ಸೋಮವಾರ, ನವೆಂಬರ್ 18, 2019
24 °C
ಸಮುದ್ರಮಾರ್ಗದ ಮೇಲೆ ಹಿಡಿತ ಸಾಧಿಸಲು ಬೃಹತ್ ನೌಕೆ, ಹಡಗುಕಟ್ಟೆ ನಿರ್ಮಾಣ

‘ಸಿಲ್ಕ್‌ ರೂಟ್‌’ ಹಿಡಿತಕ್ಕಾಗಿ ಚೀನಾ ತಯಾರಿ

Published:
Updated:
Prajavani

ಚೀನಾವು ಅತ್ಯಂತ ದೊಡ್ಡ ಯುದ್ಧವಿಮಾನವಾಹಕ ನೌಕೆಯನ್ನು ನಿರ್ಮಿಸುತ್ತಿದೆ. ಇದರ ಜತೆಯಲ್ಲೇ ಇಂತಹ ನೌಕೆಗಳನ್ನು ನಿರ್ಮಿಸುವ ಬೃಹತ್ ಹಡಗುಕಟ್ಟೆಯನ್ನೂ ನಿರ್ಮಿಸುತ್ತಿದೆ ಎಂದು ಸೆಂಟರ್‌ ಫಾರ್‌ ಸ್ಟ್ರಾಟೆಜಿಕ್‌ ಅಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್‌ (ಸಿಎಸ್‌ಐಎಸ್‌) ಹೇಳಿದೆ. ವಿಶ್ವದ ಪ್ರಮುಖ ಸಮುದ್ರ ಮಾರ್ಗವಾದ ‘ಸಿಲ್ಕ್‌ ರೂಟ್‌’ನಲ್ಲಿ ಮೇಲುಗೈ ಸಾಧಿಸುವ ಉದ್ದೇಶ ಚೀನಾಕ್ಕೆ ಇರುವಂತಿದೆ. ಭಾರತದ ವಾಣಿಜ್ಯ ಹಿತಾಸಕ್ತಿಯ ಮೇಲೂ ಇದು ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.

ಉಪಗ್ರಹ ಚಿತ್ರ ಮತ್ತು ಬೃಹತ್ ಹಡಗುಕಟ್ಟೆ
ಶಾಂಘೈ ನಗರದ ಹೊರವಲಯದಲ್ಲಿರುವ ಜಿನಾಂಗ್‌ನಾನ್ ಬಂದರಿಗೆ ಸಮೀಪದಲ್ಲಿ ಈ ಹಡಗುಕಟ್ಟೆಯನ್ನು ನಿರ್ಮಿಸಲಾಗುತ್ತಿದೆ. ಉಪಗ್ರಹ ಆಧರಿತ ಚಿತ್ರಗಳ ಆಧಾರದಲ್ಲಿ ಇದನ್ನು ದೃಢಪಡಿಸಿಕೊಳ್ಳಲಾಗಿದೆ ಎಂದು ಸಿಎಸ್‌ಐಎಸ್‌ ಹೇಳಿದೆ. ಚೀನಾ ಈಗ ನಿರ್ಮಿಸುತ್ತಿದೆ ಎನ್ನಲಾದ ಬೃಹತ್ ವಿಮಾನವಾಹಕ ನೌಕೆಯ ಬಿಡಿಭಾಗಗಳು, ನೌಕೆಯ ಹೊರಕವಚಗಳು ಹಾಗೂ ಹಡಗುಕಟ್ಟೆಯ ಕಟ್ಟಡಗಳು ಈ ಉಪಗ್ರಹ ಚಿತ್ರಗಳಲ್ಲಿ ಸೆರೆಯಾಗಿವೆ.

‘ಇದು ಕೇವಲ ಒಂದು ನೌಕೆಯ ನಿರ್ಮಾಣಕ್ಕಾಗಿ ನಿರ್ಮಿಸಲಾದ ಹಡಗುಕಟ್ಟೆಯಲ್ಲ. ಹಡಗುಕಟ್ಟೆಯ ವಿಸ್ತಾರ ಮತ್ತು ಕಟ್ಟಡಗಳ ಸ್ವರೂಪವನ್ನು ಗಮನಿಸಿದರೆ, ಚೀನಾದ ಯೋಜನೆಯೇ ಬೇರೆ ಇದ್ದಂತಿದೆ. ಬೃಹತ್ ಯುದ್ಧನೌಕೆಗಳು ಮತ್ತು ಬೃಹತ್ ವಿಮಾನವಾಹಕ ನೌಕೆಗಳ ನಿರ್ಮಾಣಕ್ಕೆ ಅನುಕೂಲವಾಗುವ ರೀತಿಯಲ್ಲಿಯೇ ಹಡಗುಕಟ್ಟೆಯನ್ನು ವಿನ್ಯಾಸ ಮಾಡಲಾಗುತ್ತಿದೆ’ ಎಂದು ಸಿಎಸ್‌ಐಎಸ್‌ ಹೇಳಿದೆ.

ನೌಕಾಪಡೆಗೆ ಬಲ
ಚೀನಾ ನೌಕಾಪಡೆಯು ತನ್ನ ಜಲಾಂತರ್ಗಾಮಿಗಳಿಗಾಗಿ ಖ್ಯಾತವಾಗಿದೆ. ಚೀನಾ ಬಳಿ ಒಟ್ಟು 69 ಜಲಾಂತರ್ಗಾಮಿ ನೌಕೆಗಳಿವೆ. ಬೇರೆ ಯಾವ ರಾಷ್ಟ್ರದ ಬಳಿಯೂ ಇಷ್ಟು ಜಲಾಂತರ್ಗಾಮಿ ನೌಕೆಗಳಿಲ್ಲ. ಆದರೆ ಚೀನಾ ಬಳಿ ಇರುವುದು ಎರಡೇ ಯುದ್ಧವಿಮಾನ ವಾಹಕ ನೌಕೆಗಳು. ಅವುಗಳ ಸಾಮರ್ಥ್ಯ ಕೇವಲ 25 ಯುದ್ಧವಿಮಾನಗಳು ಮಾತ್ರ. ಹೀಗಾಗಿ ದೊಡ್ಡ ನೌಕೆಯ ನಿರ್ಮಾಣಕ್ಕೆ ಚೀನಾ ಮುಂದಾಗಿದೆ ಎಂದು ಸಿಎಸ್‌ಐಎಸ್‌ ಹೇಳಿದೆ. 

ಈ ಯುದ್ಧವಿಮಾನ ವಾಹಕ ಬೃಹತ್‌ ನೌಕೆಯ ಯೋಜನೆಗೆ ‘ಟೈಪ್‌ 002’ ಎಂದು ಹೆಸರಿಡಲಾಗಿದೆ. ಈ ನೌಕೆಯು 75 ಯುದ್ಧವಿಮಾನಗಳನ್ನು ಹೊರಬಹುದಾದಷ್ಟು ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇಂತಹ ಒಟ್ಟು ಆರು ನೌಕೆಗಳನ್ನು ಚೀನಾ ನಿರ್ಮಿಸಲಿದೆ.

ಭಾರತದ ಮೇಲೂ ಪರಿಣಾಮ
ಚೀನಾದಿಂದ ಮಧ್ಯಪ್ರಾಚ್ಯ ದೇಶಗಳಿಗೆ ಸಂಪರ್ಕ ಕಲ್ಪಿಸುವ ಸಮುದ್ರಮಾರ್ಗ ‘ಸಿಲ್ಕ್‌ ರೂಟ್‌’. ಇದು ಜಗತ್ತಿನಲ್ಲಿ ಅತಿ ಹೆಚ್ಚು ಹಡಗುಗಳು ಸಂಚರಿಸುವ ಮಾರ್ಗವಾಗಿದೆ. ಸದ್ಯ ಈ ಮಾರ್ಗದಲ್ಲಿ ಅಮೆರಿಕದ ನೌಕಾಪಡೆಯ ಮೇಲುಗೈ ಇದೆ. ಅಮೆರಿಕವು ಆಸ್ಟ್ರೇಲಿಯ, ಜಪಾನ್, ಭಾರತ ಮತ್ತು ತೈವಾನ್‌ಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಐದೂ ರಾಷ್ಟ್ರಗಳ ಯುದ್ಧನೌಕೆಗಳು ಈ ಮಾರ್ಗದಲ್ಲಿ ಗಸ್ತು ತಿರುಗುತ್ತಿರುತ್ತವೆ. ಹೀಗಾಗಿ ಭಾರತವೂ ಸೇರಿದಂತೆ ಇಲ್ಲಿ ಈ ಮಿತ್ರ ರಾಷ್ಟ್ರಗಳ ಮೇಲುಗೈ ಇದೆ.

ಈಗ ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಪೈಪೋಟಿ ಇರುವ ಕಾರಣ ಈ ಮಾರ್ಗದ ಮೇಲೆ ಹಿಡಿತ ಸಾಧಿಸುವುದು ಎರಡೂ ರಾಷ್ಟ್ರಗಳಿಗೆ ಅತ್ಯಗತ್ಯವಾಗಿದೆ. ಈ ಕಾರಣದಿಂದಲೇ ಚೀನಾವು ಬೃಹತ್ ನೌಕೆಗಳನ್ನು ನಿರ್ಮಿಸುತ್ತಿದೆ. ಇಂತಹ ಆರು ನೌಕೆಗಳನ್ನು ನಿರ್ಮಿಸಿದರೆ, ಚೀನಾಕ್ಕೆ ಈ ಮಾರ್ಗದ ಮೇಲೆ ಹಿಡಿತ ದೊರೆಯಲಿದೆ. ಈ ಮಾರ್ಗದ ಮೇಲಿನ ಹಿಡಿತದಲ್ಲಿ ಆಗುವ ಯಾವುದೇ ಬದಲಾವಣೆಯು ಭಾರತ, ಜಪಾನ್‌, ಆಸ್ಟ್ರೇಲಿಯ, ಸಿಂಗಪುರ, ಅಮೆರಿಕ ಮತ್ತು ತೈವಾನ್‌ಗಳ ವಾಣಿಜ್ಯ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಆಧಾರ: ರಾಯಿಟರ್ಸ್‌

ಪ್ರತಿಕ್ರಿಯಿಸಿ (+)