ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸುಧಾಕರ್ ವಿರುದ್ಧ ನಗರಸಭಾ ಸದಸ್ಯರ ವಾಗ್ದಾಳಿ

Last Updated 27 ಮಾರ್ಚ್ 2018, 7:08 IST
ಅಕ್ಷರ ಗಾತ್ರ

ಹಿರಿಯೂರು: ಡಿ. 28ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ಮಾಡಿಸಿದ್ದ ಕಾಮಗಾರಿಗಳಿಗೆ ಶಾಸಕ ಡಿ. ಸುಧಾಕರ್ ಮತ್ತೊಮ್ಮೆ ಶಂಕುಸ್ಥಾಪನೆ ಮಾಡಿರುವುದು ಹಾಸ್ಯಾಸ್ಪದ ಸಂಗತಿ ಎಂದು ನಗರಸಭಾಧ್ಯಕ್ಷ ಟಿ. ಚಂದ್ರಶೇಖರ್ ಟೀಕಿಸಿದರು.

ಸೋಮವಾರ ಶಾಸಕ ಡಿ. ಸುಧಾಕರ್ ನೇತೃತ್ವದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭಕ್ಕೆ ನಗರಸಭೆ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದಿರುವ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರೋತ್ಥಾನ ಯೋಜನೆಯಡಿ ₹ 36.61 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವ ಸಮಾರಂಭದಿಂದ ನಗರಸಭೆಯ  ಪ್ರತಿನಿಧಿಗಳನ್ನು ಹೊರಗಿಟ್ಟಿರುವುದು ಏಕೆ? ಈಗಾಗಲೇ ಮುಖ್ಯಮಂತ್ರಿ ಗುದ್ದಲಿ ಪೂಜೆ ಮಾಡಿ ಹೋಗಿರುವ ಕಾಮಗಾರಿಗಳಿಗೆ ಮತ್ತೆ ಪೂಜೆ ಮಾಡುತ್ತಿರುವುದರ ಹಿಂದಿನ ಮರ್ಮವೇನು?  ಎಂದು ಅವರು ಪ್ರಶ್ನಿಸಿದರು.

‘2008 ರಲ್ಲಿ ಮೊದಲ ಬಾರಿ ಶಾಸಕರಾಗಿದ್ದಾಗ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುವ ಭರವಸೆ ನೀಡಿದ್ದರು. ಹತ್ತು ವರ್ಷ ಕಳೆದರೂ ಮಾತಿನಂತೆ ನಡೆದುಕೊಂಡಿಲ್ಲ. ಸಿ.ಎಂ ಕಾರ್ಯಕ್ರಮದಲ್ಲಿ 1,269 ಬಡವರಿಗೆ ನಿವೇಶನ ಹಕ್ಕುಪತ್ರ ಕೊಡುತ್ತೇವೆ ಎಂದು ಬಡಪಾಯಿ ಜನರನ್ನು ಕರೆಸಿ ಹಕ್ಕುಪತ್ರ ಕೊಡದೇ ಕಳಿಸಿದ್ದು ಸಭೆಗೆ ಜನರನ್ನು ಸೇರಿಸುವ ತಂತ್ರವಲ್ಲವೇ? 6,000 ಬಡವರು ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದು, ಒಬ್ಬರಿಗೂ ಹಕ್ಕುಪತ್ರ ನೀಡಿಲ್ಲ’ ಎಂದು ದೂರಿದರು.

‘ರಸ್ತೆ ವಿಸ್ತರಣೆ ಕುರಿತ ಸಭೆಗಳಿಗೆ ನಮಗೆ ಎಂದೂ ಆಹ್ವಾನ ಕೊಟ್ಟಿಲ್ಲ. ನಿರ್ಮಿತಿ ಕೇಂದ್ರದವರಿಗೆ ಕಾಮಗಾರಿ ಕೊಡದೇ ಇದ್ದುದಕ್ಕೆ ನಮ್ಮ ಮೇಲೆ ಶಾಸಕರಿಗೆ ಅಪಾರ ಸಿಟ್ಟಿದೆ’ ಎಂದು ಸದಸ್ಯ ಪ್ರೇಮ್ ಕುಮಾರ್ ಆರೋಪಿಸಿದರು.

ನಗರದ ಅಭಿವೃದ್ಧಿಗೆ ಶಾಸಕರ ಕೊಡುಗೆ ಶೂನ್ಯ. ಹಿಂದೂಗಳಿಗೆ ಒಂದು ರುದ್ರಭೂಮಿ ಕೊಡಲಿಲ್ಲ. ಬಡವರಿಗೆ ನಿವೇಶನ ಕೊಡಲಿಲ್ಲ. ಲಕ್ಕವ್ವನಹಳ್ಳಿ ಒಡ್ಡು ಅಭಿವೃದ್ಧಿ ಪಡಿಸುವ ಕ್ರಿಯಾ ಯೋಜನೆಗೆ ಅಡ್ಡಿಪಡಿಸಿದರು. ತನಗೆ ಜಾತಿ ಇಲ್ಲ ಎನ್ನುವ ಶಾಸಕರು ಮಹಾನ್ ಜಾತಿವಾದಿ. ಕಾಡುಗೊಲ್ಲರ ಹಟ್ಟಿಗಳ ನೆನಪು ಹತ್ತು ವರ್ಷದ ನಂತರ ಅವರಿಗೆ ಬಂದಿದೆ ಎಂದು ಅವರು ಟೀಕಿಸಿದರು.

‘ಜನರಿಂದ ಚುನಾಯಿತರಾಗಿರುವ ನಮ್ಮನ್ನು ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿ ಶಂಕುಸ್ಥಾಪನೆಗೆ ಆಹ್ವಾನಿಸದಿರುವುದು ಬೇಸರದ ಸಂಗತಿ. ಇದಕ್ಕೆ ಬೇಕಿರುವ ಹಣವನ್ನು ಕೊಟ್ಟಿರುವುದು ಸರ್ಕಾರ.  ಆಗದ ಕೆಲಸಗಳಿಗೆ ಪೂಜೆ ಮಾಡಿ ‘ಗುದ್ದಲಿ ಪೂಜೆ ಶಾಸಕ’ ಆಗುವುದು ಬೇಡ’ ಎಂದು ಸಭೆಯಲ್ಲಿದ್ದ ತಿಮ್ಮರಾಜು, ಚಿರಂಜೀವಿ, ವನಿತಾ, ಲಕ್ಷ್ಮೀದೇವಿ, ಉಷಾದೇವಿ, ಮಂಜುಳಾ, ಶಿವಣ್ಣ ಕುಹಕವಾಡಿದರು.

ಉಪಾಧ್ಯಕ್ಷೆ ಇಮ್ರಾನಬಾನು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT