ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯ್‌ ಶಾ ವಿರುದ್ಧ ಅರ್ಜಿ ವಾಪಸ್‌ ಪಡೆದ ‘ವೈರ್‌’

Last Updated 27 ಆಗಸ್ಟ್ 2019, 20:28 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮಗ ಜಯ್‌ ಶಾ ವಿರುದ್ಧ ವರದಿ ಪ‍್ರಕಟಿಸುವುದಕ್ಕೆ ನಿಷೇಧ ಹೇರಿ ಗುಜರಾತ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ‘ದಿ ವೈರ್‌’ ಪೋರ್ಟಲ್‌ ಮತ್ತು ಅದರ ಪತ್ರಕರ್ತರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್‌ ಪಡೆಯಲಾಗಿದೆ.

ಜಯ್‌ ಶಾ ಅವರು ಹೂಡಿದ್ದ ಮಾನನಷ್ಟ ದಾವೆಯ ಆಧಾರದಲ್ಲಿ ಈ ನಿಷೇಧ ಆದೇಶವನ್ನು ನೀಡಲಾಗಿತ್ತು.

ತಮ್ಮ ಕಕ್ಷಿದಾರರು ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಾರೆ ಮತ್ತು ನಿಷೇಧದ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ವಾಪಸ್‌ ಪಡೆಯುತ್ತಾರೆ ಎಂದು ‘ದಿ ವೈರ್‌’ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎಂ.ಆರ್. ಶಾ ಮತ್ತು ಬಿ.ಆರ್‌. ಗವಾಯ್‌ ಅವರ ಪೀಠವು ಅರ್ಜಿ ವಾಪಸ್‌ ಪಡೆಯಲು ಅನುಮತಿ ನೀಡಿತು.

‘ಪತ್ರಿಕಾ ಸ್ವಾತಂತ್ರ್ಯವು ಸರ್ವೋಚ್ಚವಾದುದು. ಆದರೆ ಈ ರೀತಿಯ ಪತ್ರಿಕೋದ್ಯಮಕ್ಕೆ ಅವಕಾಶ ನೀಡಲಾಗದು’ ಎಂದು ಪೀಠ ಅಭಿಪ್ರಾಯಪಟ್ಟಿತು. ಈ ಬಗ್ಗೆ ಇನ್ನೂ ಬಹಳಷ್ಟನ್ನು ಹೇಳಬಹುದು, ಆದರೆ ಹೇಳುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಿಬಲ್‌, ತಮಗೂ ಸಾಕಷ್ಟು ಹೇಳುವುದಿದ್ದರೂ ಹೇಳುವುದಿಲ್ಲ ಎಂದರು.

ಆರೋಪಿಗಳು ಒಂದೂವರೆ ವರ್ಷ ವಿಚಾರಣೆಗೆ ತಡೆಯಾಜ್ಞೆಯ ಅನುಕೂಲ ಪಡೆದಿದ್ದರು. ಅಹಮದಾಬಾದ್‌ನ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಪೀಠ ಹೇಳಿತು. ಇದಕ್ಕೂ ಸಿಬಲ್‌ ಆಕ್ಷೇಪ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್‌ ಇಂತಹ ಆದೇಶ ನೀಡಿದರೆ ಆರೋಪಿಗಳನ್ನು ತಪ್ಪಿತಸ್ಥರು ಎಂದು ತೀರ್ಪು ನೀಡುವ ಸಾಧ್ಯತೆಯೇ ಅಧಿಕ ಎಂದರು.

ಜಯ್‌ ಪರ ವಕೀಲರು ವಿಚಾರಣೆಗೆ ಕಾಲಮಿತಿ ಹೇರಬೇಕು ಎಂದು ಪಟ್ಟು ಹಿಡಿದರು.2014ರ ಬಳಿಕ ಜಯ್‌ ಅವರು ಉದ್ಯಮದಲ್ಲಿ ಭಾರಿ ಪ್ರಗತಿ ಸಾಧಿಸಿದ್ದಾರೆ ಎಂಬ ವರದಿಯ ವಿರುದ್ಧ ಅವರು ₹100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT