ಸೋಮವಾರ, ಮಾರ್ಚ್ 1, 2021
31 °C

ರಫೇಲ್‌ಗೆ ತಡೆ: ಮುಂದಿನ ವಾರ ‘ಸುಪ್ರೀಂ’ ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿಸಲು ಭಾರತ ಮಾಡಿಕೊಂಡಿರುವ ಒಪ್ಪಂದಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮುಂದಿನ ವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ.

ಒಪ್ಪಂದದಲ್ಲಿ ಹಲವು ವೈರುಧ್ಯಗಳಿವೆ. ಹಾಗಾಗಿ ಒಪ್ಪಂದಕ್ಕೆ ತಡೆ ನೀಡಲು ಕೋರಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ವಕೀಲ ಎಂ.ಎಲ್‌. ಶರ್ಮಾ ಸಲ್ಲಿಸಿದ ಅರ್ಜಿಗೆ ಸುಪ್ರೀಂ ಕೋರ್ಟ್‌ ಮನ್ನಣೆ ನೀಡಿದೆ. 

ಸಂವಿಧಾನದ 253ನೇ ವಿಧಿ ಅಡಿಯಲ್ಲಿ ಈ ಒಪ್ಪಂದಕ್ಕೆ ಸಂಸತ್ತು ಅಂಗೀಕಾರ ನೀಡಿಲ್ಲ. ಭ್ರಷ್ಟಾಚಾರದ ಫಲವಾಗಿ ಈ ಒಪ್ಪಂದ ರೂಪುಗೊಂಡಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ, ಒಪ್ಪಂದ ಮಾಡಿಕೊಂಡಾಗ ರಕ್ಷಣಾ ಸಚಿವರಾಗಿದ್ದ ಮನೋಹರ ಪರ್‍ರೀಕರ್‌, ಉದ್ಯಮಿ ಅನಿಲ್ ಅಂಬಾನಿ ಮತ್ತು ಫ್ರಾನ್ಸ್‌ನ ಕಂಪನಿ ಡಸಾಲ್ಟ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕು ಎಂದು ಅವರು ಕೋರಿದ್ದಾರೆ. 

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಸ್ವತಂತ್ರ ತನಿಖೆ ನಡೆಯಬೇಕು ಮತ್ತು ಒಪ್ಪಂದದ ವೆಚ್ಚವನ್ನು ಸಂಸತ್ತಿನಲ್ಲಿ ಬಹಿರಂಗಪಡಿಸಬೇಕು ಎಂದು ಕೋರಿ ಕಾಂಗ್ರೆಸ್‌ ಮುಖಂಡ ತೆಹ್ಸೀನ್‌ ಎಸ್‌. ಪೂನಾವಾಲಾ ಅವರು ಇದೇ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ರಕ್ಷಣಾ ಖರೀದಿ ಪ್ರಕ್ರಿಯೆ (ಡಿಪಿಪಿ) ಪ್ರಕಾರ, ಇಂತಹ ಒಪ್ಪಂದಕ್ಕೆ ಮೊದಲು ಕೇಂದ್ರ ಸಂಪುಟದ ಅನುಮೋದನೆ ಅಗತ್ಯ. ಆದರೆ ಈ ಒಪ್ಪಂದ ಮಾಡಿಕೊಳ್ಳುವ ಮೊದಲು ಸಂಪುಟದ ಒಪ್ಪಿಗೆ ಯಾಕೆ ಪಡೆದುಕೊಂಡಿಲ್ಲ ಎಂಬುದನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಈ ಅರ್ಜಿಯಲ್ಲಿ ವಿನಂತಿಸಲಾಗಿತ್ತು. 

ರಫೇಲ್‌ನಿಂದ ಯುದ್ಧ ಸಾಮರ್ಥ್ಯ ಅಪಾರ ಹೆಚ್ಚಳ: ಏರ್ ಮಾರ್ಷಲ್‌ ಎಸ್‌.ಬಿ. ದೇವ್‌

ರಫೇಲ್‌ ಯುದ್ಧ ವಿಮಾನಗಳು ಪೂರೈಕೆಯಾದರೆ ದೇಶದ ಯುದ್ಧ ಸಾಮರ್ಥ್ಯ ಅಭೂತಪೂರ್ವ ಪ್ರಮಾಣದಲ್ಲಿ ಹೆಚ್ಚಲಿದೆ. ಈ ಒಪ್ಪಂದವನ್ನು ಟೀಕಿಸುವವರು ರಕ್ಷಣಾ ಖರೀದಿಯ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ವಾಯುಪಡೆಯು ಉಪಮುಖ್ಯಸ್ಥ ಏರ್ ಮಾರ್ಷಲ್‌ ಎಸ್‌.ಬಿ. ದೇವ್‌ ಹೇಳಿದ್ದಾರೆ ಹೇಳಿದ್ದಾರೆ. 

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ತೇಜಸ್‌ ಅನ್ನು ವಾಯುಪಡೆಗೆ ಪೂರೈಸುವಲ್ಲಿ ಎಚ್‌ಎಎಲ್‌ ವಿಳಂಬ ಮಾಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೇಜಸ್‌ ವಿಮಾನ ತಯಾರಿಕೆಯಲ್ಲಿ ಖಾಸಗಿ ಕಂಪನಿಗಳನ್ನು ಸೇರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. 

ವಾಯುಪಡೆಯಲ್ಲಿ ಯುದ್ಧ ವಿಮಾನಗಳ ಕೊರತೆ ಇದೆ. 42 ತುಕಡಿಗಳು ಮಂಜೂರಾಗಿದ್ದರೂ ಸದ್ಯ ಇರುವುದು 31 ತುಕಡಿಗಳು ಮಾತ್ರ. ಒಂದೊಂದು ತುಕಡಿಯಲ್ಲಿ 16–18 ವಿಮಾನಗಳಿವೆ. 

83 ತೇಜಸ್‌ ಯುದ್ಧ ವಿಮಾನಗಳನ್ನು ಪೂರೈಸುವ ಪ್ರಸ್ತಾವವನ್ನು ಎಚ್‌ಎಎಲ್‌ಗೆ ವಾಯುಪಡೆಯು ಕಳೆದ ಡಿಸೆಂಬರ್‌ನಲ್ಲಿ ಸಲ್ಲಿಸಿದೆ. ಇದು ಸುಮಾರು ₹50 ಸಾವಿರ ಕೋಟಿ ಮೊತ್ತದ ಯೋಜನೆ. ಸದ್ಯಕ್ಕೆ, ಎಚ್‌ಎಎಲ್‌ ವರ್ಷಕ್ಕೆ ಎಂಟು ವಿಮಾನಗಳನ್ನು ತಯಾರಿಸುತ್ತಿದೆ. ಇದನ್ನು 18ಕ್ಕೆ ಏರಿಸಬೇಕು ಎಂದು ವಾಯುಪಡೆ ಒತ್ತಾಯಿಸುತ್ತಿದೆ.

**

ಒಪ್ಪಂದದ ಹಾದಿ

* 126 ರಫೇಲ್‌ ವಿಮಾನ ಪೊರೈಸುವ ಪ್ರಸ್ತಾವವನ್ನು ಹಿಂದಿನ ಯುಪಿಎ ಸರ್ಕಾರವು 2012ರಲ್ಲಿ ಫ್ರಾನ್ಸ್‌ ಮುಂದಿಟ್ಟಿತ್ತು

* ಈ ಪ್ರಸ್ತಾವ ಪ್ರಕಾರ, 18 ವಿಮಾನಗಳನ್ನು ರಫೇಲ್‌ ಕಂಪನಿ ಸಿದ್ಧಪಡಿಸಿ ಪೂರೈಸಬೇಕು, ಉಳಿದ 108 ವಿಮಾನಗಳನ್ನು ಎಚ್‌ಎಎಲ್‌ ತಯಾರಿಸಬೇಕು

* ಇದಕ್ಕಾಗಿ ರಫೇಲ್‌ ಕಂಪನಿಯು ಎಚ್‌ಎಎಲ್‌ಗೆ ತಂತ್ರಜ್ಞಾನ ವರ್ಗಾಯಿಸಬೇಕು

* ಈ ಪ್ರಸ್ತಾವವನ್ನು ಈಗಿನ ಎನ್‌ಡಿಎ ಸರ್ಕಾರ ಕೈಬಿಟ್ಟಿತು

* 2016ರ ಸೆಪ್ಟೆಂಬರ್‌ 23ರಂದು ಫ್ರಾನ್ಸ್‌ ಜತೆಗೆ 36 ರಫೇಲ್‌ ಯುದ್ಧ ವಿಮಾನ ಪೊರೈಕೆಗೆ ಒಪ್ಪಂದ ಮಾಡಿಕೊಂಡಿತು

**

ನಮಗೆ ಈಗ ಬೇಕಿರುವ ಸಾಮರ್ಥ್ಯವನ್ನು ರಫೇಲ್ ಹೊಂದಿದೆ. ಅದನ್ನು ಹಾರಿಸುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇವೆ.

-ಏರ್‌ ಮಾರ್ಷಲ್‌ ಎಸ್‌.ಬಿ.ದೇವ್‌, ವಾಯುಪಡೆ ಉಪಮುಖ್ಯಸ್ಥ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು