ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟ ಪರಿಹಾರ ಅಂದಾಜಿಸಲು ತಜ್ಞರ ಸಮಿತಿ: ಎನ್‌ಜಿಟಿ ಆದೇಶ

ಅಕ್ರಮ ಮರಳು ಗಣಿಗಾರಿಕೆಯಿಂದ ಪರಿಸರಕ್ಕೆ ಧಕ್ಕೆ;
Last Updated 17 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ನದಿ, ಹಳ್ಳ, ಕೊಳ್ಳ ಮತ್ತು ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿ ನಡೆಸಲಾದ ಅಕ್ರಮ ಮರಳು ಗಣಿಗಾರಿಕೆಯಿಂದ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಉಂಟಾಗಿರುವ ನಷ್ಟ ಪರಿಹಾರವನ್ನು ಅಂದಾಜಿಸಲು ತಜ್ಞರ ಸಮಿತಿ ರಚಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಹತ್ವದ ಆದೇಶ ನೀಡಿದೆ.

ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುವ ಮೂಲಕ ಪರಿಸರಕ್ಕೆ ಧಕ್ಕೆ ಉಂಟು ಮಾಡಿರುವ ಗುತ್ತಿಗೆದಾರರಿಂದ ಸಂಗ್ರಹಿಸಬೇಕಾದ ಪರಿಹಾರ ಮೊತ್ತ ಎಷ್ಟು ಎಂಬುದನ್ನು ಲೆಕ್ಕ ಹಾಕುವುದಲ್ಲದೆ, ಪರಿಸರ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಈ ಸಮಿತಿ ಅಧ್ಯಯನ ನಡೆಸಬೇಕಾಗಿದ್ದು, ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳ ಪ್ರತಿನಿಧಿಗಳನ್ನೂ ಈ ಸಮಿತಿ ಒಳಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಪ್ರಧಾನ ಪೀಠ ನೀಡಿರುವ ಆದೇಶದಲ್ಲಿ ಹೇಳಲಾಗಿದೆ. ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಮಂಡಳಿ ಈ ಆದೇಶ ನೀಡಿದೆ.

ಮರಳು ಗಣಿಗಾರಿಕೆ ಮಾಫಿಯಾ ದೇಶದೆಲ್ಲೆಡೆ ಬಲಿಷ್ಠವಾಗಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಗಣಿಗಾರಿಕೆ ನಡೆಸುವ ಕುರಿತು ವೈಜ್ಞಾನಿಕ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದರೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂಬ ಅರ್ಜಿದಾರರ ವಾದವನ್ನು ಹಸಿರು ಪೀಠವು ವಿಶೇಷವಾಗಿ ಪರಿಗಣಿಸಿದೆ.

ಅಕ್ರಮ ಮರಳು ಗಣಿಗಾರಿಕೆಯಿಂದ ಉಂಟಾಗಿರುವ ಪರಿಸರ ನಾಶದ ಪ್ರಮಾಣ ಹಾಗೂ ಅಕ್ರಮ ತಡೆಗೆ ಕೈಗೊಂಡ ವೈಜ್ಞಾನಿಕ ಕ್ರಮಗಳ ಕುರಿತು ಜೂನ್ 30ರೊಳಗೆ ವರದಿ ಸಲ್ಲಿಸುವಂತೆ ಕರ್ನಾಟಕ, ತಮಿಳುನಾಡು ಕೇರಳ ಸೇರಿದಂತೆ 18 ರಾಜ್ಯಗಳ ಸರ್ಕಾರಗಳಿಗೂ ಎನ್‌ಜಿಟಿ ಸೂಚಿಸಿದೆ.

ಅಕ್ರಮ ತಡೆಗೆ ಮುಂದಾಗದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಜ್ಞರ ಸಮಿತಿ ಶಿಫಾರಸು ಮಾಡಬೇಕು. ಅಲ್ಲದೆ, ಅಕ್ರಮ ಮರಳು ಗಣಿಗಾರಿಕೆಗೆ ಬಳಸಲಾದ ವಾಹನ ಅಥವಾ ಯಂತ್ರಗಳನ್ನು ವಶಪಡಿಸಿಕೊಳ್ಳಲು ಸೂಚಿಸಬೇಕು ಎಂದು ಆದೇಶ ತಿಳಿಸಿದೆ.

ರಾಜ್ಯದಲ್ಲಿ ಮರಳು ಗಣಿ ಮಾಫಿಯಾ ಅಸ್ತಿತ್ವದಲ್ಲಿ ಇಲ್ಲ. ಆದರೂ, ಹಸಿರು ಪೀಠದ ಸೂಚನೆಯನ್ನು ಪಾಲಿಸಿ ಅಕ್ರಮ ಗಣಿಗಾರಿಕೆಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರ ವಿಚಾರಣೆಯ ಸಂದರ್ಭ ತಿಳಿಸಿದೆ.

ಕರ್ನಾಟಕದಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ವಿನಾಶಕಾರಿ ಪರಿಣಾಮಗಳು ಉಂಟಾಗಿರುವ ಕುರಿತು ಗಮನ ಸೆಳೆಯುವ ನಿಟ್ಟಿನಲ್ಲಿ ‘ಪ್ರಜಾವಾಣಿ’ಯ ಸೋದರ ಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್‌’ನ ‘ಇನ್‌ಸೈಟ್‌’ ವಿಭಾಗದಲ್ಲಿ 2018ರ ಸೆಪ್ಟೆಂಬರ್‌ 17ರಂದು ಪ್ರಕಟವಾಗಿದ್ದ ವರದಿಯನ್ನೂ ಹಸಿರು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಕಾನೂನುಬದ್ಧ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಮೂಲಕ ಕರ್ನಾಟಕದಲ್ಲಿ ವಾರ್ಷಿಕ ₹ 150 ಕೋಟಿ ರಾಜಸ್ವ ಸಂಗ್ರಹಿಸಲಾಗುತ್ತಿದೆ. ಆದರೆ, ಅಂದಾಜಿನ ಪ್ರಕಾರ ಅಕ್ರಮ ಗಣಿಗಾರಿಕೆಯಿಂದಾಗಿ ₹ 200 ಕೋಟಿ ನಷ್ಟ ಉಂಟಾಗುತ್ತಿದೆ ಎಂಬ ಅಂಶವನ್ನು ಈ ವರದಿಯ ಮೂಲಕ ಬಹಿರಂಗಪಡಿಸಿದ್ದನ್ನೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT