ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಸಿಡಿಸಲು ‘ಸುಪ್ರೀಂ’ ನಿರ್ಬಂಧ

ತಯಾರಿಕೆ, ಮಾರಾಟದ ಮೇಲೂ ಪೂರ್ಣ ಪ್ರಮಾಣದ ನಿಷೇಧ ಹೇರಲು ನಿರಾಕರಣೆ
Last Updated 23 ಅಕ್ಟೋಬರ್ 2018, 20:21 IST
ಅಕ್ಷರ ಗಾತ್ರ
ನವದೆಹಲಿ:ದೇಶದಾದ್ಯಂತ ಪಟಾಕಿ ತಯಾರಿಕೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದೆ. ದೀಪಾವಳಿ ಹಬ್ಬದಲ್ಲಿ ದೇಶದಾದ್ಯಂತ ರಾತ್ರಿ 8ರಿಂದ 10 ಗಂಟೆಯ ಮಧ್ಯೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಅದು ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತ್ತು.

‘ಪಟಾಕಿ ತಯಾರಿಕೆ ಮತ್ತು ಸಿಡಿಸುವುದನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸುವುದು ಸಾಧ್ಯವಿಲ್ಲ. ಸಂವಿಧಾನದ 21ನೇ ವಿಧಿಯು ಪ್ರತಿ ವ್ಯಕ್ತಿಗೂ ಜೀವಿಸುವ ಹಕ್ಕನ್ನು ನೀಡಿದೆ.ಪಟಾಕಿ ಸಿಡಿಸುವುದರಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಆಗುವ ಪರಿಣಾಮಗಳು ಮತ್ತು ಪಟಾಕಿ ತಯಾರಕರು, ಮಾರಾಟಗಾರರ ಜೀವನೋಪಾಯವನ್ನೂ ಗಮನದಲ್ಲಿರಿಸಿಕೊಂಡು ಈ ತೀರ್ಮಾನಕ್ಕೆ ಬಂದಿದ್ದೇವೆ. ಇದೊಂದು ಸಮತೋಲಿತ ಆದೇಶ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

‘2005ರ ತೀರ್ಪಿನಲ್ಲಿ ನಿಗದಿಪಡಿಸಿದ್ದ ಸ್ವರೂಪದ ಪಟಾಕಿಗಳನ್ನು ಮಾತ್ರ ತಯಾರಿಸಬೇಕು ಮತ್ತು ಮಾರಾಟ ಮಾಡಬೇಕು’ ಎಂದು ಪೀಠವು ಸ್ಪಷ್ಟಪಡಿಸಿದೆ.

‘ದೆಹಲಿಯಲ್ಲಿ ನಿಗದಿತ ಪ್ರದೇಶಗಳಲ್ಲಿಸಾಮೂಹಿಕವಾಗಿ ಪಟಾಕಿ ಸಿಡಿಸಬೇಕು. ನಾಲ್ಕೇ ದಿನಗಳಲ್ಲಿ ಅಂತಹ ಜಾಗಗಳನ್ನು ಗುರುತಿಸಬೇಕು. ದೇಶದ ಬೇರೆ ನಗರಗಳಲ್ಲೂ ಇದನ್ನು ಅನುಸರಿಸಲು ಸಾಧ್ಯವೇ ಎಂಬುದನ್ನು ಅಲ್ಲಿನ ಸರ್ಕಾರಗಳು ಪರಿಶೀಲನೆ ನಡೆಸಬೇಕು’ ಎಂದು ಪೀಠ ಹೇಳಿದೆ.

‘ಪಟಾಕಿ ಸಿಡಿಸುವುದರಿಂದ ಜನರ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ’ ಎಂದೂ ಕೇಂದ್ರ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಹೇಳಿದೆ.

‘ಪಟಾಕಿಗಳ ಮೇಲೆ ಪೂರ್ಣಪ್ರಮಾಣದ ನಿಷೇಧ ಹೇರಲಾಗುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ ಹಾಗಾಗಲಿಲ್ಲ’ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ನಿಯಮ ಮೀರಿದರೆ ಕಾನೂನು ಕ್ರಮ

* ಸರ ಪಟಾಕಿ/ಮಾಲೆ ಪಟಾಕಿಗಳ ಸಂಪೂರ್ಣ ನಿಷೇಧ

* 2005ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ ಈ ನಿಯಮಾವಳಿಗಳನ್ನು ‘ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ’ (ಪಿಇಎಸ್‌ಒ) ರೂಪಿಸಿದೆ

* ಈ ನಿಯಮಗಳಿಗೆ ಬದ್ಧವಾಗಿರುವ ಪಟಾಕಿಗಳನ್ನಷ್ಟೇ ತಯಾರಿಸಬೇಕು ಮತ್ತು ಅಂತಹ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಮತ್ತೆ ಹೇಳಿದೆ

* ಶಾಶ್ವತ ಮತ್ತು ತಾತ್ಕಾಲಿಕ ಪರವಾನಗಿ ಪಡೆದವರಿಗಷ್ಟೇ ಮಾರಾಟಕ್ಕೆ ಅವಕಾಶ

* ಅನುಮತಿ ಇಲ್ಲದಂತಹ ಪಟಾಕಿಗಳ ಮಾರಾಟ ನಡೆಯದಂತೆ ನೋಡಿಕೊಳ್ಳುವುದು ಆಯಾ ಪೊಲೀಸ್ ಠಾಣೆಯ ಠಾಣಾಧಿಕಾರಿಯ ಜವಾಬ್ದಾರಿ. ಕರ್ತವ್ಯಲೋಪವಾದರೆ ಠಾಣಾಧಿಕಾರಿಯೇ ಹೊಣೆ ಹೊರಬೇಕಾಗುತ್ತದೆ

* ಇ–ಕಾಮರ್ಸ್ ಕಂಪನಿಗಳು ಪಟಾಕಿಗಳನ್ನು ಮಾರುವಂತಿಲ್ಲ. ಈ ನಿಷೇಧವನ್ನು ಮೀರಿದಂತಹ ಕಂಪನಿಗಳು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ

* ರಾತ್ರಿಯ ಎರಡು ಗಂಟೆ ಅವಧಿಯಲ್ಲಷ್ಟೇ ಪಟಾಕಿ ಸಿಡಿಸಬೇಕು ಎಂಬ ನಿರ್ಬಂಧ ಎಲ್ಲಾ ಹಬ್ಬಗಳಿಗೂ, ಧಾರ್ಮಿಕ ಮತ್ತು ಸಾಮಾಜಿಕ ಸಮಾರಂಭಗಳಿಗೂ ಅನ್ವಯವಾಗುತ್ತದೆ.

ರಾತ್ರಿ 11.55ರಿಂದ 12.30ರವರೆಗೆ:ಹೊಸ ವರ್ಷಾಚರಣೆ ಮತ್ತು ಕ್ರಿಸ್‌ಮಸ್ ಹಬ್ಬದ ವೇಳೆ ಪಟಾಕಿ ಸಿಡಿಸಲು ನಿಗದಿಪಡಿಸಿರುವ ಅವಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT