ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಭದಲ್ಲಿ ಇಸ್ರೊ ನಾಗಾಲೋಟ: ಎಮಿಸ್ಯಾಟ್‌ ಜೊತೆ 29ಉಪಗ್ರಹ ಹೊತ್ತೊಯ್ದ ಪಿಎಸ್‌ಎಲ್‌ವಿ

Last Updated 1 ಏಪ್ರಿಲ್ 2019, 4:42 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಎಮಿಸ್ಯಾಟ್‌ ಸೇರಿದಂತೆ ಒಟ್ಟು 29 ಉಪಗ್ರಹಗಳನ್ನು ಹೊತ್ತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪಿಎಲ್‌ಎಲ್‌ವಿ–ಸಿ45 ಸೋಮವಾರ ಬೆಳಿಗ್ಗೆ 9:30ಕ್ಕೆ ಯಶಸ್ವಿಯಾಗಿ ನಭದತ್ತ ಹೊತ್ತೊಯ್ದಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ರಾಕೆಟ್‌ ಉಡಾವಣೆ ಮಾಡಲಾಯಿತು.

ಉಪಗ್ರಹವನ್ನು ಹೊಡೆದುರುಳಿಸುವ ಎಸ್ಯಾಟ್ ಕ್ಷಿಪಣಿ ಪ್ರಯೋಗದಿಂದ ವಿಶ್ವದ ಗಮನ ಸೆಳೆದಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜಂಟಿಯಾಗಿ ಮತ್ತೊಂದು ವೈಜ್ಞಾನಿಕ ಸಾಹಸಕ್ಕೆ ಮುಂದಾಗಿವೆ.

ಧ್ರುವಗಾಮಿ ಉಡಾವಣ ವಾಹನ ‘ಪಿಎಸ್‌ಎಲ್‌ವಿ ಸಿ–45’ (Polar Satellite Launch Vehicle– PSLV) ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ.

ಉಡಾವಣೆಯಾದ 17 ನಿಮಿಷಗಳ ನಂತರ ಉಪಗ್ರಹ ವಾಹಕವು (ಪಿಎಸ್‌ಎಲ್‌ವಿ) 436 ಕೆ.ಜಿ. ತೂಕದ ಎಮಿಸ್ಯಾಟ್‌ ಉಪಗ್ರಹವನ್ನು ಭೂಮಿಯಿಂದ 749 ಕಿ.ಮೀ. ದೂರದ ಕಕ್ಷೆಗೆ ಸೇರಿಸಲಿದೆ. ನಂತರ 504 ಕಿ.ಮೀ. ಕಕ್ಷೆಗೆ ಇಳಿಯಲಿರುವ ಪಿಎಸ್‌ಎಲ್‌ವಿ ಅಲ್ಲಿ 28 ಉಪಗ್ರಗಳನ್ನು ನೆಲೆಗೊಳಿಸಲಿದೆ. ಇವುಗಳ ಒಟ್ಟು ತೂಕ 220 ಕೆ.ಜಿ. ಇಂದಿನ ಕಾರ್ಯಾಚರಣೆ ಯಶಸ್ವಿಯಾದರೆ, ಭಾರತವು ಈವರೆಗೆ ಒಟ್ಟು 297 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದಂತೆ ಆಗುತ್ತದೆ.

ಡಿಆರ್‌ಡಿಒ ರೂಪಿಸಿರುವ ‘ಎಮಿಸ್ಯಾಟ್’ (electromagnetic spectrum measurement) ಉಪಗ್ರಹಕ್ಕೆ ವಿದ್ಯುತ್ಕಾಂತೀಯ ಅಲೆಗಳ ಕ್ಷೇತ್ರ ವಿಶ್ಲೇಷಣೆಯ ಸಾಮರ್ಥ್ಯವಿದೆ. ಇದನ್ನು ವೈರಿ ದೇಶಗಳಲ್ಲಿರುವ ರಾಡಾರ್ನೆಲೆಗಳನ್ನು ಪತ್ತೆಹಚ್ಚಲು ಮತ್ತು ಇತರರಕ್ಷಣಾ ಉದ್ದೇಶಗಳಿಗೆ ಬಳಸಲಾಗುತ್ತದೆ.‌

ಜುಲೈ ಅಥವಾ ಆಗಸ್ಟ್‌ ತಿಂಗಳಲ್ಲಿ ಭಾರತವು ಇನ್ನೂ ಎರಡು ರಕ್ಷಣಾ ಉಪಗ್ರಗಳನ್ನು ಕಕ್ಷೆಗೆ ಸೇರಿಸಲಿದೆ. ಈ ಕಾರ್ಯಾಚರಣೆಗೆ ಸಣ್ಣ ಉಪಗ್ರಹಗಳ ಉಡಾವಣಾ ವಾಹಕ (Small Satellite Launch Vehicle -SSLV) ರಾಕೆಟ್ ಬಳಕೆಯಾಗಲಿದೆ.

ಅಂತರಿಕ್ಷ ಪ್ರಯೋಗಕ್ಕೆ ವೇದಿಕೆಯಾಗಲಿದೆ ರಾಕೆಟ್ ಕವಚ

ಉಪಗ್ರಹಗಳನ್ನು ನೆಲೆಗೊಳಿಸುವ ಕಾರ್ಯ ಮುಕ್ತಾಯವಾದ ನಂತರ ರಾಕೆಟ್‌ನ ಕೊನೆಯ ಹಂತದ ಎಂಜಿನ್ ಚಾಲು ಆಗುತ್ತದೆ. ಭೂಮಿಯಿಂದ 504 ಕಿ.ಮೀ. ಕಕ್ಷೆಗೆ ಇಳಿಯುವ ರಾಕೆಟ್‌, ಅಲ್ಲಿ ಸ್ವತಃ ತಾನೇ ಒಂದು ಸ್ವತಂತ್ರ ಉಪಗ್ರಹದಂತೆ ಅಥವಾ ಅಂತರಿಕ್ಷ ಪ್ರಯೋಗಗಳಿಗೆವೇದಿಕೆಯಂತೆ ರೂಪಾಂತರಗೊಳ್ಳುತ್ತದೆ. ಬಾಹ್ಯಾಕಾಶ ತ್ಯಾಜ್ಯವಾಗಬೇಕಿದ್ದ ರಾಕೆಟ್ ಕವಚಕ್ಕೆ ಸೋಲಾರ್ ಪ್ಯಾನಲ್ ತೊಡಿಸಿ, ಅದನ್ನೇ ಅಂತರಿಕ್ಷ ವೇದಿಕೆಯಂತೆ ಬಳಸುವ ಮಹತ್ವದ ಪ್ರಯೋಗವಿದು. ಭೂಮಿಯಿಂದ ನಿಯಂತ್ರಿಸಬಲ್ಲ ಹಲವು ಉಪಕರಣಗಳು ಈ ಹಂತದಲ್ಲಿ ಚಾಲು ಆಗುತ್ತವೆ. ಇದರಲ್ಲಿ ಸಾಗರಗಾಮಿ ನೌಕೆಗಳಿಗೆ ಮಾರ್ಗದರ್ಶನ ನೀಡಬಲ್ಲು ಪುಟ್ಟ ಉಪಗ್ರಹವೊಂದು ಸೇರಿದೆ.

ಇದೇ ಮೊದಲ ಬಾರಿಗೆ ಇಸ್ರೊ ಸಾಮಾನ್ಯ ಜನರನ್ನು ರಾಕೆಟ್ ಉಡಾವಣೆ ನೋಡಲು ನೋಡಲು ಆಹ್ವಾನಿಸಿರುವುದು ಮತ್ತೊಂದು ವಿಶೇಷ ಎನಿಸಿಕೊಂಡಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT