ಸ್ಥಾನ ಸಿಕ್ಕರೂ ಪೂರ್ಣಾಧಿಕಾರ ಇಲ್ಲ

7
ಸಿಬಿಐ ನಿರ್ದೇಶಕ ವರ್ಮಾ ಕಡ್ಡಾಯ ರಜೆ ಆದೇಶ ರದ್ದು

ಸ್ಥಾನ ಸಿಕ್ಕರೂ ಪೂರ್ಣಾಧಿಕಾರ ಇಲ್ಲ

Published:
Updated:

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ದೀರ್ಘ ರಜೆಯ ಮೇಲೆ ಕಳುಹಿಸಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಆದರೆ ವರ್ಮಾ ವಿರುದ್ಧದ ಆರೋಪಗಳ ಕುರಿತು ಸಿವಿಸಿ ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೂ, ಅವರು ಯಾವುದೇ ಹೊಸ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ.

ವರ್ಮಾ ವಿರುದ್ಧದ ಆರೋಪಗಳ ತನಿಖೆಯ ನಂತರದ ತೀರ್ಮಾನವನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ಉನ್ನತ ಸಮಿತಿಯೇ ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿದೆ.

ವರ್ಮಾ ಅವರ ಅಧಿಕಾರದ ಅವಧಿ ಜನವರಿ 31ಕ್ಕೆ ಕೊನೆಯಾಗುತ್ತದೆ. ಹೀಗಾಗಿ ಒಂದು ವಾರದ ಒಳಗೆ ಸಮಿತಿಯು ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಆಂತರಿಕ ಕಲಹದ ಕಾರಣ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಕೇಂದ್ರ ಸರ್ಕಾರವು 2018ರ ಅಕ್ಟೋಬರ್ 23ರಂದು ಆದೇಶಿಸಿತ್ತು.

ಅವಧಿಗೂ ಮುನ್ನವೇ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಈ ಆದೇಶದ ವಿರುದ್ಧ ಅಲೋಕ್ ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

**

ಸಿಬಿಐ ನಿರ್ದೇಶಕರ ಅಧಿಕಾರದ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ಸರ್ಕಾರವು ಉನ್ನತ ಸಮಿತಿಯ ಅನುಮತಿ ಪಡೆಯಲೇಬೇಕು

-ಸುಪ್ರೀಂ ಕೋರ್ಟ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !