ಬುಧವಾರ, ನವೆಂಬರ್ 13, 2019
28 °C

ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ವಯಸ್ಸಿನ ವಿನಾಯಿತಿ ಇಲ್ಲ: ಸುಪ್ರೀಂ

Published:
Updated:

ನವದೆಹಲಿ: ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ಸೌಲಭ್ಯ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳ ಜನರಿಗೆ (ಇಡಬ್ಲ್ಯುಎಸ್) ವಯೋಮಿತಿಯಲ್ಲಿ ವಿನಾಯಿತಿ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. 

ಇಂತಹ ಪಿಐಎಲ್‌ಗಳನ್ನು ಮಾನ್ಯ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎನ್‌.ವಿ. ರಮಣ, ಸಂಜೀವ್ ಖನ್ನಾ ಹಾಗೂ ಕೃಷ್ಣ ಮುರಾರಿ ಅವರ ಪೀಠ ಹೇಳಿತು.

‘ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಕ್ಕೆ ಸೇರಿದ ಜನರು ಮೀಸಲಾತಿಯ ಜತೆಗೆ ವಯಸ್ಸಿನ ವಿನಾಯಿತಿಯನ್ನೂ ಪಡೆಯುತ್ತಿದ್ದಾರೆ. ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದ ಜನರಿಗೂ ವಯಸ್ಸಿನ ವಿನಾಯಿತಿ ನೀಡಬೇಕು’ ಎಂದು ಮದುರೈನ ಕೆ.ಕೆ. ರಮೇಶ್ ಎಂಬುವರು ತಮ್ಮ ಅರ್ಜಿಯಲ್ಲಿ ಆಗ್ರಹಿಸಿದ್ದರು.

‘ಒಬಿಸಿ ಅಭ್ಯರ್ಥಿಗಳು ನಾಗರಿಕ ಸೇವಾ ಪರೀಕ್ಷೆಗೆ 9 ಬಾರಿ ಪ್ರಯತ್ನಿಸುಬಹದು. ಅವರಿಗೆ ಗರಿಷ್ಠ ವಯೋಮಿತಿ 35 ವರ್ಷ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಆರು ಬಾರಿ ಅವಕಾಶವಿದ್ದು, ಗರಿಷ್ಠ ವಯೋಮಿತಿ 32 ವರ್ಷ. ಆದರೆ ಎಸ್‌ಸಿ, ಎಸ್‌ಟಿ ಸಮುದಾಯಗಳ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಗೆ ಎಷ್ಟು ಬಾರಿ ಬೇಕಾದರೂ ಹಾಜರಾಗಬಹುದು. ಇವರ ಗರಿಷ್ಠ ವಯಸ್ಸನ್ನು 35 ವರ್ಷಕ್ಕೆ ನಿಗದಿಪಡಿಸಲಾಗಿದೆ. ಈ ಪಕ್ಷಪಾತ ಧೋರಣೆ ನಿರಂಕುಶವಾಗಿರುವುದಲ್ಲದೇ, ಮೀಸಲಾತಿ ನೀಡುವ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ’ ಎಂದು ಅರ್ಜಿದಾರರ ಪರ ವಕೀಲ ಸಿ.ಆರ್. ಜಯಸುಕಿನ್ ವಾದ ಮಂಡಿಸಿದರು. 

ಸಂವಿಧಾನಕ್ಕೆ ಮಾಡಲಾದ 103ನೇ ತಿದ್ದುಪಡಿಯು, ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ಶೇ 10ರಷ್ಟು ಮೀಸಲಾತಿ ನೀಡಲು ಅವಕಾಶ ಕೊಟ್ಟಿದೆ. 

ಪ್ರತಿಕ್ರಿಯಿಸಿ (+)