ಗುರುವಾರ , ಫೆಬ್ರವರಿ 20, 2020
28 °C
ಬಡ್ತಿ ಮೀಸಲಾತಿ; ‘ಸುಪ್ರೀಂ’ ಅಂತಿಮ ವಿಚಾರಣೆ ಆರಂಭ

ನ್ಯಾಯಾಂಗದ ಅಧಿಕಾರ ಕಿತ್ತುಕೊಳ್ಳಲು ನೂತನ ಕಾಯ್ದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ’ ಕರ್ನಾಟಕ ಸರ್ಕಾರದ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಯ ಅಂತಿಮ ಹಂತದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಆರಂಭವಾಯಿತು.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌ ಹಾಗೂ ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠದೆದುರು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್‌ ಧವನ್‌, ‘ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆ ರದ್ದುಪಡಿಸಿ 2017ರ ಫೆಬ್ರುವರಿ 9ರಂದು ನೀಡಲಾದ ತೀರ್ಪು ಸಮರ್ಪಕವಾಗಿ ಜಾರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಕೋರಿದರು.

ತೀರ್ಪಿನ ಜಾರಿಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆಗೆ ಒಳಗಾಗಿದೆ. ನಂತರ ರಾಜ್ಯದ ಮುಖ್ಯ ಕಾರ್ಯದರ್ಶಿಯವರನ್ನೇ ವಿಚಾರಣೆಗೆ ಕರೆದಿದ್ದರಿಂದ ಈ ಕುರಿತು ಅಸ್ಪಷ್ಟವಾದ ಹೇಳಿಕೆ ನೀಡಿ ನುಣುಚಿಕೊಂಡಿದೆ ಎಂದು ಅವರು ದೂರಿದರು.

ನೂತನ ಕಾಯ್ದೆಯ ಜಾರಿಗೆ ಮುಂದಾಗದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ ಎಂಬ ಮೌಖಿಕ ಭರವಸೆಯನ್ನು ಕಳೆದ ಜುಲೈ 27ರಂದು ಸರ್ಕಾರ ನ್ಯಾಯಾಲಯಕ್ಕೆ ಕೊಟ್ಟಿತ್ತು. ಆದರೆ ಈ ತಿಂಗಳ 12ರಂದು ನಡೆದಿದ್ದ ವಿಚಾರಣೆಯ ವೇಳೆ, ಆ ಭರವಸೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ ಎಂದು ಅವರು ಹೇಳಿದರು.

ನ್ಯಾಯಾಂಗದ ವಿರುದ್ಧ ನಿರ್ಧಾರ:
ನೂತನ ಕಾಯ್ದೆಯು ತಾರತಮ್ಯದಿಂದ ಕೂಡಿದ್ದು, ನ್ಯಾಯಾಂಗದ ಅಧಿಕಾರವನ್ನು ಕಿತ್ತುಕೊಳ್ಳುವ ಶಾಸಕಾಂಗದ ನಿರ್ಧಾರವಾಗಿದೆ. ಎಂ.ನಾಗರಾಜ್‌ ಪ್ರಕರಣದಲ್ಲಿ ಸಂವಿಧಾನ ಪೀಠವು ಸೆಪ್ಟೆಂಬರ್‌ 26ರಂದು ನೀಡಿದ್ದ ತೀರ್ಪಿನ ವ್ಯಾಪ್ತಿಯಲ್ಲಿ ಈ ಪ್ರಕರಣವೂ ಒಳಪಡಲಿದೆ ಎಂದು ಧವನ್‌ ಹೇಳಿದರು.

‘ಬಡ್ತಿ ಹುದ್ದೆಗಳಲ್ಲಿ ಪರಿಶಿಷ್ಟ ಸಮುದಾಯದ ನೌಕರರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲ ಎಂಬ ಕಾರಣ ನೀಡಿ, ಕಿರಿಯರಾಗಿದ್ದರೂ ಸಾಂದರ್ಭಿಕ ಹಿರಿತನ ನೀಡಿ, ಇತರರಿಗೆ ಬಡ್ತಿಯನ್ನು ನಿರಾಕರಿಸುವುದು ಸರಿಯಲ್ಲ ಎಂದು ಬಿ.ಕೆ. ಪವಿತ್ರ ಪ್ರಕರಣದಲ್ಲಿ ನೀಡಲಾದ ತೀರ್ಪಿನಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ’ ಎಂದು ಅವರು ವಿವರಿಸಿದರು.

‘ನೇಮಕಾತಿಯಲ್ಲಿ ಮೀಸಲಾತಿ ನೀಡುವುದಕ್ಕೆ, ರೋಸ್ಟರ್‌ ಮತ್ತು ಬ್ಯಾಕ್‌ಲಾಗ್‌ ವಿಧಾನಕ್ಕೆ ನಮ್ಮ ವಿರೋಧವಿಲ್ಲ. ನೇರ ನೇಮಕಾತಿ ಪದ್ಧತಿ ಮತ್ತು ಕೆಳ ಹಂತದ ನೌಕರರ ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸಲು ಹಿಂದುಳಿದಿರುವಿಕೆ ಪರಿಗಣಿಸುವುದು, ಕೆನೆಪದರದ ಮಾನದಂಡ ಅನುಸರಿಸುವುದಕ್ಕೆ ಯಾರ ವಿರೋಧವೂ ಇಲ್ಲ’ ಎಂದು ಸುದೀರ್ಘ ವಾದದಲ್ಲಿ ಅವರು ಒತ್ತಿಹೇಳಿದರು.

ಬುಧವಾರವೂ ಧವನ್‌ ಅವರಿಗೆ ವಾದ ಮಂಡಿಸಲು ಅವಕಾಶ ನೀಡಿರುವ ನ್ಯಾಯಪೀಠವು, ಬಳಿಕ ಇತರ ಅರ್ಜಿದಾರರ ಪರ ವಕೀಲರಿಗೆ ವಾದ ಮಂಡನೆಗೆ ಅವಕಾಶ ನೀಡಲಿದೆ. ಗುರುವಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಪರ ವಕೀಲೆ ಇಂದಿರಾ ಜೈಸಿಂಗ್‌ ಹಾಗೂ ಶುಕ್ರವಾರ ರಾಜ್ಯ ಸರ್ಕಾರದ ಪರ ವಕೀಲ ಮುಕುಲ್‌ ರೋಹಟ್ಗಿ ವಾದ ಮಂಡಿಸಲಿದ್ದಾರೆ.

ರಾಜ್ಯ ಸರ್ಕಾರದ ನೂತನ ಕಾಯ್ದೆಯ ಜಾರಿಗೆ ನಿರ್ದೇಶನ ನೀಡುವಂತೆ ಕೋರಿ ಎಸ್‌.ಸಿ/ಎಸ್‌.ಟಿ ನೌಕರರ ಒಕ್ಕೂಟ ಸೋಮವಾರ ಸಲ್ಲಿಸಿರುವ ಮೇಲ್ಮನವಿಯೂ ಇದೇ ವೇಳೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು