ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಪರೀಕ್ಷೆ ಸಾರ್ವಜನಿಕರಿಗೆ ಉಚಿತವಾಗಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

Last Updated 8 ಏಪ್ರಿಲ್ 2020, 11:11 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪರೀಕ್ಷೆಗಳನ್ನು ನಡೆಸುತ್ತಿರುವ ಖಾಸಗಿ ಪ್ರಯೋಗಾಲಯಗಳು ಸಾರ್ವಜನಿಕರಿಂದ ವಿಪರೀತ ಶುಲ್ಕ ಪಡೆಯದಂತೆ ತಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪ್ರಯೋಗಾಲಯಗಳು ವಿಧಿಸುವ ಶುಲ್ಕವನ್ನು ಸರ್ಕಾರ ಭರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚನೆ ನೀಡಿದೆ.

ಈ ಹಿಂದೆ ದೇಶದಾದ್ಯಂತ 118 ಪ್ರಯೋಗಾಲಯಗಳಲ್ಲಿ ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಅನಂತರದಲ್ಲಿ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ 47 ಖಾಸಗಿ ಪ್ರಯೋಗಾಲಯಗಳಿಗೆ ಕೋವಿಡ್‌–19 ಪರೀಕ್ಷೆಗಳಿಗೆ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ದೇಶದಲ್ಲಿ ಕೋವಿಡ್‌–19 ಪರೀಕ್ಷೆಗಳು ಯಾವುದೇ ಶುಲ್ಕವಿಲ್ಲದೆ ಎಲ್ಲ ಜನರಿಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಹಾಗೂ ಆಡಳಿತ ವರ್ಗಕ್ಕೆ ಸೂಚನೆ ನೀಡುವಂತೆ ಕೋರಿ ಅಡ್ವೊಕೇಟ್‌ ಶಶಾಂಕ್‌ ಡಿಯೊ ಸುಧಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಕೋವಿಡ್‌–19 ಪರೀಕ್ಷೆಗಳು ದುಬಾರಿಯಾಗಿದ್ದು, ದೇಶದಲ್ಲಿ ಎಲ್ಲ ಪ್ರಯೋಗಾಲಯಗಳು ಜನರಿಗೆ ಉಚಿತವಾಗಿ ಪರೀಕ್ಷೆ ಸೌಲಭ್ಯ ಒದಗಿಸುವಂತೆ ನಿರ್ದೇಶಿಸಲು ಕೋರಿದ್ದರು.

'ಈಗಿನ ಪರಿಸ್ಥಿತಿಯಲ್ಲಿ ಎಷ್ಟು ಪ್ರಯೋಗಾಲಯಗಳು ಅಗತ್ಯವಾಗಬಹುದು ಹಾಗೂ ಲಾಕ್‌ಡೌನ್‌ ಎಷ್ಟು ಅವಧಿಯವರೆಗೂ ಮುಂದುವರಿಯಲಿದೆ ಎಂಬುದು ತಿಳಿದಿಲ್ಲ' ಎಂದು ಕೇಂದ್ರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಖಾಸಗಿ ಪ್ರಯೋಗಾಲಯಗಳು ಹೆಚ್ಚು ಶುಲ್ಕ ವಿಧಿಸದಿರುವುದನ್ನು ಕೇಂದ್ರ ಸರ್ಕಾರ ಖಚಿತ ಪಡಿಸಿಕೊಳ್ಳಬೇಕು ಹಾಗೂ ಪರೀಕ್ಷೆಗಳಿಗೆ ತಗುಲಿದ ಶುಲ್ಕವನ್ನು ಕೇಂದ್ರವೇ ಮರುಪಾವತಿಸುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು' ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಮತ್ತು ಎಸ್‌.ರವೀಂದ್ರ ಭಟ್‌ ಅವರನ್ನು ಒಳಗೊಂಡ ನ್ಯಾಯಪೀಠವುಸಲಹೆ ನೀಡಿದೆ.

ಅಡ್ವೊಕೇಟ್‌ ಶಶಾಂಕ್‌ ಸುಧಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಮತ್ತು ಇತರೆ ಇಲಾಖೆಗಳಿಗೆ ಏಪ್ರಿಲ್‌ 3ರಂದು ಸೂಚಿಸಿತ್ತು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾರ್ಚ್‌ 17ರಂದು ಹೊರಡಿಸಿರುವ ಮಾರ್ಗಸೂಚಿಯಲ್ಲಿ ಖಾಸಗಿ ಆಸ್ಪತ್ರೆಗಳು ಅಥವಾ ಪ್ರಯೋಗಾಲಯಗಳು ಕೋವಿಡ್‌–19 ಪರೀಕ್ಷೆಗಳಿಗೆ ಗರಿಷ್ಠ ₹4,500 ಶುಲ್ಕ ವಿಧಿಸುವ ಅವಕಾಶ ನೀಡಿದೆ. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದು, ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಪಡುವ ಸೌಲಭ್ಯ ಸಿಗದೆ; ಜೀವದ ರಕ್ಷಣೆಗಾಗಿ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆ ಅಥವಾ ಪ್ರಯೋಗಾಲಯಗಳಿಗೆ ತೆರಳಲಿ ನಿಗದಿ ಶುಲ್ಕ ಭರಿಸಬೇಕಾಗುತ್ತದೆ. ಸಂಪೂರ್ಣ ಲಾಕ್‌ಡೌನ್‌ನಿಂದ ಈಗಾಗಲೇ ಜನರು ಆರ್ಥಿಕ ಹೊರೆ ಅನುಭವಿಸುತ್ತಿದ್ದು, ಸಾಂಕ್ರಾಮಿಕವಾಗಿರುವ ರೋಗದ ಪರೀಕ್ಷೆಗೆ ಭಾರೀ ಶುಲ್ಕ ವಿಧಿಸುವ ಅನಿವಾರ್ಯತೆ ಸಿಲುಕುವುದನ್ನು ತಪ್ಪಿಸುವಂತೆ ಸರ್ಕಾರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಲಾಗಿತ್ತು.

ರಾಷ್ಟ್ರೀಯ ಟಿವಿ ಮಾಧ್ಯಮಗಳ ಮೂಲಕ ಐಸಿಎಂಆರ್‌ ನಿಯಮಿತವಾಗಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಕ್ರಮಗಳು, ಪ್ರಸ್ತುತ ಸ್ಥಿತಿಯನ್ನು ತಿಳಿಸುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT