ಕಣ್ಗಾವಲು ಮಸೂದೆ: ವಿವರಣೆ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

7

ಕಣ್ಗಾವಲು ಮಸೂದೆ: ವಿವರಣೆ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Published:
Updated:
Prajavani

ನವದೆಹಲಿ: ಸಾರ್ವಜನಿಕರ ಮೇಲೆ ಕಣ್ಗಾವಲು ಇಡಲು ಕೇಂದ್ರ ಸರ್ಕಾರದ 10 ತನಿಖಾ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಕೇಂದ್ರ ಸರ್ಕಾರದ ಡಿ.20ರ ಅಧಿಸೂಚನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಆರು ವಾರಗಳ ಒಳಗೆ ಅಗತ್ಯ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿದೆ. ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎನ್ನುವ ಕೋರಿಕೆಯನ್ನು ತಳ್ಳಿಹಾಕಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಸಂಜಯ್ ಕಿಶನ್ ಕೌಲ್ ಅವರಿದ್ದ ನ್ಯಾಯಪೀಠವು ಆರು ವಾರಗಳ ಒಳಗೆ ಪ್ರತಿಕ್ರಿಯಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ವಕೀಲರಾದ ಎಂ.ಎಲ್.ಶರ್ಮಾ, ಅಮಿತ್ ಸಾಹ್ನಿ, ಶ್ರೇಯಾ ಸಿಂಘಲ್ ಮತ್ತು ಟಿಎಂಸಿ ಶಾಸಕ ಮಹೌ ಮೊಯಿತ್ರಾ ಸೇರಿದಂತೆ ಹಲವರು ‘ಈ ಅಧಿಸೂಚನೆಯ ಮೂಲಕ ಕೇಂದ್ರ ಸರ್ಕಾರ ತನ್ನದೇ ನಾಗರಿಕರ ಮೇಲೆ ಕಣ್ಗಾವಲು ಇರಿಸಲು ಯತ್ನಿಸುತ್ತಿದೆ’ ಎಂದು ದೂರಿ, ಸುಪ್ರಿಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘2009ರ ತಿದ್ದುಪಡಿ ಇಂಥ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ನೀವು ಆಗಲೇ ಏಕೆ ಪ್ರಶ್ನಿಸಲಿಲ್ಲ’ ಎಂದು ಸುಪ್ರೀಂಕೋರ್ಟ್‌ ಅರ್ಜಿದಾರರನ್ನು ಪ್ರಶ್ನಿಸಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಕೆ.ವಿ.ವಿಶ್ವನಾಥನ್, ‘ಮಾಹಿತಿ ತಂತ್ರಜ್ಞಾನದ ನಿಯಮಗಳನ್ನು ಖಾಸಗಿತನದ ರಕ್ಷಣೆ ಕುರಿತು ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದ ಹಿನ್ನೆಲೆಯಲ್ಲಿ 2008ರಲ್ಲಿ ಒಂಬತ್ತು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠವು ನೀಡಿದ ತೀರ್ಪಿನ ಆಧಾರದ ಮೇಲೆ ಪರಿಶೀಲಿಸಬೇಕು’ ಎಂದು ಮನವಿ ಮಾಡಿಕೊಂಡರು.

ವಾದ ಆಲಿಸಿದ ನ್ಯಾಯಾಲಯವು ಅಧಿಸೋಚನೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಸರ್ಕಾರವು ಆರು ವಾರಗಳ ಒಳಗೆ ವಿವರಣೆ ನೀಡಬೇಕು ಎಂದು ಸೂಚಿಸಿತು.

2008ರಲ್ಲಿ ತಿದ್ದುಪಡಿಯಾದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೇಶದ ಸಮಗ್ರತೆ, ಭದ್ರತೆ ಸೇರಿದಂತೆ ಕೆಲ ಮುಖ್ಯ ಸಂದರ್ಭಗಳಲ್ಲಿ ಖಾಸಗಿ ಮಾಹಿತಿ ಸಂಗ್ರಹಿಸುವ ನಿರ್ದೇಶನ ನೀಡಲು ಅಧಿಕಾರ ನೀಡಿದೆ. ಆದರೆ ಸರ್ಕಾರಗಳು ತನಿಖಾ ಸಂಸ್ಥೆಗಳಿಗೆ ಇಂಥ ಸೂಚನೆ ನೀಡುವ ಮುನ್ನ ಲಿಖಿತ ರೂಪದಲ್ಲಿ ಕಾರಣಗಳನ್ನು ದಾಖಲಿಸಬೇಕು ಎನ್ನುವ ನಿಯಮ ಜಾರಿಯಲ್ಲಿದೆ.

ಆದರೆ ಡಿ.20ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ಯಾವುದೇ ಕಾರಣಗಳನ್ನು ದಾಖಲಿಸಿಲ್ಲ. ಸುಮ್ಮನೆ ಇಂಥದ್ದೊಂದು ಆದೇಶ ಹೊರಡಿಸುವುದು ಎಂದರೆ ಯಾರ ಕಂಪ್ಯೂಟರನ್ನು ಬೇಕಾದರೂ ತನಿಖಾ ಸಂಸ್ಥೆಗಳು ಕಣ್ಗಾವಲಿನಲ್ಲಿ ಇರಿಸಿಕೊಳ್ಳಬಹುದಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಭಾರತೀಯರ ಖಾಸಗಿತನವು ಸಂವಿಧಾನದ 21ನೇ ಪರಿಚ್ಛೇದದಲ್ಲಿರುವ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಸರ್ಕಾರದ ಅಧಿಸೂಚನೆಯು ಸಂವಿಧಾನದ ಆಶಯವನ್ನು ಉಲ್ಲಂಘಿಸುತ್ತದೆ. ಭಾರತೀಯರ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಳ್ಳುತ್ತದೆ. ಸಾರಾಸಗಟಾಗಿ ಕಣ್ಗಾವಲಿಗೆ ಅವಕಾಶ ಮಾಡಿಕೊಡುವುದು ಕೆಟ್ಟ ಕಾನೂನು ಆಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

‘ಎಲ್ಲ ದೇಶವಾಸಿಗಳನ್ನೂ ಸರ್ಕಾರ ಅಪರಾಧಿಗಳಂತೆ ಕಾಣಲು ಸಾಧ್ಯವಿಲ್ಲ. ಇದು ಸಂವಿಧಾನದ ಮತ್ತು ಸುಪ್ರಿಂಕೋರ್ಟ್‌ ಕಾಲಕಾಲಕ್ಕೆ ನೀಡಿರುವ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಈ ಅಧಿಸೂಚನೆಯನ್ನು ರದ್ದುಪಡಿಸಿ, ಜನರ ಖಾಸಗಿತನದ ಹಕ್ಕನ್ನು ಗೌರವಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !