ಆರಿಸಿ ಬಂದ ಬಿಹಾರದ ನಿತೀಶ್‍ಕುಮಾರ್ ಅವರು ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಿದಾಗ, ಕರ್ನಾಟಕದಲ್ಲೂ ಇದು ಸಾಧ್ಯವಾಗಬಹುದೇ? ಎಂದು ಅನೇಕ ಸಂಘಟನೆಗಳಿಗೆ ಅನಿಸಿದ್ದು ಸಹಜ. ಹಳ್ಳಿ ಹಳ್ಳಿಗಳಲ್ಲಿ ಜನಸಾಮಾನ್ಯರೊಂದಿಗೆ ಕೆಲಸ ಮಾಡುತ್ತಿರುವ ಯಾರಿಗಾದರೂ ಅಲ್ಲಿ ನಡೆಯುತ್ತಿರುವ ಮದ್ಯದ ಬೆತ್ತಲೆ ಕುಣಿತ ಜುಗುಪ್ಸೆ ತಂದಿರುವುದು ಸಹಜ. ಮಹಿಳೆಯರ ಸಂಘಟನೆ ಮಾಡಿ ಅವರಿಗೆ ಉಳಿತಾಯ, ಸ್ವಉದ್ಯೋಗ, ಸಬಲೀಕರಣದ ಪಾಠಗಳನ್ನು ಮಾಡಿ ಒಂದು ಬದಲಾವಣೆಯನ್ನು ನಿರೀಕ್ಷಿಸುವ ಹೊತ್ತಿಗೆ ಮದ್ಯವು ಒಂದು ಪ್ರವಾಹದಂತೆ ಬಂದು ಎಲ್ಲ ಕೆಲಸವನ್ನೂ ಕೊಚ್ಚಿಕೊಂಡು ಹೋಗಿ ಹೆಂಗಸರ ಮನೋಬಲವನ್ನು ಸಂಪೂರ್ಣ ಛಿದ್ರ ಛಿದ್ರಗೊಳಿಸುತ್ತಿರುವುದು ಸುಳ್ಳಲ್ಲ. ತಾನು ದುಡಿದಿದ್ದನ್ನಂತೂ ಸಂಪೂರ್ಣ ಕುಡಿತಕ್ಕೆ ಹಾಕುವುದಲ್ಲದೆ, ಹೆಂಡತಿಯ, ತಾಯಿಯ, ಅಕ್ಕ ತಂಗಿಯರ, ಮಕ್ಕಳ ದುಡಿತದ ಹಣದಲ್ಲೂ ಕುಡಿಯುವ ಕನಸುಗಾರರು ಅವರು. ಹೆಂಡತಿಯ ತಾಳಿ, ಮನೆಯ ಕದ, ಹಂಡೆಗಳನ್ನೆಲ್ಲ ಮಾರಿಯಾದರೂ ಕುಡಿಯಲೇ ಬೇಕು. ಊಟಕ್ಕಿಲ್ಲ, ಮಕ್ಕಳಿಗೆ ಶಿಕ್ಷಣವಿಲ್ಲ ಎಂಬ ಯಾವ ವಿಚಾರವೂ ಕುಡುಕರನ್ನು ಬಾಧಿಸುವುದಿಲ್ಲ. ತನಗಡ್ಡಿಯಾಗುವ ಹೆಂಡತಿ, ತಾಯಿ, ಮಕ್ಕಳು ಎಲ್ಲರಿಗೂ ಮನಬಂದಂತೆ ಹೊಡೆದು, ಬಾಸುಂಡೆಗಳನ್ನು ಮೂಡಿಸಿ ಬಿದ್ದು ಒರಗುವವರು ಅವರು. ಹಳ್ಳಿಗಳ ಶಾಂತ ಪರಿಸರವನ್ನೇ ರೌರವ ನರಕವಾಗಿಸಿಟ್ಟವರು.

ಸಂಜೆಯಾಯಿತೆಂದರೆ ಶಹರದಿಂದ ಹಳ್ಳಿಗೆ ಹೋಗುವ ಯಾವ ಬಸ್ಸನ್ನೂ ಹತ್ತುವಂತಿಲ್ಲ. ಕತ್ತಲಾಗುವುದರೊಳಗೆ ಮಹಿಳೆಯರು ಮನೆಯೊಳಗೆ ಸೇರಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳ ನಂತರವೂ ಇಂಥ ಸ್ಥಿತಿಯಲ್ಲಿ ನಾವಿದ್ದೇವೆ.

ಮದ್ಯ ನಿಷೇಧ ಆಗಬೇಕು ಎಂದು ಆಗಾಗ್ಗೆ ಅಲ್ಲಲ್ಲಿ ಸ್ಥಳೀಯ ಹೋರಾಟಗಳು, ಪ್ರಯತ್ನಗಳು ನಡೆದಿದ್ದರೂ ಹೊರಗಡೆಯ ಪ್ರಭಾವದಿಂದಾಗಿ ಅವೆಲ್ಲವೂ ಅಳಿಸಿಹೋಗುತ್ತಿದ್ದುದನ್ನು ಮನಗಂಡ ಆಂದೋಲನಕಾರರು ‘ಮದ್ಯ ನಿಷೇಧ ಆಗಲೇಬೇಕು’ ಎಂದು ರಾಜ್ಯವ್ಯಾಪಿ ಆಂದೋಲನವನ್ನು ರೂಪಿಸಿದರು. ಇದರತ್ತ ಒಲವಿರುವಂಥ ಹೆಚ್ಚಿನ ಸಂಘಟನೆಗಳನ್ನು ಒಟ್ಟಿಗೆ ತಂದು ಒಂದು ವರ್ಷದಿಂದ ಗ್ರಾಮ, ಪಂಚಾಯತಿ, ಜಿಲ್ಲೆ, ರಾಜ್ಯದ ಮಟ್ಟದಲ್ಲಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಯಿತು.

ಮದ್ಯ ನಿಷೇಧಕ್ಕಾಗಿ ಮಹಿಳೆಯರ ಒತ್ತಾಯ ಹೆಚ್ಚಾಗುತ್ತಿದ್ದಂತೆಯೇ ಅತ್ತ ರಾಜ್ಯ ಸರ್ಕಾರದಿಂದ ಹೆಚ್ಚೆಚ್ಚು ಮದ್ಯ ಮಾರಾಟ ಮಾಡಲು ಅಂಗಡಿಕಾರರಿಗೆ ಒತ್ತಡ. ಅಧಿಕೃತ ಅಂಗಡಿ ಒಂದಿದ್ದರೆ ಸುತ್ತ ಹತ್ತು ಹಳ್ಳಿಗಳ ಗೂಡಂಗಡಿಗಳಲ್ಲೂ ಬಾಟ್ಲಿಗಳನ್ನು ಇಟ್ಟು ಮಾರಾಟ ಮಾಡಲು ಸಂಚು. ಸಿಂಧನೂರು ತಾಲ್ಲೂಕಿನ ಚಾಗಬಾವಿ ಎಂಬ ಹಳ್ಳಿಯಲ್ಲಿ ಮಗನೊಬ್ಬ ಮನಸಾ ಕುಡಿದು ತನ್ನ ತಾಯಿಯನ್ನೇ ಸಾಯುವಂತೆ ಬಡಿದಾಗ ಅಲ್ಲಿ ಸಂಘಟನೆ ಮಾಡುತ್ತಿರುವ ಮಹಿಳಾ ಒಕ್ಕೂಟದವರು ಸಿಡಿದೆದ್ದರು. ಅನಧಿಕೃತ ಅಂಗಡಿಗಳಿಂದ ಮದ್ಯದ ಶೀಷೆಗಳನ್ನು ತೆಗೆದೊಗೆಯಬೇಕೆಂದು ಒಕ್ಕೂಟದ ಮಹಿಳೆಯರು ಅಧಿಕಾರಿಗಳಿಗೆ ದುಂಬಾಲು ಬಿದ್ದರು. ಈ ಸಂಬಂಧ ವಿಶೇಷ ಮಹಿಳಾ ಗ್ರಾಮ ಸಭೆಗಳನ್ನು ಕರೆದು ಮಹಿಳೆಯರೇನೆನ್ನುತ್ತಾರೆ ಎಂಬುದನ್ನು ದಾಖಲು
ಮಾಡಬೇಕೆಂದು ತಹಶೀಲ್ದಾರರ ಕಚೇರಿಯ ಮುಂದೆ ಎಂಟುದಿನಗಳ ಅಹೋರಾತ್ರಿ ಸತ್ಯಾಗ್ರಹವನ್ನೇ ಮಾಡಿದಾಗ, ಒತ್ತಾಯಕ್ಕೆ ಮಣಿದ ಅಬಕಾರಿ ಇಲಾಖೆ ನಾಮಕಾವಸ್ತೆ ಎರಡು ಪಂಚಾಯ್ತಿಗಳಲ್ಲಿ ಮಾತ್ರ ಮಹಿಳಾ ವಿಶೇಷ ಗ್ರಾಮ ಸಭೆಗಳನ್ನು ನಡೆಸಿತು. ‘ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಎಲ್ಲಾ ಅಂಗಡಿಗಳಿಂದಲೂ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಬೇಕು, ಮತ್ತೆ ಮದ್ಯದ ಬಾಟಲಿಗಳನ್ನಿಡಲು ಅವಕಾಶ ಕೊಡಬಾರದು’ ಎಂದು ಮಹಿಳೆಯರು ಗ್ರಾಮ ಸಭೆಗಳಲ್ಲಿ ಗಟ್ಟಿ ಧ್ವನಿಯಲ್ಲಿ ಕೇಳಿದರು. ಗ್ರಾಮ ಸಭೆಯ ಠರಾವುಗಳಿಗೆ ಸುಪ್ರೀಂ ಕೋರ್ಟಿನ ಆದೇಶದ ಬಲವಿದೆ ಎನ್ನುತ್ತಾರೆ.

ಅತ್ತ ದಕ್ಷಿಣ ಕರ್ನಾಟಕದಲ್ಲಿ ಮದ್ಯ ನಿಷೇಧ ಆಂದೋಲನದಿಂದ 40 ದಿನಗಳ ಪಾದಯಾತ್ರೆ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಮಠಗಳ ಸ್ವಾಮಿಗಳವರೆಗೆ ವಿವಿಧ ರಂಗದ ಗಣ್ಯರು ಬಂದು ಮದ್ಯ ನಿಷೇಧಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದರು.

ಅದೇ ವೇಳೆಗೆ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಪಂಚಾಯ್ತಿಯೊಂದರಲ್ಲಿ ಮಹಿಳೆಯರು ಹಗಲು– ರಾತ್ರಿ ಓಡಾಡಿ ಒಂದು ಗ್ರಾಮಸಭೆಯ ಮೂಲಕ ಮದ್ಯದಂಗಡಿಗಳನ್ನು ಮುಚ್ಚಿಸುವಲ್ಲಿ ಯಶಸ್ಸು ಪಡೆದಿದ್ದರು. ಆದರೆ ಗ್ರಾಮ ಸಭೆಯಲ್ಲಿ ದಿಟ್ಟವಾಗಿ ಮಾತಾಡಿದ ಹೆಣ್ಣುಮಕ್ಕಳನ್ನು ಕುಡುಕ ಗಂಡ ಮತ್ತು ಕುಡುಕ ಮಕ್ಕಳು ಮನಬಂದಂತೆ ಹೊಡೆದು ಬಡಿದು ಮತ್ತೆ ಅವರು ಸೊಲ್ಲೆತ್ತದಂತೆ ತಮ್ಮ ಪೌರುಷವನ್ನು ಮೆರೆದರು. ಮಹಿಳೆಯರ ಮನೋಬಲ ಕುಗ್ಗಿ
ಸಲು ದೈಹಿಕ ಬಲದ ಪ್ರಯೋಗ. ಆ ಬಲ ಪ್ರಯೋಗದ ಹಿಂದೆ ಮದ್ಯದಂಗಡಿಗಳ ಮಾಲೀಕರು, ಊರ ಹಿರಿಯರೆನ್ನಿಸಿಕೊಂಡವರ ಒತ್ತಾಸೆ. ಅದರ ಹಿಂದೆ ಅಧಿಕಾರಸ್ಥರ ಒತ್ತಡ.

ಮಹಿಳೆಯರದ್ದು ಎಲ್ಲರನ್ನೂ ಒಳಗೊಳ್ಳುವ ರಾಜಕೀಯ. ತಮ್ಮೂರ ಮಕ್ಕಳ ಉನ್ನತಿಯಲ್ಲಿ ಅವರು ಅಭಿವೃದ್ಧಿಯನ್ನು ಕಾಣುತ್ತಾರೆ. ದೇಶದ ಉನ್ನತಿ ಎಂದರೆ ಗ್ರಾಮದ ಏಳಿಗೆಯೆಂದಷ್ಟೇ ಗೊತ್ತು ಅವರಿಗೆ. ಉಂಡುಟ್ಟು ಸುಖವಾಗಿರಬೇಕಾದ ಕಾಲದಲ್ಲಿ ಊರಿನ ಯುವಕರು ಮದ್ಯದ ನಶೆಯಲ್ಲಿ ಓಲಾಡುವುದು, ಕುಡಿದು ರಸ್ತೆಯಲ್ಲಿ ಬಿದ್ದಿರುವುದು ಅಭಿವೃದ್ಧಿಯ ಪ್ರತೀಕವಾಗಿ ಅವರಿಗೆ ಕಾಣುವುದಿಲ್ಲ. ನೀವು ಮದ್ಯ ಮಾರಿ ಸರ್ಕಾರದ ಖಜಾನೆಯನ್ನು ತುಂಬುತ್ತಿರಬಹುದು, ಆದರೆ ರಾಜ್ಯದ ತುಂಬೆಲ್ಲ ಒಂದೂ ಹಳ್ಳಿ ಬಿಡದೆ, ಒಂದೂ ಪೇಟೆ ಬಿಡದೆ ಎಲ್ಲೆಡೆ ಶೆರೆ ಕುಡಿದು ಓಲಾಡುತ್ತಿರುವ, ಪೌಷ್ಟಿಕ ಆಹಾರವಿಲ್ಲದೆ ಮೂಳೆ, ಚಕ್ಕಳವಾಗಿರುವ ನರಪೇತಲ ಕುಡುಕ ಯುವ ಜನರು ಅಭಿಮಾನ ಹುಟ್ಟಿಸುವುದಿಲ್ಲ. ದುಡಿದ ದುಡ್ಡು ಮೈಗೆ ಹತ್ತಬೇಕು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಸಂಸಾರಗಳು ನಮ್ಮ ಸುತ್ತ ಇರಬೇಕೆನ್ನುವವರು ಮಹಿಳೆಯರು. ಈ ಕಾರಣಕ್ಕೆ ಮದ್ಯ ನಿಷೇಧವೆಂದ ಕೂಡಲೇ ನಮ್ಮ ಮಹಿಳೆಯರು ಚುರುಕಾಗುತ್ತಾರೆ, ಸಂಘಟನೆಯಾಗುತ್ತಾರೆ. ಮನೆಯ ಹೊಸಲಿನಿಂದಾಚೆ ಬಾರದವರು ಕೂಡ ಗ್ರಾಮ ಸಭೆಯಲ್ಲಿ ಧೈರ್ಯದಿಂದ ಮಾತಾಡುತ್ತಾರೆ. ಮತ್ತೆ ಮನೆಗೆ ಬಂದು ಹಿಂಸೆಗೆ ಮೈ ಒಡ್ಡುತ್ತಾರೆ.

ಆದರೆ ಭ್ರಷ್ಟ, ಮನೆಹಾಳು ವ್ಯವಸ್ಥೆಯ ವಿರುದ್ಧ ಮಾತನಾಡುವ ಪ್ರತಿಯೊಬ್ಬ ಮಹಿಳೆಯ ಬಾಯಿ ಮುಚ್ಚಿಸಿ, ಮನೋಬಲ ಕುಗ್ಗಿಸಿ ಮೂಲ ಸ್ಥಿತಿಯನ್ನು ಕಾಪಾಡಿಕೊಂಡು ಹೋಗುತ್ತದೆ ಈ ವ್ಯವಸ್ಥೆ. ಮನೆಯಲ್ಲಿ ಪುರುಷರಿಂದ ನಿಂದನೆ, ದೈಹಿಕ ದೌರ್ಜನ್ಯಗಳು ನಡೆದರೆ, ಹೊರಗಡೆ ಹೀಯಾಳಿಕೆ, ಅವಮಾನ, ಬರಬೇಕಾದ ಸವಲತ್ತುಗಳ ನಿರಾಕರಣೆ ನಡೆಯುತ್ತವೆ. ಊರ ಹಿರಿಯರು, ಅಧಿಕಾರಸ್ಥರು, ರಾಜಕೀಯ ಪಕ್ಷಗಳು... ಎಲ್ಲವೂ ಒಂದಾಗುತ್ತವೆ, ಎದ್ದ
ಪ್ರತಿಭಟನೆಯ ಸೊಲ್ಲನ್ನಡಗಿಸಲು. ಇದು ಮದ್ಯ ನಿಷೇಧಕ್ಕಾಗಿ ಎದ್ದ ಕೂಗಿಗೂ ಇರಬಹುದು, ಮಹಿಳೆಯರ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹದ ವಿಚಾರಗಳಲ್ಲೂ ಇರಬಹುದು ಅಥವಾ ಮುಗ್ಧ ಬಾಲಿಕೆಯರ ಅತ್ಯಾಚಾರದಂಥ ಪ್ರಕರಣಗಳಲ್ಲೂ ಇರಬಹುದು. ಅನ್ಯಾಯ, ಅನಾಚಾರಗಳ ವಿರುದ್ಧ ಎದ್ದ ಧ್ವನಿಯನ್ನು ಹತ್ತಿಕ್ಕಲು ಸತತವಾದ ಪಹರೆಯನ್ನಿಟ್ಟಿದೆ ಈ ಸಮಾಜ.

ಆದರೂ ಸುಮ್ಮನಾಗುವುದಿಲ್ಲ ಈ ಧ್ವನಿ. ಯಾಕೆಂದರೆ ದೌರ್ಜನ್ಯ ವಿರೋಧಿ ಮನಸ್ಸಿನ ಪುರುಷರ ಸಹಕಾರ ಈ ಆಂದೋಲನಕ್ಕಿದೆ. ಅಂದು ಸರ್ಕಾರ ರಚಿಸಿದ ಪಕ್ಷಕ್ಕಿರಲಿಕ್ಕಿಲ್ಲ, ಅಧಿಕಾರಾರೂಢರಿಗೆ ಅನ್ನಿಸಿರಲಿಕ್ಕಿಲ್ಲ, ಆದರೆ ಮದ್ಯವೆಂಬುದು ಮಹಿಳೆಯರ ಗೌರವ ಹರಣಕ್ಕೆ ಮೂಲವಾಗುತ್ತದೆಂದು ಸ್ವಾತಂತ್ರ್ಯ ತಂದುಕೊಡುವಲ್ಲಿ ದೇಶವನ್ನು ಮುನ್ನಡೆಸಿದ ಮಹಾತ್ಮ ಗಾಂಧಿಯವರ ಕಣ್ಣಿಗೆ ಕಂಡಿತ್ತು. ಇದನ್ನು ಹೀಗೆಯೇ ಬಿಟ್ಟರೆ ಹಳ್ಳಿ ಹಳ್ಳಿಯನ್ನೂ ಅದು ವ್ಯಾಪಿಸಿ ಹೆಣ್ಣುಮಕ್ಕಳ ನೆಮ್ಮದಿಯ ಸರ್ವನಾಶ ಮಾಡುತ್ತದೆ ಎಂದು ಅವರು ಮನಗಂಡಿದ್ದರು. ‘ಮೊದಲು ಮದ್ಯ ನಿಷೇಧ ಮಾಡಿ’ ಎಂದು ಸರ್ಕಾರಕ್ಕೆ ಹೇಳಿ ನೋಡಿದರು. ಅಂದೂ ಆಗಲಿಲ್ಲ, ಇಂದೂ ಆಗುತ್ತಿಲ್ಲ.

ಮದ್ಯದ ಲಾಬಿ ಆ ದಿನಗಳಲ್ಲೇ ಅಷ್ಟು ಪ್ರಬಲವಾಗಿತ್ತೇ?
ಅಥವಾ ದಿನ ದಿನಕ್ಕೆ ಬೆಳೆಯುತ್ತ ಇಂದು ಅಷ್ಟು ಬಲಿಷ್ಠವಾಗಿದೆಯೇ? ಅದು ಸ್ವತಃ ಅಧಿಕಾರದ ಚುಕ್ಕಾಣಿಯನ್ನು ತಾನೇ ಕೈಯಲ್ಲಿ ತೆಗೆದುಕೊಂಡಿದೆಯೇ? ಚುನಾವಣೆಗೆ ಯಾವಪಕ್ಷವೇ ನಿಂತಿರಲಿ, ‘ಬೆರ್ಚ’ಕ್ಕೆ ಆಸರೆಯಾಗಿ ನಿಂತಿರುವ ಗೂಟ ‘ಮದ್ಯ’ದ್ದೇ. ಅಧಿಕಾರಕ್ಕೆ ಬಂದು ಆಳುವ ಪಕ್ಷ ಯಾವುದೇ ಆಗಲಿ, ಅಧಿಕಾರ ಮಾತ್ರ ಮದ್ಯದ್ದು. ಈ ಕಾರಣಕ್ಕೇ ಮಹಿಳೆಯರು ತಮ್ಮ ಮನವಿ ತೆಗೆದುಕೊಂಡು ಯಾವ ಪಕ್ಷದ ಬಾಗಿಲು ತಟ್ಟಿದರೂ ಅದು ತೆರೆಯಲಿಲ್ಲ. ಮಹಿಳೆಯರ ಮತ ಅರ್ಧದಷ್ಟಿರುವಾಗಲೂ ‘ಮದ್ಯ ನಿಷೇಧ ಮಾಡುವವರಿಗೇ ನಮ್ಮ ಮತ’ ಎಂದು ಸಾರಿದರೂ ಯಾವೊಂದು ಪಕ್ಷವೂ ಮಿಸುಕಾಡಿಲ್ಲ. ಹುಲ್ಲಿನ ಹೊರೆ ಹೊತ್ತ ಮಹಿಳೆಯನ್ನೇ ಪಕ್ಷದ ಚಿಹ್ನೆಯಾಗಿಸಿಕೊಂಡಿರುವ ಪಕ್ಷವೂ ಮಾತಾಡಲಿಲ್ಲ, ಭಾರತ ಮಾತೆಯ ಹೆಸರಲ್ಲಿ ಪ್ರಮಾಣ ಮಾಡುವ ಪಕ್ಷದವರೂ ಮಾತಾಡಲಿಲ್ಲ, ಗಾಂಧಿ ಹೆಸರು ಹೇಳಿಕೊಳ್ಳುವ ಪಕ್ಷವೂ ಮಾತಾಡಲಿಲ್ಲ.

ಪಕ್ಷ ಅಧಿಕಾರಕ್ಕೆ ಬಂದೊಡನೆ ಗೂಟ ಮಾತಾಡಲಾರಂಭಿಸುತ್ತದೆ. ‘ಸರ್ಕಾರ ನಡೆಯುವುದೇ ಮದ್ಯ ಮಾರಾಟದಿಂದ’, ‘ಒಂದು ರಾಜ್ಯ ನಿಷೇಧ ಮಾಡಿದರೇನಾಗುತ್ತದೆ, ಕೇಂದ್ರ ಸರ್ಕಾರ ಆ ಕೆಲಸವನ್ನು ಮಾಡಬೇಕು’ ಎಂದು ಹೆಗಲ ಮೇಲಿನ ಟವೆಲನ್ನು ಕೊಡವುದರ ಮೂಲಕ ಜವಾಬ್ದಾರಿಯನ್ನು ಕೊಡವಲಾಗುತ್ತದೆ. ಅಧಃಪತನಕ್ಕಿಳಿಯುತ್ತಿರುವ ಸಮಾಜವನ್ನು ರಕ್ಷಿಸುವುದಕ್ಕಾಗಿ ಮಹಿಳೆ ಮಾತಾಡುತ್ತಿದ್ದಾಳೆ, ಯಾವ ನೆಪವನ್ನೂ ಹೇಳದೆ ಅವಳ ಮಾತನ್ನು ಕೇಳಬೇಕು ಎಂದು ಅಧಿಕಾರಕ್ಕೆ ಬರಲಿರುವ ಬೆರ್ಚಕ್ಕೆ ಅರಿವಾದರೆ ಸಾಕು. ಗೂಟಕ್ಕೆ ಮಾಡಬೇಕಾದ್ದನ್ನು ಮಹಿಳೆಯರು ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT