ಶಬರಿಮಲೆಗೆ ಮಹಿಳೆಯರು: ತೀರ್ಪಿನ ಶೀಘ್ರ ಮರುಪರಿಶೀಲನೆ ಮನವಿ ತಳ್ಳಿಹಾಕಿದ ಸುಪ್ರೀಂ

7

ಶಬರಿಮಲೆಗೆ ಮಹಿಳೆಯರು: ತೀರ್ಪಿನ ಶೀಘ್ರ ಮರುಪರಿಶೀಲನೆ ಮನವಿ ತಳ್ಳಿಹಾಕಿದ ಸುಪ್ರೀಂ

Published:
Updated:

ನವದೆಹಲಿ: ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಶೀಘ್ರ ಆರಂಭಿಸಬೇಕು ಎನ್ನುವ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಳ್ಳಿಹಾಕಿದೆ.

‘ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ನೀಡುವ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನೀಡಿದ ತೀರ್ಪು ಅವೈಜ್ಞಾನಿಕ ಮತ್ತು ಆಧಾರರಹಿತ. ತೀರ್ಪಿನ ಮರುಪರಿಶೀಲನೆ ಮಾಡಬೇಕು’ ಎಂದು ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘದ (ನ್ಯಾಷನಲ್ ಅಯ್ಯಪ್ಪ ಡಿವೋಟಿಸ್ ಅಸೋಸಿಯೇಷನ್) ಅಧ್ಯಕ್ಷೆ ಶೈಲಜಾ ವಿಜಯನ್ ಅವರು ವಕೀಲ ಮ್ಯಾಥ್ಯೂ ಜೆ.ನೆಡುಂಪರಾ ಅವರ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠವು ವಿಚಾರಣೆಗೆ ಅಂಗೀಕರಿಸಿತು.

‘ನಿಮ್ಮ ವಾದವನ್ನು ನಾವು ಆಲಿಸಿದ್ದೇವೆ. ನಿಮ್ಮ ಅರ್ಜಿಯು ಯಾದಿ ಪ್ರಕಾರ ವಿಚಾರಣೆಗೆ ಬರಲಿದೆ’ (We have heard you… The matter will be listed in due course) ಎಂದು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್ ಹೇಳಿದರು.

ನಾಯರ್ ಸೇವಾ ಸಮಾಜ ಮತ್ತು ದೆಹಲಿ ಮೂಲಕ ಚೇತನಾ ಕನ್‌ಸೈನ್ಸ್‌ ಆಫ್ ವುಮೆನ್ ಸಂಸ್ಥೆಗಳೂ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನೆ ಅರ್ಜಿ ಸಲ್ಲಿಸಿದ್ದವು. ‘ಸುಪ್ರೀಂಕೋರ್ಟ್‌ ತನ್ನ ಅಧಿಕಾರ ವ್ಯಾಪ್ತಿಯನ್ನು ಕಾನೂನು ವಲಯಕ್ಕೆ ಸೀಮಿತಗೊಳಿಸಿಕೊಳ್ಳಬೇಕಿತ್ತು. ದೇವಾಲಯ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದಿತ್ತು’ ಎಂದು ನಾಯರ್ ಸೇವಾ ಸಮಾಜವು ತನ್ನ ಅರ್ಜಿಯಲ್ಲಿ ತಿಳಿಸಿದೆ.

‘ಶಬರಿಮಲೆಯಲ್ಲಿರುವ ಈ ಆಚರಣೆಯು ಮಹಿಳೆಯರಿಗೆ ಅಪಮಾನಗೊಳಿಸುವಂತೆ ಇದೆ ಎನ್ನುವ ಅಂಶವನ್ನು ಸುಪ್ರಿಂಕೋರ್ಟ್‌ ತನ್ನ ತೀರ್ಪಿಗೆ ಆಧಾರವಾಗಿ ಉಲ್ಲೇಖಿಸಿದೆ. ಆದರೆ ಮಹಿಳೆಯರು ಶಬರಿಮಲೆಗೆ ಹೋಗದಂತೆ ನಿರ್ಬಂಧಿಸಲು ಅವರ ದೈಹಿಕ ಚಹರೆ ಖಂಡಿತ ಕಾರಣವಲ್ಲ. ನೈಷ್ಟಿಕ ಬ್ರಹ್ಮಚರ್ಯ ಪಾಲಿಸುತ್ತಿರುವ ಮಾಲಾಧಾರಿಗಳಿಗೆ ಈ ನಿರ್ಬಂಧ ವಿಧಿಸಲಾಗಿದೆ’ ಎಂದು ನಾಯರ್ ಸೇವಾ ಸಮಾಜ ತನ್ನ ಅರ್ಜಿಯಲ್ಲಿ ತಿಳಿಸಿದೆ.

ಅಯ್ಯಪ್ಪ ಭಕ್ತರು ಕೇರಳಾದ್ಯಂತ ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎನ್ನುವ ಸುಪ್ರೀಂಕೋರ್ಟ್‌ ಆದೇಶವನ್ನು ಅನುಷ್ಠಾನ ಮಾಡುವ ಮೊದಲು ಸಂಬಂಧಿಸಿದವರೊಡನೆ ಮಾತುಕತೆ ನಡೆಸಬೇಕು ಎನ್ನುವ ಅಭಿಪ್ರಾಯವನ್ನು ಕೇರಳದ ಆಡಳಿತಾರೂಢ ಸಿಪಿಎಂ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ವ್ಯಕ್ತಪಡಿಸಿವೆ.

ಶಬರಿಮಲೆ ದೇಗುಲದ ಆಡಳಿತ ನಿರ್ವಹಿಸುವ ತಿರುವನಂತಪುರಂ ದೇವಸ್ವಂ ಮಂಡಳಿಯ ಪ್ರಧಾನ ಕಚೇರಿ ಎದುರು ಶನಿವಾರ ಭಕ್ತರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸೆ.28ರಂದು ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ‘ಮಹಿಳೆ ಎನ್ನುವ ಕಾರಣ ದೇಗುಲ ಪ್ರವೇಶ ನಿರ್ಬಂಧಿಸುವುದು ಲಿಂಗ ತಾರತಮ್ಯ ಎನಿಸಿಕೊಳ್ಳುತ್ತದೆ. ಇದು ಹಿಂದೂ ಮಹಿಳೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು 4:1 ಬಹುಮತದ ತೀರ್ಪಿನಲ್ಲಿ ಹೇಳಿತ್ತು.

ಸಂಬಂಧಿಸಿದ ಸುದ್ದಿಗಳು

‘ಶಬರಿಮಲೆ ದೇಗುಲಕ್ಕೆ ಮಹಿಳೆಯರು ಹೋಗಬಹುದು’ ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್‌ನಲ್ಲಿ ಶಬರಿಮಲೆ ಪ್ರಕರಣ: ನೀವು ಓದಲೇಬೇಕಾದ 11 ಸುದ್ದಿಗಳು

ಶಬರಿಮಲೆ ಪ್ರತಿಭಟನೆ: ಸುದ್ದಿ ಪ್ರಕಟಿಸಲು ಮಾಧ್ಯಮಗಳ ಮೇಲೆ ಬೆದರಿಕೆ ತಂತ್ರ

ಶಬರಿಮಲೆ: ಮಹಿಳೆಯರಿಗಾಗಿ ಪ್ರತ್ಯೇಕ ಸೌಕರ್ಯ ಭರವಸೆ

ಶಬರಿಮಲೆ ರಕ್ಷಣೆಗೆ ಬುಡಕಟ್ಟು ಜನರ ಕಣ್ಗಾವಲು

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !