ಮಂಗಳವಾರ, ನವೆಂಬರ್ 19, 2019
27 °C

ಅಯೋಧ್ಯೆ ಪ್ರಕರಣ: ಬೆದರಿಕೆ, ಹಲ್ಲೆಗೆ ‘ಸುಪ್ರೀಂ’ ಆಕ್ಷೇಪ

Published:
Updated:

ನವದೆಹಲಿ : ಅಯೋಧ್ಯೆ ವಿವಾದಿತ ನಿವೇಶನ ಪ್ರಕರಣದಲ್ಲಿ ವಕೀಲರಿಗೆ ಬೆದರಿಕೆ ಬರುತ್ತಿರುವುದು ಮತ್ತು ಅರ್ಜಿದಾರರ ಮೇಲೆ ಹಲ್ಲೆ ನಡೆದಿರುವುದು ಒಪ್ಪಿಕೊಳ್ಳುವಂತಹದ್ದಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 22ನೇ ದಿನದ ವಿಚಾರಣೆಯನ್ನು ಗುರುವಾರ ನಡೆಸಿತು.

‘ಈ ಪ್ರಕರಣದಲ್ಲಿ ಮುಸ್ಲಿಮರ ಪರ ವಕಾಲತ್ತು ವಹಿಸುತ್ತಿರುವುದಕ್ಕೆ ನನಗೆ ಬೆದರಿಕೆ ಬರುತ್ತಿವೆ’ ಎಂದು ಸುನ್ನಿ ವಕ್ಫ್ ಮಂಡಳಿ ಮತ್ತು ಇತರ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ಅವರು ಪೀಠದ ಎದುರು ಹೇಳಿದರು.

‘ನನಗೆ ಫೇಸ್‌ಬುಕ್‌ನಲ್ಲಿ ಬೆದರಿಕೆ ಸಂದೇಶಗಳು ಬರುತ್ತಿವೆ. ನಿನ್ನೆ ನನ್ನ ಸಹೋದ್ಯೋಗಿಯನ್ನು ರಸ್ತೆಯಲ್ಲಿ ಕೆಲವರು ತಡೆದು, ಬೆದರಿಕೆ ಹಾಕಿದ್ದಾರೆ. ಕೆಲವೇ ದಿನಗಳ ಹಿಂದೆ ಅರ್ಜಿದಾರರೊಬ್ಬರ ಮೇಲೆ ಹಲ್ಲೆ ನಡೆದಿದೆ. ‘ಸುಪ್ರೀಂ ಕೋರ್ಟ್‌ ನಮ್ಮದೇ, ಹೀಗಾಗಿ ಅಯೋಧ್ಯೆ ತೀರ್ಪೂ ನಮ್ಮ ಪರವಾಗೇ ಬರುತ್ತದೆ’ ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಘೋಷಿಸುತ್ತಿದ್ದಾರೆ. ನ್ಯಾಯಾಲಯದ ಒಳಗೆ ಸೌಹಾರ್ದ ವಾತಾವರಣ ಇದೆ. ಆದರೆ ನ್ಯಾಯಾಲಯದ ಹೊರಗೆ ಪರಿಸ್ಥಿತಿ ಸರಿಯಾಗಿಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ನಿಮಗೆ ಭದ್ರತೆ ಬೇಕೇ’ ಎಂದು ರಾಜೀವ್ ಅವರನ್ನು ಪೀಠವು ಪ್ರಶ್ನಿಸಿತು.

ಆಗ ಅವರು, ಭದ್ರತೆಯ ಅವಶ್ಯಕತೆ ಇಲ್ಲ. ಪೀಠವು ಒಂದು ಮಾತು ಹೇಳಿದರೆ ಸಾಕು. ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದರು.

ಆಗ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು, ಈ ಘಟನೆಗಳು ಒಪ್ಪಿಕೊಳ್ಳುವಂತಹದ್ದಲ್ಲ. ಇಂಥಹದ್ದು ನಡೆಯಬಾರದಿತ್ತು ಎಂದು ಹೇಳಿದರು.

ಮುಸ್ಲಿಮರ ಪರ ವಕಾಲತ್ತು ವಹಿಸಿದ್ದಕ್ಕೆ ರಾಜೀವ್ ಅವರಿಗೆ ಶಾಪ ಹಾಕಿದ್ದ ಎನ್‌.ಷಣ್ಮುಗಂ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ ಹಾಕಿದ್ದ ರಾಜಸ್ಥಾನದ ಸಂಜಯ್ ಕಲಾಲ್ ಬಜರಂಗಿಗೆ ಪೀಠವು ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತು.

ಪ್ರತಿಕ್ರಿಯಿಸಿ (+)