ಶುಕ್ರವಾರ, ಜೂಲೈ 10, 2020
22 °C
ರ‍್ಯಾನ್‌ ಬ್ಯಾಕ್ಸಿ ಕಂಪನಿಯ ಮಾಜಿ ಪ್ರಮೋಟರ್‌ಗಳಿಗೆ ‘ಸುಪ್ರೀಂ’ ಪ್ರಶ್ನೆ

‘₹3,500 ಕೋಟಿ ದಂಡ ಹೇಗೆ ಪಾವತಿಸುತ್ತೀರಿ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಿಂಗಪುರದ ನ್ಯಾಯಮಂಡಳಿಯು ₹3,500 ಕೋಟಿ ದಂಡ ವಿಧಿಸಿರುವುದನ್ನು ಯಾವ ರೀತಿ ನಿಭಾಯಿಸಲಿದ್ದೀರಿ ಎಂದು ಸುಪ್ರೀಂಕೋರ್ಟ್‌, ರ‍್ಯಾನ್‌ ಬ್ಯಾಕ್ಸಿ ಕಂಪನಿಯ ಮಾಜಿ ಪ್ರಮೋಟರ್‌ಗಳಾದ ಮೆಲ್ವಿಂದರ್‌ ಸಿಂಗ್‌ ಮತ್ತು ಶಿವಿಂದರ್‌ ಸಿಂಗ್‌ ಅವರಿಂದ ಸ್ಪಷ್ಟನೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ನೇತೃತ್ವದ ಪೀಠವು, ನ್ಯಾಯಾಲಯದಲ್ಲಿ ಹಾಜರಿದ್ದ ಸಿಂಗ್‌ ಸಹೋದರರಿಗೆ ಹಣಕಾಸು ಮತ್ತು ಕಾನೂನು ಸಲಹೆಗಾರರೊಂದಿಗೆ ಚರ್ಚೆ ಮಾಡಿ, ನ್ಯಾಯಮಂಡಳಿ ಆದೇಶವನ್ನು ಹೇಗೆ ಜಾರಿ ಮಾಡುತ್ತೀರಿ ಎನ್ನುವ ನಿಖರ ಯೋಜನೆಯನ್ನು ಸಲ್ಲಿಸುವಂತೆ ಸೂಚಿಸಿತು. ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಮತ್ತು ಸಂಜೀವ್‌ ಖನ್ನಾ ಅವರೂ ಇರುವ ಪೀಠ, ‘ಇದು ದೇಶದ ಗೌರವಕ್ಕೂ ಮತ್ತು ವೈಯಕ್ತಿಕವಾಗಿ ನಿಮಗೂ ಗೌರವದ ಸಂಗತಿಯಲ್ಲ. ನೀವು ಔಷಧ ಉದ್ಯಮ ಕ್ಷೇತ್ರದ ದಿಗ್ಗಜರು. ನಿಮ್ಮಂತಹವರು ನ್ಯಾಯಾಲಯದ ಕಟಕಟೆಯಲ್ಲಿ ಕಾಣಿಸಿಕೊಳ್ಳುವುದು ಶೋಭೆಯಲ್ಲ’ ಎಂದು ಹೇಳಿತು.

‘ಮಾರ್ಚ್‌ 28ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕು. ಅಲ್ಲದೆ, ದಂಡದ ಮೊತ್ತ ಪಾವತಿಸಲು ರೂಪಿಸಿರುವ ಯೋಜನೆಯನ್ನು ಆ ದಿನ ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯದಲ್ಲಿ ನೀವು ಕಾಣಿಸಿಕೊಳ್ಳುವುದು ಆ ದಿನವೇ ಕೊನೆ ಎನ್ನುವ ಭರವಸೆಯನ್ನು ಇಟ್ಟುಕೊಂಡಿದ್ದೇವೆ’ ಎಂದು ಪೀಠವು ಸಿಂಗ್‌ ಸದೋದರರಿಗೆ ಹೇಳಿತು‌.

ಮೆಲ್ವಿಂದರ್‌ ಮತ್ತು ಶಿವಿಂದರ್‌ ಸಿಂಗ್‌ ವಿರುದ್ಧದ ಪ‍್ರಕರಣದಲ್ಲಿ ಸಿಂಗಪುರ ನ್ಯಾಯಮಂಡಳಿ ವಿಧಿಸಿರುವ ₹3,500 ಕೋಟಿ ದಂಡ ವಸೂಲಿ ಮಾಡಿಕೊಡುವಂತೆ ಜಪಾನಿನ ಕಂಪನಿ ಡೈಚಿ ಸ್ಯಾಂಕ್ಯೊ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ.

ಡೈಚಿ ಸ್ಯಾಂಕ್ಯೊ, ಸಿಂಗ್‌ ಸಹೋದರರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದೆ. ಫೋರ್ಟಿಸ್‌ ಹೆಲ್ತ್‌ಕೇರ್‌ನಲ್ಲಿನ ಕೆಲವು ಷೇರುಗಳನ್ನು ಕೊಡುವುದಾಗಿ ಸಿಂಗ್‌ ಸಹೋದರರು ಭರವಸೆ ನೀಡಿದ್ದರು ಎಂದು ಡೈಚಿ ಸ್ಯಾಂಕ್ಯೊ ಹೇಳಿದೆ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು