‘ಬಿಗ್‌ ಬಿ’ಗೂ ತಟ್ಟಿದ ‘ಮೀ ಟೂ’ ಬಿಸಿ

7

‘ಬಿಗ್‌ ಬಿ’ಗೂ ತಟ್ಟಿದ ‘ಮೀ ಟೂ’ ಬಿಸಿ

Published:
Updated:
Deccan Herald

ಮುಂಬೈ: ಲೈಂಗಿಕ ಕಿರುಕುಳ, ದೌರ್ಜನ್ಯದ ವಿರುದ್ಧ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿ ರುವ ‘ಮೀ ಟೂ’ ಅಭಿಯಾನದ ಪಟ್ಟಿಗೆ ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಬ್‌ ಬಚ್ಚನ್‌ ಮತ್ತು ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಪತ್ರಿಕೋದ್ಯಮ, ರಾಜಕಾರಣ, ಸಿನಿಮಾ, ಕ್ರೀಡೆ ಹೀಗೆ ಸಮಾಜದ ವಿವಿಧ ರಂಗಗಳ ಗಣ್ಯರ ಮುಖವಾಡ ಕಳಚಿ ಹಾಕುತ್ತಿರುವ ‘ಮೀ ಟೂ’ ಅಭಿಯಾನದ ಬಿಸಿ ’ಬಿಗ್‌ ಬಿ’ಗೂ ತಟ್ಟುವ ಲಕ್ಷಣ ಗೋಚರಿಸುತ್ತಿವೆ.

ಮುಂಬೈನ ಪ್ರಸಿದ್ಧ ಕೇಶ ವಿನ್ಯಾಸಕಿ ಸಪ್ನಾ ಮೋತಿ ಭವಾನಿ ಅವರು ಅಮಿತಾಬ್ ಬಚ್ಚನ್‌ ವಿರುದ್ಧ ಶನಿವಾರ ಟ್ವಿಟರ್‌ನಲ್ಲಿ ಸಿಡಿಸಿರುವ ಬಾಂಬ್‌ ಈ ಅನುಮಾನ ಹುಟ್ಟುಹಾಕಿದೆ.

ಅಮಿತಾಬ್‌ ಬಚ್ಚನ್‌ ತಮ್ಮ ಜನ್ಮದಿನದ ಪ್ರಯುಕ್ತ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದರು. ‘ಮೀ ಟೂ’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಅವರು, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನು ಲೇವಡಿ ಮಾಡಿ ಟ್ವೀಟ್‌ ಮಾಡಿರುವ ಸಪ್ನಾ ಭವಾನಿ, ‘ಸರ್‌, ಇದೊಂದು ದೊಡ್ಡ ಸುಳ್ಳು. ನಿಮ್ಮ ಸಾಮಾಜಿಕ ಹೋರಾಟದ ಮುಖವಾಡ ಶೀಘ್ರದಲ್ಲಿಯೇ ಕಳಚಿ ಬೀಳಲಿದೆ’ ಎಂದು ಸುಳಿವು ನೀಡಿದ್ದಾರೆ. ಇದು ಬಾಲಿವುಡ್‌ನಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.

ನಾನು ಸಂತ್ರಸ್ತೆ ಅಲ್ಲ: ‘ಅಮಿತಾಬ್‌ ಬಚ್ಚನ್‌ ಅವರಿಂದ ನಾನು ಎಂದಿಗೂ ಲೈಂಗಿಕ ಪೀಡನೆಗೆ ಒಳಗಾಗಿಲ್ಲ. ಆದರೆ, ಅವರಿಂದ ತೊಂದರೆಗೆ ಒಳಗಾದ ಅನೇಕ ಮಹಿಳೆಯರು ನನಗೆ ಗೊತ್ತು. ಅವರ ಪರವಾಗಿ ನಾನು ಧ್ವನಿ ಎತ್ತಿದ್ದೇನೆ’ ಎಂದು ಸಪ್ನಾ ಹೇಳಿದ್ದಾರೆ. ‘ಬಚ್ಚನ್‌ ಅವರು ಮಹಿಳೆಯ ರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಬಗ್ಗೆ ಅನೇಕ ವರ್ಣರಂಜಿತ ಕತೆಗಳನ್ನು ಬಲ್ಲೆ. ಅವರಿಂದ ತೊಂದರೆಗೆ ಒಳಗಾದ ಮಹಿಳೆಯರು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಲು ಮುಂದೆ ಬರಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಬಚ್ಚನ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಾನಾಗೆ ಕಂಟಕ: ನಾನಾ ಪಾಟೇಕರ್‌ ಮತ್ತು ಇತರ ನಾಲ್ವರನ್ನು ಸುಳ್ಳು ಪತ್ತೆ ಮತ್ತು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ನಟಿ ತನುಶ್ರೀ ದತ್ತಾ ಅವರು ಒತ್ತಾಯಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ನಟ ನಾನಾ ಪಾಟೇಕರ್‌ ಅವರು ಹೌಸ್‌ಫುಲ್‌ 4 ಚಿತ್ರದಿಂದ ಅವರು ಹೊರ ನಡೆದಿದ್ದಾರೆ.

ಇದಕ್ಕೂ ಮೊದಲು ಚಿತ್ರದ ನಿರ್ದೇಶಕ ಸಾಜಿದ್‌ ಖಾನ್ ಕೂಡ ಚಿತ್ರದಿಂದ ಹೊರ ನಡೆದಿದ್ದರು. ಫರ್ಹಾದ್ ಸಮ್ಜಿ ಚಿತ್ರದ ಹೊಸ ನಿರ್ದೇಶಕನ ಹೊಣೆ ಹೊತ್ತಿದ್ದಾರೆ.

ಮಾನನಷ್ಟ ಮೊಕದ್ದಮೆ: ಬಾಲಿವುಡ್‌ನಲ್ಲಿ ‘ಸಂಸ್ಕಾರಿ ನಟ’ ಎಂದು ಹೆಸರಾಗಿರುವ ಅಲೋಕ್‌ನಾಥ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಲೇಖಕಿ, ನಿರ್ಮಾಪಕಿ ವಿಂತಾ ನಂದಾ ವಿರುದ್ಧ ಅಲೋಕ್‌ನಾಥ ಮತ್ತು ಅವರ ಪತ್ನಿ ಶನಿವಾರ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇದನ್ನೂ ಓದಿ: ಬಿಸಿಸಿಐ ಸಿಇಒಗೂ ಕಂಟಕ

ವಿಶಾಖಾ ಮಾರ್ಗಸೂಚಿ ಅನುಷ್ಠಾನಕ್ಕೆ ಒತ್ತಾಯ

ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟಲು ವಿಶಾಖಾ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಬಾಲಿವುಡ್‌ ನಟಿ ಹಾಗೂ ಬಿಜೆಪಿ ಸಂಸದೆ ಕಿರಣ್‌ ಖೇರ್‌ ಒತ್ತಾಯಿಸಿದ್ದಾರೆ.

ಮೀ– ಟೂ ಅಭಿಯಾನ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಬಹುದು ಎಂಬ ಸಮಾಜದಲ್ಲಿರುವ ಮನೋಭಾವ ಬದಲಾಗಬೇಕು. ಮಹಿಳೆಯರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

‘ವಿಶಾಖಾ ಮಾರ್ಗಸೂಚಿಗಳನ್ನು ಪ್ರತಿಯೊಂದು ಸಂಸ್ಥೆಯು ಅನುಸರಿಸಬೇಕು. ದೌರ್ಜನ್ಯಕ್ಕೊಳಗಾಗುವವರು ಕೂಡಲೇ ದೂರು ನೀಡಬೇಕು’ ಎಂದು ಹೇಳಿದ್ದಾರೆ.

ಏನಿದು ವಿಶಾಖಾ ಮಾರ್ಗಸೂಚಿ?

1990ರ ಸಮಯದಲ್ಲಿ ರಾಜಸ್ಥಾನದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಹೋರಾಟ ನಡೆಸಿದ ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿ ಮೇಲೆ ಜಮೀನ್ದಾರರಿಂದ ಬಲಾತ್ಕಾರ ನಡೆಯುತ್ತದೆ.

ರಾಜಸ್ಥಾನ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದರೂ ಮಹಿಳೆಗೆ ನ್ಯಾಯ ಸಿಗುವುದಿಲ್ಲ. ನಂತರ ವಿಶಾಖಾ ಎಂಬ ಹೆಸರಿನ ಮಹಿಳಾ ಹಕ್ಕುಗಳ ಗುಂಪೊಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. 

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 1997ರಲ್ಲಿ ವಿಶಾಖಾ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ  ಇವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಆದೇಶಿಸಿತ್ತು. 

ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಭಾರತದಲ್ಲಿ ಬಳಕೆಗಾಗಿ ಕಾರ್ಯವಿಧಾನದ ಬಗ್ಗೆ ವಿಶಾಖಾ ಮಾರ್ಗಸೂಚಿಗಳು ಹೊಂದಿದ್ದವು. 2013 ರಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ (ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ, ನಿಷೇಧ ಮತ್ತು ನಿವಾರಣೆ) ಕಾಯ್ದೆಗೆ ತಿದ್ದುಪಡಿ ತಂದು ಈ ಮಾರ್ಗಸೂಚಿಗಳನ್ನು ಅನುಷ್ಠಾನಗಳಿಸಲು ಸೂಚಿಸಲಾಯಿತು.

ಇದನ್ನೂ ಓದಿ: ಮೀ–ಟೂ ಬಿರುಗಾಳಿಗೆ ಇವರು ಸಿಲುಕಿದ್ದಾರೆ

ಪತ್ರಕರ್ತರ ಬೆಂಬಲ

ಮೀ–ಟೂ ಚಳವಳಿಗೆ ಬೆಂಬಲ ಸೂಚಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಹಲವು ಪತ್ರಕರ್ತರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

‘ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಉದ್ಯೋಗದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು’ ಎಂದು ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್‌ (ಐಡಬ್ಲ್ಯುಪಿಸಿ) ಸದಸ್ಯರು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

ಮಾರ್ಗಸೂಚಿಗೆ ಒತ್ತಾಯ

ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟಲು ವಿಶಾಖಾ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಬಾಲಿವುಡ್‌ ನಟಿ ಹಾಗೂ ಬಿಜೆಪಿ ಸಂಸದೆ ಕಿರಣ್‌ ಖೇರ್‌ ಒತ್ತಾಯಿಸಿದ್ದಾರೆ. ‘ವಿಶಾಖಾ ಮಾರ್ಗಸೂಚಿಗಳನ್ನು ಪ್ರತಿಯೊಂದು ಸಂಸ್ಥೆಯು ಅನುಸರಿಸಬೇಕು. ದೌರ್ಜನ್ಯಕ್ಕೊಳಗಾಗುವವರು ಕೂಡಲೇ ದೂರು ನೀಡಬೇಕು’ ಎಂದು ಹೇಳಿದ್ದಾರೆ.

ಏನಿದು ವಿಶಾಖಾ ಮಾರ್ಗಸೂಚಿ?: 1990ರ ಸಮಯದಲ್ಲಿ ರಾಜಸ್ಥಾನದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಹೋರಾಟ ನಡೆಸಿದ ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿ ಮೇಲೆ ಜಮೀನ್ದಾರರಿಂದ ಬಲಾತ್ಕಾರ ನಡೆಯುತ್ತದೆ.

ರಾಜಸ್ಥಾನ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದರೂ ಮಹಿಳೆಗೆ ನ್ಯಾಯ ಸಿಗುವುದಿಲ್ಲ. ನಂತರ ವಿಶಾಖಾ ಎಂಬ ಹೆಸರಿನ ಮಹಿಳಾ ಹಕ್ಕುಗಳ ಗುಂಪೊಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 1997ರಲ್ಲಿ ವಿಶಾಖಾ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ  ಇವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಆದೇಶಿಸಿತ್ತು.‌

ಮೌನ ಮುರಿದ ಅಮಿತ್‌ ಶಾ

ಹೈದರಾಬಾದ್‌/ನವದೆಹಲಿ: ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್‌ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ.

‘ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ. ಈ ಆರೋಪಗಳು ಎಷ್ಟು ನಿಜ, ಎಷ್ಟು ಸುಳ್ಳು ಎಂದು ಪರೀಕ್ಷಿಸಬೇಕಾಗಿದೆ. ಆರೋಪ ಮಾಡಿದ ವ್ಯಕ್ತಿಗಳ ಹಿನ್ನೆಲೆಯನ್ನೂ ಪರಿಶೀಲಿಸಬೇಕಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ  ಆಫ್ರಿಕಾ ಪ್ರವಾಸದಲ್ಲಿರುವ ಸಚಿವರು ಇನ್ನೂ ಯಾವ ಪ್ರತಿಕ್ರಿಯೆ ನೀಡಿಲ್ಲ.

ಭಾನುವಾರ ಭಾರತಕ್ಕೆ ಮರಳಲಿರುವ ಅಕ್ಬರ್‌ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ವಿವರಣೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸೋಮವಾರ ಅವರು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ಯಾರು ಈ ಸಪ್ನಾ ಮೋತಿ?

ಅನೇಕ ವರ್ಷ ಅಮೆರಿಕದಲ್ಲಿದ್ದ 47 ವರ್ಷದ ಕೇಶ ವಿನ್ಯಾಸಕಿ ಸಪ್ನಾ ಮೋತಿ ಭವಾನಿ ಮುಂಬೈನಲ್ಲಿ ’ಮ್ಯಾಡ್‌–ಓ–ವಾಟ್‌’ ಎಂಬ ಸಲೂನ್‌ ಹೊಂದಿದ್ದಾರೆ. ಚಿತ್ರ ನಟ, ನಟಿಯರು, ಕ್ರಿಕೆಟಿಗರು, ಉದ್ಯಮಿಗಳು ಅವರ ಸಲೂನ್‌ಗೆ ಭೇಟಿ ನೀಡುತ್ತಾರೆ.

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೊ ಹಿಂದಿಯ ’ಬಿಗ್‌ ಬಾಸ್‌’ 6ನೇ ಆವೃತ್ತಿಯಲ್ಲಿ ಭಾಗವಹಿಸಿದ್ದ ನಂತರ ಸಪ್ನಾ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಸಿಂಧಿ ಕುಟುಂಬದ ನಿರ್ಭಿಡೆ ಸ್ವಭಾವದ ಸಪ್ನಾ ಕೆಲವು ಹಿಂದಿ ಚಿತ್ರ ಮತ್ತು ‘ನಿರ್ಭಯಾ’ ನಾಟಕದಲ್ಲೂ ಅಭಿನಯಿಸಿದ್ದಾರೆ.

 ***

ಮಹಿಳೆ ಆಟದ ವಸ್ತು ಅಲ್ಲ. ಮಹಿಳೆಯರನ್ನು ಗೌರವಿಸುವ ಕುರಿತು ಮಕ್ಕಳಿಗೆ ಪಾಲಕರು ತಿಳಿಹೇಳಬೇಕು. ಸಂಪ್ರದಾಯಸ್ಥರ ಮನೋಭಾವ ಸಹ ಬದಲಾಗಬೇಕು

ಮಲೈಕಾ ಅರೋರಾ, ಬಾಲಿವುಡ್ ನಟಿ

ಮೀ–ಟೂ ಚಳವಳಿ ಇಲ್ಲಿಗೇ ನಿಲ್ಲುವುದಿಲ್ಲ. ಈ ವಿಚಾರದಲ್ಲಿ ಬದಲಾವಣೆ ಆಗುವವರೆಗೂ ಇದು ಮುಂದುವರೆಯುತ್ತದೆ. ಈ ಚಳವಳಿಗೆ ನನ್ನ ಬೆಂಬಲವಿದೆ

ಚಿತ್ರಾಂಗದಾ ಸಿಂಗ್‌, ಬಾಲಿವುಡ್ ನಟಿ

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಲಯಾಳಿ ಚಿತ್ರ ಕಲಾವಿದರ ಸಂಘಟನೆಯು (ಅಮ್ಮ) ನಟಿಯರ ಬೆಂಬಲಕ್ಕೆ ಯಾವತ್ತೂ ನಿಂತಿಲ್ಲ. ಅದು ಬರೀ ನೆಪಗಳನ್ನೇ ಹೇಳುತ್ತಾ ಬಂದಿದೆ

ಮಲಯಾಳಿ ನಟಿಯರ ಸಂಘಟನೆ

ನಾನಾ ಪಾಟೇಕರ್‌, ನೃತ್ಯ ಸಂಯೋಜಕ ಗಣೇಶ್‌ ಆಚಾರ್ಯ, ನಿರ್ಮಾಪಕ ಸಮೀ ಸಿದ್ಧಿಕಿ, ನಿರ್ದೇಶಕ ರಾಕೇಶ್‌ ಸಾರಂಗ್‌ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಗೊತ್ತಾಗಲಿದೆ

ತನುಶ್ರೀ ದತ್ತಾ, ಬಾಲಿವುಡ್‌ ನಟಿ

ಎಂ.ಜೆ.ಅಕ್ಬರ್‌ ಪ್ರಕರಣದ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ. ಈ ಆರೋಪಗಳು ಎಷ್ಟು ನಿಜ, ಎಷ್ಟು ಸುಳ್ಳು ಎಂದು ಪರೀಕ್ಷಿಸಬೇಕಾಗಿದೆ. ಆರೋಪ ಮಾಡಿದವರ ಹಿನ್ನೆಲೆಯೂ ಮುಖ್ಯ

ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !