ವ್ಯಭಿಚಾರಕ್ಕೆ ಶಿಕ್ಷೆ ಕಾಯ್ದೆ ಅಸಾಂವಿಧಾನಿಕ

7
ಐಪಿಸಿ ಸೆಕ್ಷನ್‌ 497 ಲಿಂಗ ತಾರತಮ್ಯದಿಂದ ಕೂಡಿದೆ: ಸುಪ್ರೀಂ ಕೋರ್ಟ್‌

ವ್ಯಭಿಚಾರಕ್ಕೆ ಶಿಕ್ಷೆ ಕಾಯ್ದೆ ಅಸಾಂವಿಧಾನಿಕ

Published:
Updated:

ನವದೆಹಲಿ: ವೈವಾಹಿಕ ಬಂಧದ ಪಾವಿತ್ರ್ಯ ಕಾಪಾಡಲು ಹಾದರಕ್ಕೆ ಶಿಕ್ಷೆ ವಿಧಿಸುವ ಕಾನೂನು ಅಗತ್ಯ ಎಂದು ಕೇಂದ್ರ ಸರ್ಕಾರ ನೀಡಿದ ಹೇಳಿಕೆಯನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿಲ್ಲ. ಇದು ಅಷ್ಟೊಂದು ಸಮರ್ಪಕ ಎನಿಸುವ ವಾದ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಹೇಳಿದೆ.

ಮದುವೆಯಾಗಿರುವ ಪುರುಷನೊಬ್ಬ ಅವಿವಾಹಿತ ಮಹಿಳೆಯ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಅದರಲ್ಲಿ ಅಪರಾಧವೇನೂ ಇಲ್ಲ. ವೈವಾಹಿಕ ಸಂಬಂಧದ ಪಾವಿತ್ರ್ಯ ಉಳಿಸಿಕೊಳ್ಳುವುದು ಮುಖ್ಯ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ, ಹಾದರಕ್ಕೆ ಶಿಕ್ಷೆ ವಿಧಿಸುವ ನಿಯಮವು ಗಂಡು ಮತ್ತು ಹೆಣ್ಣನ್ನು ತಾರತಮ್ಯದಿಂದ ನೋಡುತ್ತದೆ. ಹಾಗಾಗಿ ಇದು ಸಮಾನತೆಯ ಹಕ್ಕಿನ ಉಲ್ಲಂಘನೆಯ ನಿಯಮವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. 

ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 497ನೇ ಸೆಕ್ಷನ್‌ ಅನ್ನು ಪ್ರಶ್ನಿಸಿ ಜೋಸೆಫ್‌ ಶೈನ್‌ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

‘ನಮ್ಮ ಸಮಾಜದಲ್ಲಿ ವಿಚ್ಛೇದನ ಪ್ರಕ್ರಿಯೆಯು 30–40 ವರ್ಷ ತೆಗೆದುಕೊಳ್ಳುತ್ತದೆ. ಹೀಗಿರುವಾಗ ವಿವಾಹದ ಹೊರಗೆ ಘನತೆಯಿಂದ ಬದುಕುವ ಮತ್ತು ಸಂಬಂಧದಲ್ಲಿ ನೆಮ್ಮದಿ ಪಡೆದುಕೊಳ್ಳುವ ಮಹಿಳೆಯ ಹಕ್ಕನ್ನು ನಿರಾಕರಿಸಲು ಸಾಧ್ಯವೇ’ ಎಂದು ಪೀಠದಲ್ಲಿರುವ ನ್ಯಾಯಮೂರ್ತಿ ಚಂದ್ರಚೂಡ್‌ ಪ್ರಶ್ನಿಸಿದ್ದಾರೆ.

‘ನಾವು ಇದನ್ನು ಒಪ್ಪಿಕೊಂಡರೂ ಇಲ್ಲದಿದ್ದರೂ ಸಮಾಜವು ತನ್ನ ಪಾಡಿಗೆ ಮುಂದುವರಿಯುತ್ತದೆ’ ಎಂದು ಅವರು ಹೇಳಿದ್ದಾರೆ. 

ಸಂಬಂಧಗಳು ಮತ್ತು ಲೈಂಗಿಕ ಸ್ವಾಯತ್ತೆಯನ್ನು ಹಕ್ಕು ಎಂದು ಪರಿಗಣಿಸುವ ಖಾಸಗಿತನದ ಹಕ್ಕಿನ ತೀರ್ಪನ್ನು ಇಲ್ಲಿ ಮಾನದಂಡವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಹಾದರವನ್ನು ವಿಚ್ಛೇದನಕ್ಕೆ ಕಾರಣವಾಗಿ ಉಲ್ಲೇಖಿಸಲು ಅವಕಾಶ ಇದೆ ಎಂದು ದೀಪಕ್‌ ಮಿಶ್ರಾ ಅಭಿಪ್ರಾಯಪಟ್ಟರು. 

ಗಂಡನ ಅನುಮತಿ ಅಥವಾ ಸಮ್ಮತಿಯೊಂದಿಗೆ ಹೆಂಡತಿಯು ವಿವಾಹೇತರ ಲೈಂಗಿಕ ಸಂಬಂಧಗಳನ್ನು ಹೊಂದಿರುವುದು ಅಪರಾಧ ಅಲ್ಲ ಎಂದು ಐಪಿಸಿಯ 497ನೇ ಸೆಕ್ಷನ್‌ ಹೇಳುತ್ತದೆ ಎಂಬುದರತ್ತ ಪೀಠವು ಗಮನ ಹರಿಸಿತು. 

ಬೇರೆ ವ್ಯಕ್ತಿಯ ಜತೆಗೆ ಹೆಂಡತಿಯ ಲೈಂಗಿಕ ಸಂಬಂಧದ ಸ್ವರೂಪ ಏನು ಎಂಬುದು ಗಂಡ ಒಪ್ಪಿಗೆ ಕೊಟ್ಟಿದ್ದಾನೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿದೆ. ಹೀಗಾಗಿ ಈ ಸೆಕ್ಷನ್‌ ಮಹಿಳೆಯನ್ನು ಗಂಡಿನ ಸೊತ್ತು ಎಂದು ಪರಿಗಣಿಸುತ್ತದೆ ಎಂದು ಪೀಠ ಹೇಳಿದೆ. 

ಕೋರ್ಟ್‌ ಹೇಳಿದ್ದೇನು?

* ವಿವಾಹೇತರ ಸಂಬಂಧವೇ ಮದುವೆ ಮುರಿದು ಬಿದ್ದಿದೆ ಎಂಬುದರ ಸೂಚನೆ

* ಮಹಿಳೆಗೆ ಲೈಂಗಿಕ ಸಂಪರ್ಕ ಬೇಡ ಎನ್ನುವುದರ ಜತೆಗೆ ಲೈಂಗಿಕ ಸ್ವಾಯತ್ತೆಯೂ ಇದೆ

* ಮದುವೆಯ  ಕಾರಣಕ್ಕೆ ಮಹಿಳೆಯ ಲೈಂಗಿಕ ಸ್ವಾಯತ್ತೆಯ ಹಕ್ಕು ಮೊಟಕಾಗದು

ಐಪಿಸಿ ಸೆಕ್ಷನ್‌ 497 ಏನು ಹೇಳುತ್ತದೆ?

ಇನ್ನೊಬ್ಬನ ಹೆಂಡತಿಯ ಜತೆಗೆ ಆತನ ಸಹಮತ ಇಲ್ಲದೆ ಲೈಂಗಿಕ ಸಂಪರ್ಕ ನಡೆಸುವುದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು. ಆದರೆ ಇದು ಶಿಕ್ಷಾರ್ಹ ಅಪರಾಧ. ಈ ಅಪರಾಧಕ್ಕೆ ಐದು ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸುವುದಕ್ಕೆ ಅವಕಾಶ ಇದೆ. ಇಂತಹ ಪ್ರಕರಣದಲ್ಲಿ ಹೆಂಡತಿಗೆ ಶಿಕ್ಷೆ ಕೊಡಲು ಅವಕಾಶ ಇಲ್ಲ ಎಂದು ಸೆಕ್ಷನ್‌ 497 ಹೇಳುತ್ತದೆ. 

ಕೇಂದ್ರದ ನಿಲುವು ಏನು

ವ್ಯಭಿಚಾರಕ್ಕೆ ಇರುವ ಶಿಕ್ಷೆಯನ್ನು ರದ್ದುಪಡಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ. ಹೀಗೆ ಮಾಡಿದರೆ ಅದು ವಿವಾಹ ಎಂಬ ಸಾಮಾಜಿಕ ಸಂಸ್ಥೆಯನ್ನು ನಾಶಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಹೇಳಿತ್ತು.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !