ಮಾಜಿ ಐಪಿಎಸ್ ಅಧಿಕಾರಿ ಸಂಜೀವ್‌ ಭಟ್‌ ಬಂಧನ

7

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್‌ ಭಟ್‌ ಬಂಧನ

Published:
Updated:
Deccan Herald

ಅಹಮದಾಬಾದ್: ಮಾದಕ ವಸ್ತುವಿಗೆ ಸಂಬಂಧಿಸಿದ ಸುಮಾರು 22 ವರ್ಷಗಳ ಹಿಂದಿನ ಪ್ರಕರಣದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರನ್ನು ಗುಜರಾತ್‌ ಸಿಐಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

1996ರಲ್ಲಿ ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯಲ್ಲಿ ಮಾದಕ ವಸ್ತು ಹೊಂದಿದ ಸುಳ್ಳು ಆರೋಪದ ಮೇಲೆ ವಕೀಲರೊಬ್ಬರನ್ನು ಬಂಧಿಸಿದ ಪ್ರಕರಣ ಇದಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಸಂಜೀವ್‌ ಭಟ್‌ ಬನಾಸಕಾಂಠಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು.

ಭಟ್‌ ಮತ್ತು ಇತರ ಏಳು ನಿವೃತ್ತ ಪೊಲೀಸ್‌ ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ಬುಧವಾರ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ವಿಚಾರಣೆ ಮುಗಿಯುತ್ತಲೇ ಭಟ್‌ ಅವರನ್ನು ಬಂಧಿಸಲಾಯಿತು. ಉಳಿದವರು ಇನ್ನೂ ಪೊಲೀಸರ ವಶದಲ್ಲಿಯೇ ಇದ್ದಾರೆ.

**

ಹಳೆ ಪ್ರಕರಣಕ್ಕೆ ಮರುಜೀವ!

ಮಾದಕ ವಸ್ತು ಹೊಂದಿದ ಆರೋಪದ ಮೇಲೆ ಬನಾಸಕಾಂಠಾ ಪೊಲೀಸರು ವಕೀಲರಾಗಿದ್ದ ಸುಮೇರ್‌ ಸಿಂಗ್‌ ರಾಜಪುರೋಹಿತ್‌ ಎಂಬುವರನ್ನು 1996ರಲ್ಲಿ ಬಂಧಿಸಿದ್ದರು.

ಪಾಲನಪುರ ಪಟ್ಟಣದ ವಸತಿಗೃಹದಲ್ಲಿ ತಂಗಿದ್ದ ರಾಜಪುರೋಹಿತ್‌ ಕೊಠಡಿಯಲ್ಲಿ ಒಂದು ಕೆ.ಜಿ. ಮಾದಕ ವಸ್ತು ಪತ್ತೆಯಾಗಿದೆ ಎಂದು ಪೊಲೀಸರು ಆರೋಪಿಸಿದ್ದರು. ಈ ಪ್ರಕರಣದ ತನಿಖೆ ನಡೆಸಲು ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿತ್ತು.

ರಾಜಸ್ಥಾನದ ಪಾಲಿ ಪಟ್ಟಣದ ವಿವಾದಗ್ರಸ್ತ ಆಸ್ತಿ ಹಸ್ತಾಂತರಿಸುವಂತೆ ರಾಜಪುರೋಹಿತ್‌ ಮೇಲೆ ಪೊಲೀಸರು ಒತ್ತಡ ಹೇರಿದ್ದರು. ಆದರೆ, ಅದಕ್ಕೆ ರಾಜಪುರೋಹಿತ್‌ ಒಪ್ಪಿರಲಿಲ್ಲ. ಹೀಗಾಗಿ ಪಾಲಿಯ ಮನೆಯಿಂದ ಅವರನ್ನು ಅಪಹರಿಸಿದ ಬನಾಸಕಾಂಠಾ ಪೊಲೀಸರು ಹೋಟೆಲ್ ಕೊಠಡಿಯಲ್ಲಿ ಕೂಡಿ ಹಾಕಿ ಮಾದಕ ವಸ್ತು ಪ್ರಕರಣದಲ್ಲಿ ಸಿಲುಕಿಸಿದ್ದರು ಎಂದು ಈ ತಂಡ ವರದಿ ನೀಡಿತ್ತು.

ಇದನ್ನು ಪ್ರಶ್ನಿಸಿ 1999ರಲ್ಲಿ ಗುಜರಾತ್‌ ಹೈಕೋರ್ಟ್‌ ಮೊರೆ ಹೋಗಿದ್ದ ಬನಾಸಕಾಂಠಾ ಮಾಜಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಐ.ಬಿ. ವ್ಯಾಸ್‌, ಸಮರ್ಪಕ ತನಿಖೆಗೆ ಒತ್ತಾಯಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇದೇ ಜೂನ್‌ನಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಮೂರು ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸುವಂತೆ ಸೂಚಿಸಿತ್ತು.

**

ಸಂಘ, ಮೋದಿ ಕಟು ಟೀಕಾಕಾರ!

ಐಪಿಎಸ್‌ ಅಧಿಕಾರಿಯಾಗಿದ್ದ ಸಂಜೀವ್‌ ಭಟ್‌ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮತ್ತು ಆರ್‌ಎಸ್‌ಎಸ್‌ನ ಕಟು ಟೀಕಾಕಾರಾಗಿ ಗುರುತಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ನಿರಂತರ ವಾಗ್ದಾಳಿ ನಡೆಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಕೆಲಸಕ್ಕೆ ಅನಧಿಕೃತ ಗೈರು ಹಾಜರಾದ ಕಾರಣ ನೀಡಿ ಅವರನ್ನು 2015ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.

ಬಿಜೆಪಿ ಆಡಳಿತ ನಡೆಸುತ್ತಿರುವ ಅಹಮದಾಬಾದ್‌ ಪಾಲಿಕೆ ಇತ್ತೀಚೆಗೆ ಸಂಜೀವ್‌ ಭಟ್ ಅವರ ಮನೆಯನ್ನು ನೆಲಸಮಗೊಳಿಸಿದೆ.

ಪಾಲಿಕೆ ತಮ್ಮ ಮನೆಯನ್ನು ನೆಲಸಮಗೊಳಿಸದಂತೆ ತಡೆಯಾಜ್ಞೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !