ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌ಗೆ ಸಿಬಿಐ ಸಮನ್ಸ್‌

ಶಾರದಾ ಚಿಟ್‌ ಫಂಡ್‌ ಹಗರಣ
Last Updated 26 ಮೇ 2019, 17:07 IST
ಅಕ್ಷರ ಗಾತ್ರ

ನವದೆಹಲಿ: ‘ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿ ಕೋಲ್ಕತ್ತದ ಹಿಂದಿನ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರಿಗೆ ಸಿಬಿಐ ಸಮನ್ಸ್‌ ಜಾರಿ ಮಾಡಿದ್ದು ಸೋಮವಾರ ಹಾಜರಾಗಬೇಕೆಂದು ಸೂಚಿಸಿದೆ.

ರಾಜೀವ್‌ಕುಮಾರ್ ಅವರು ದೇಶ ತೊರೆಯುವುದನ್ನು ತಡೆಯುವ ನಿಟ್ಟಿನಲ್ಲಿ ಸಿಬಿಐ ಅವರ ವಿರುದ್ಧ ಲುಕ್‌ಔಟ್‌ ನೋಟಿಸ್‌ ಕೂಡ ನೀಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ರಾಜೀವ್‌ ಕುಮಾರ್‌ ಅವರು ದೇಶವನ್ನು ತೊರೆಯುವುದನ್ನು ತಡೆಯಲು ಹಾಗೂ ಇಂತಹುದಕ್ಕೆ ಪ್ರಯತ್ನಿಸಿದರೆ ತಕ್ಷಣವೇ ಮಾಹಿತಿ ನೀಡುವಂತೆ ಎಲ್ಲ ವಿಮಾನ ನಿಲ್ದಾಣಗಳಿಗೆ ಹಾಗೂ ವಲಸೆ ಅಧಿಕಾರಿಗಳಿಗೆ ಸಿಬಿಐ ಸೂಚಿಸಿದೆ.

₹2,500 ಕೋಟಿ ಮೊತ್ತದ ಶಾರದಾ ಚಿಟ್‌ ಫಂಡ್‌ ಹಗರಣದ ತನಿಖೆ ನಡೆಸಿದ್ದ ಪಶ್ಚಿಮ ಬಂಗಾಳದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ರಾಜೀವ್‌ ಕುಮಾರ್‌ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಸಿಬಿಐ ಉದ್ದೇಶಿಸಿದೆ.

ಕುಮಾರ್‌ ಅವರು ವಿಚಾರಣೆ ಸಂದರ್ಭದಲ್ಲಿ ದುರಹಂಕಾರದಿಂದ ಮತ್ತು ನುಣುಚಿಕೊಳ್ಳುವ ನಿಟ್ಟಿನಲ್ಲಿ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಅಗತ್ಯವಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ತಾವು ಬಯಸಿದಂತೆಯೇ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ರಾಜೀವ್‌ ಕುಮಾರ್‌ ಸೂಚನೆ ನೀಡುತ್ತಿದ್ದರು. ರಾಜಕಾರಣಿಗಳಿಗೆ ಸೇರಿರುವ ಹಗರಣದ ಮಹತ್ವದ ದಾಖಲೆ ಹೊಂದಿದ್ದ ಲ್ಯಾಪಟಾಪ್‌, ಮೊಬೈಲ್‌ ಫೋನ್‌ಗಳನ್ನು ವಾಪಸ್‌ ಮಾಡಲು ಅನುಮತಿ ನೀಡಿದ್ದರು. ಈಗ ಅವುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಕುಮಾರ್‌ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸುವುದರ ಬಗ್ಗೆ ಸೂಕ್ತ ಸಾಕ್ಷ್ಯಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಸಿಬಿಐಗೆ ಸೂಚಿಸಿತ್ತು. ಅಲ್ಲದೆ, ಕುಮಾರ್‌ ಅವರ ಬಂಧನಕ್ಕೆ ನೀಡಿದ್ದ ತಡೆಯನ್ನು ಮೇ 17 ರಂದು ಹಿಂಪಡೆದುಕೊಂಡ ಸುಪ್ರೀಂ ಕೋರ್ಟ್‌, ಕಾನೂನು ಪ್ರಕಾರ ಮುಂದುವರಿಯುವಂತೆ ಸಿಬಿಐಗೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT